ಸಕಾಲ ಯೋಜನೆಯ ಸದುಪಯೋಗ ಪಡೆದುಕೊಳ್ಳಲು ಸಲಹೆ

ಚಿತ್ರದುರ್ಗ, ಡಿ.19; ಸಕಾಲ ಯೋಜನೆಯ ಸದುಪಯೋಗ ಪಡೆದುಕೊಳ್ಳುವಂತೆ  ಜಿಲ್ಲಾ ಸಕಾಲ ಸಮಾಲೋಚಕರಾದ ಆದರ್ಶ್ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ನಗರದ ಸರ್ಕಾರಿ ವಿಜ್ಞಾನ ಕಾಲೇಜಿನಲ್ಲಿ  ಸಕಾಲ ಮಿಷನ್ ವತಿಯಿಂದ ಹಮ್ಮಿಕೊಂಡಿದ್ದ ಸಕಾಲ ಸಪ್ತಾಹ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಇ-ಆಡಳಿತ ಜಿಲ್ಲಾ ಯೋಜನಾ ವ್ಯವಸ್ಥಾಪಕರಾದ ಹೆಚ್.ಎನ್.ಸಮರ್ಥ್ ಮಾತನಾಡಿ, ವಿದ್ಯಾರ್ಥಿಗಳಿಗೆ ಸೇವಾಸಿಂಧು ಆಪ್‍ನ ಸದುಪಯೋಗ ಪಡಿಸಿಕೊಳ್ಳುವಂತೆ ಸೂಚನೆ ನೀಡಿದ ಅವರು, ಅದಕ್ಕಿರುವ ತೊಡಕುಗಳನ್ನು ನಿವಾರಿಸಲು ಬೇಕಾದ ಸಮರ್ಪಕ ಮಾಹಿತಿ ನೀಡಿದರು. ಸರ್ಕಾರ ರೂಪಿಸಿರುವ ಈ ಯೊಜನೆಯನ್ನು ಸಮರ್ಥವಾಗಿ ಬಳಸಿಕೊಳ್ಳಲು ಎಲ್ಲರೂ ಸನ್ನದ್ಧರಾಗಿರಬೇಕು. ಇದೇ ವೇಳೆ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರ ಜೊತೆ ಸಮಾಲೋಚನೆ ನಡೆಸಿ ಅವರ ಅನುಮಾನಗಳಿಗೆ ಉತ್ತರಿಸಿದರು. ಸೇವಾ ಸಿಂಧು ಆನ್‍ಲೈನ್ ಆಪ್‍ನ ಸಂಪೂರ್ಣ ವಿವರ ನೀಡಿದರು.  
ಕಾಲೇಜಿನ ಐಕ್ಯೂಎಸಿ ಸಹ ಸಂಯೋಜಕ ಡಾ.ಡಿ.ನಾಗರಾಜ್ ಮಾತನಾಡಿ, ಸಕಾಲ ಯೋಜನೆ ವೈಜ್ಞಾನಿಕ ಹಾಗೂ ಪಾರದರ್ಶಕವಾಗಿದೆ. ತಾವೂ ಸಕಾಲ ಯೋಜನೆಯ ಫಲಾನುಭವಿ ಎಂದು ಹೇಳಿದರು.
ಕಾಲೇಜಿನ ಪ್ರಾಂಶುಪಾಲ ಪ್ರೊ.ಆರ್.ಕೆ.ರಂಗಸ್ವಾಮಿ ಮಾತನಾಡಿ, ವಿದ್ಯಾರ್ಥಿಗಳಿಗೆ ಸೇವಾ ಸಿಂಧು ಆಪ್ ಅನ್ನು ತಮ್ಮ ಮೊಬೈಲ್ ಫೋನುಗಳಲ್ಲಿ ಹೊಂದಿರುವುದು ಕಡ್ಡಾಯ ಎಂದು ಭಾವಿಸಿ, ಅದನ್ನು ಹೆಚ್ಚು ಸದುಪಯೋಗ ಪಡಿಸಿಕೊಳ್ಳುವಂತೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಸರ್ಕಾರಿ ವಿಜ್ಞಾನ ಕಾಲೇಜಿನ ಸಕಾಲ ಮಿಷನ್‍ನ ಸಂಚಾಲಕ ಡಾ.ವೈ.ಟಿ.ರವಿಕಿರಣ್, ಉಪಪ್ರಾಂಶುಪಾಲ ಡಾ.ಗೋಪಾಲಪ್ಪ, ಪತ್ರಾಂಕಿತ ವ್ಯವಸ್ಥಾಪಕ ಹೇಮಂತರಾಜು ಸೇರಿಂತೆ ಅಧ್ಯಾಪಕ ವರ್ಗ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಫೋಟೋ ವಿವರ: ಚಿತ್ರದುರ್ಗ ಸರ್ಕಾರಿ ವಿಜ್ಞಾನ ಕಾಲೇಜಿನಲ್ಲಿ ಶುಕ್ರವಾರ ಸಕಾಲ ಮಿಷನ್ ವತಿಯಿಂದ ಸಕಾಲ ಸಪ್ತಾಹ ಕಾರ್ಯಕ್ರಮ ನಡೆಯಿತು.