ಸಕಾಲ ಅರ್ಜಿ ವಿಲೇವಾರಿ, ರಾಜ್ಯದಲ್ಲಿಯೇ ಕಲಬುರಗಿ ನಂ-1

-ಬಿ.ಫೌಜಿಯಾ ತರನ್ನುಮ್

ಕಲಬುರಗಿ,ನ.28: ಸಾರ್ವಜನಿಕರಿಗೆ ಕಾಲಮಿತಿಯಲ್ಲಿ ಸರ್ಕಾರಿ ಸೇವೆ ನೀಡುವ ಸಕಾಲ ಯೋಜನೆಯಡಿ ನವೆಂಬರ್-2023ರ ಮಾಹೆಯ ಅರ್ಜಿ ವಿಲೇವಾರಿಯಲ್ಲಿ ಕಲಬುರಗಿ ಜಿಲ್ಲೆ ಶೇ.100ರಷ್ಟು ಸಾಧನೆಯೊಂದಿಗೆ ರಾಜ್ಯದಲ್ಲಿ ನಂಬರ್-1 ಸ್ಥಾನದಲ್ಲಿದೆ ಎಂದು ಜಿಲ್ಲಾಧಿಕಾರಿ ಬಿ.ಪೌಜಿಯಾ ತರನ್ನುಮ್ ತಿಳಿಸಿದ್ದಾರೆ.

ಕರ್ನಾಟಕ ಸಕಾಲ ಸೇವೆಗಳ ಅಧಿನಿಯಮ-2011 ಮತ್ತು ತಿದ್ದುಪಡಿ ಅಧಿನಿಯಮ-2014ರಂತೆ 100ಕ್ಕೂ ಹೆಚ್ಚಿನ ಇಲಾಖೆಗಳ 1,181 ಸೇವೆಗಳನ್ನು ಕಾಲಮಿತಿಯಲ್ಲಿ ನಾಗರಿಕರಿಗೆ ನೀಡಲಾಗುತ್ತಿದೆ. ಕಳೆದ ಜೂನ್-2023 ಮಾಹೆಯಲ್ಲಿ ಅರ್ಜಿ ವಿಲೇವಾರಿ ಪ್ರಮಾಣ ಶೇ.82.54ರಷ್ಟು ಇದ್ದರೆ, ಪ್ರಸ್ತುತ ನವೆಂಬರ್ ಮಾಹೆಯಲ್ಲಿ ಸಲ್ಲಿಕೆಯಾದ 1,02,002 ಅರ್ಜಿಗಳಲ್ಲಿ 1,07,011 ಅರ್ಜಿ ವಿಲೇವಾರಿ ಮಾಡುವ ಮೂಲಕ ಇದರ ಪ್ರಮಾಣ ಶೇ.100.34ಕ್ಕೆ ಹೆಚ್ಚಿಸಿ ಆಡಳಿತಕ್ಕೆ ವೇಗ ನೀಡಲಾಗಿದೆ.

ಒಟ್ಟಾರೆ 2023ರ ಜೂನ್ ರಿಂದ ನವೆಂಬರ್ ವರೆಗೆ ವಿವಿಧ ಇಲಾಖೆಯಡಿ ಸ್ವೀಕೃತ 7,23,259 ಅರ್ಜಿಗಳಲ್ಲಿ 7,25,716 ಅರ್ಜಿ ವಿಲೇವಾರಿಗೊಳಿಸಿದೆ. ಇದರಲ್ಲಿ ಕಂದಾಯ ಇಲಾಖೆಯು ಬಹಪಾಲು ಅಂದರೆ 5,89,786 ಅರ್ಜಿಗಳಲ್ಲಿ 5,93,992 ಅರ್ಜಿ ವಿಲೇವಾರಿ ಮಾಡುವ ಮೂಲಕ ವಿಲೇವಾರಿ ಪ್ರಮಾಣವನ್ನು ಶೇ.79.72 ರಿಂದ ಶೇ.100.71ಕ್ಕೆ ಹೆಚ್ಚಿಸಲಾಗಿದೆ ಎಂದು ಡಿ.ಸಿ. ಅವರು ತಿಳಿಸಿದ್ದಾರೆ.

ಜಿಲ್ಲೆಯ 11 ತಾಲೂಕಿನ ಅಟಲ್ ಜೀ ಜನಸ್ನೇಹಿ ಕೇಂದ್ರದ ಮೂಲಕ 371(ಜೆ), ಜಾತಿ-ಆದಾಯ ಪ್ರಮಾಣ ಪತ್ರ, ವಾಸಸ್ಥಳ ಪ್ರಮಾಣ ಪತ್ರ, ವಿವಿಧ ಪಿಂಚಣಿಗಳ ಅರ್ಜಿ ವಿಲೇವಾರಿ ಮಾಡಲಾಗುತ್ತಿದ್ದು, ಕಳೆದ 6 ತಿಂಗಳ ಅವಧಿಯಲ್ಲಿ ಸಲ್ಲಿಕೆಯಾದ 5,30,968 ಅರ್ಜಿಗಳ ಪೈಕಿ ಇದೂವರೆಗೆ 5,14,363 ಅರ್ಜಿ ವಿಲೇ ಮಾಡಿ ಶೇ.96.87 ಸರಾಸರಿ ಪ್ರಗತಿ ಸಾಧಿಸಲಾಗಿರುತ್ತದೆ.

ರಾಜ್ಯ ಸರ್ಕಾರವು ಕರ್ನಾಟಕ ಭೂ ಕಂದಾಯ ನಿಯಮಗಳು-1966ಕ್ಕೆ ತಿದ್ದುಪಡಿ ತಂದು ಕೃಷಿ ಜಮೀನಿಗೆ ಸಂಬಂಧಿಸಿದಂತೆ ವರ್ಗಾವಣೆ ಕೈಗೊಳ್ಳುವಾಗ ವರ್ಗಾವಣೆಗಳ ಮುದ್ದತ್ತು (ಆಕ್ಷೇಪಣೆ ಸ್ವೀಕರಿಸು/ ನೋಟಿಸ್) ಅವಧಿಯನ್ನು ಈ ಹಿಂದಿದ್ದ 30 ದಿವಸಗಳ ಕಾಲಾವಧಿಯಿಂದ ನೋಂದಾಯಿತ ದಾಖಲೆಯ ಆಧಾರದ ಮೇಲೆ ಕೈಗೊಳ್ಳುವ ವರ್ಗಾವಣೆಗಳಲ್ಲಿ 7 ದಿವಸಗಳು, ನೋಂದಾಯಿತವಲ್ಲದ ದಾಖಲೆಯ ಆಧಾರದ ಮೇಲೆ ಕೈಗೊಳ್ಳುವ ವರ್ಗಾವಣೆಗಳಲ್ಲಿ 15 ದಿವಸಗಳ ಕಾಲಾವಧಿಯನ್ನು ನಿಗದಿಪಡಿಸಿದೆ. ಅದರಂತೆ ನೋಂದಾಯಿತ ದಾಖಲೆಗಳ ಮೇಲೆ ಮೇ-2023 ರಿಂದ ನವೆಂಬರ-2023ರ ವರೆಗೆ 12,818 ವರ್ಗಾವಣೆ ಅರ್ಜಿಗಳಲ್ಲಿ 12,435 ವಿಲೇ ಮಾಡಿದೆ. ನೋಂದಾಯಿತವಲ್ಲದ (ಪೌತಿ) ಪ್ರಕರಣಗಳ ಈ ಅವಧಿಯಲ್ಲಿ 5,196 ಪ್ರಕರಣ ಪೈಕಿ 5,741 ವಿಲೇಗೊಳಿಸಿದೆ. ಮೇ-2023 ಮಾಹೆಯಲ್ಲಿ ಅರ್ಜಿಗಳ ಸರಾಸರಿ ವಿಲೇವಾರಿ ದಿನಗಳು 34.27 ಆಗಿದ್ದರೆ, ಹಿಂದಿನ 6 ತಿಂಗಳ ಕಾಲಾವಧಿ ಗಮನಿಸಿದಾಗ ಸರಾಸರಿ ವಿಲೇವಾರಿ ದಿನಗಳು 12.86ಕ್ಕೆ ಇಳಿಕೆಯಾಗಿದೆ. ಇದು ಜನಪರ ಆಡಳಿತಕ್ಕೆ ಹಿಡಿದ ಕನ್ನಡಿಯಾಗಿದೆ. ನೋಟಿಸು ರಹಿತ ವರ್ಗಾವಣೆಗಳ ಪ್ರಕರಣದಲ್ಲಿ 35,318 ಅರ್ಜಿಗಳಲ್ಲಿ 35,667 ವಿಲೇಗೊಳಿಸಿದ್ದು, ಇಲ್ಲಿಯೂ ಸಹ ವಿಲೇ ದಿನಗಳನ್ನು 2.40 ರಿಂದ 0.38ಕ್ಕೆ ಇಳಿಮುಖವಾಗಿಸಿದೆ.

ಪಹಣಿ ಕಾಲಂ (3) ಮತ್ತು (9) ಭಿನ್ನತೆಗಳನ್ನು ಸರಿಪಡಿಸುವ ಪ್ರಕರಣಗಳಿಗೆ ಸಂಬಂಧಿಸಿದಂತೆ ಮೇ-2023 ರಿಂದ ನವೆಂಬರ-2023 ವರೆಗೆ ಒಟ್ಟು 5,631 ಪ್ರಕರಣಗಳಲ್ಲಿ 2,429 ಪ್ರಕರಣಗಳನ್ನು ಇತ್ಯರ್ಥಗೊಳಿಸಿ ಪಹಣಿ ತಿದ್ದುಪಡಿ ಮಾಡಲಾಗಿದೆ. ಇನ್ನೂ ಇದೇ ಅವಧಿಯಲ್ಲಿ ಸಲ್ಲಿಕೆಯಾದ 7,960 ಪ್ರಕರಣಗಳಲ್ಲಿ 3,752 ಪ್ರಕರಣಗಳು ವಿಲೇ ಮಾಡಿ ಶೇ.47ರಷ್ಟು ಮೋಜಣಿ ಪಹಣಿಗಳ ತಿದ್ದುಪಡಿ ಸಹ ಮಾಡಲಾಗಿದೆ.

ಜಿಲ್ಲೆಯಲ್ಲಿ ಸರ್ಕಾರಿ ಜಮೀನು ಮತ್ತು ಎಸ್.ಸಿ-ಎಸ್.ಟಿ. ಸಮುದಾಯಕ್ಕೆ ಮಂಜೂರು ಮಾಡಿದ ಜಮೀನು ಒತ್ತುವರಿಗೆ ಕಡಿವಾಣ ಹಾಕಲು ಕಳೆದ ಸೆಪ್ಟೆಂಬರ್ 17 ರಿಂದ ಇಲ್ಲಿಯ ವರೆಗೆ 3,574 ಪಿ.ಟಿ.ಸಿ.ಎಲ್ ಹಾಗೂ 1,359 ಸರ್ಕಾರಿ ಜಮೀನುಗಳನ್ನು ಫ್ಲ್ಯಾಗಿಂಗ್ ಮಾಡಲಾಗಿದೆ.

ಒಂದು ವರ್ಷ ಮೀರಿದ ಪ್ರಕರಣ ಬಾಕಿ ಇಲ್ಲ:

ಜಿಲ್ಲೆಯ ವಿವಿಧ ತಾಲೂಕಿನ ತಹಶೀಲ್ದಾರ ನೇತೃತ್ವದ ಕಂದಾಯ ನ್ಯಾಯಾಲಯಗಳಲ್ಲಿ ಇಂದಿನ ದಿನಕ್ಕೆ ಒಂದು ವರ್ಷ ಮೀರಿದ ಯಾವುದೇ ಪ್ರಕರಣ ಬಾಕಿ ಇಲ್ಲ. ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರ ನಿರ್ದೇಶನಂತೆ ಪ್ರಕರಣಗಳನ್ನು ಶೀಘ್ರವಾಗಿ ವಿಲೇವಾರಿ ಮಾಡಲಾಗುತ್ತಿದೆ ಎಂದು ಡಿ.ಸಿ. ಬಿ.ಫೌಜಿಯಾ ತರನ್ನುಮ್ ಕಂದಾಯ ಇಲಾಕೆಯ ಪ್ರಗತಿ ಚಿತ್ರಣ ವಿವರಿಸಿದ್ದಾರೆ.

ಕಳೆದ ಜೂನ್ 1ಕ್ಕೆ 836 ತಕರಾರು ಪ್ರಕರಣಗಳು ನಮ್ಮ ಮುಂದಿದ್ದವು. ಕಳೆದ 6 ತಿಂಗಳ ಅವಧಿಯಲ್ಲಿ 388 ವಿಲೇವಾರಿ ಮಾಡಿದೆ. ಇನ್ನೂ 1-5 ವರ್ಷ ಮತ್ತು ಮೇಲ್ಪಟ್ಟ ಬಾಕಿ ಇದ್ದ ಎಲ್ಲಾ 141 ಪ್ರಕರಣಗಳು ಇತ್ಯರ್ಥ ಪಡಿಸಲಾಗಿದೆ. 6 ತಿಂಗಳು-1 ವರ್ಷ ಅವಧಿಯಡಿಯಲ್ಲಿ ಬಾಕಿ ಇದ್ದ 169 ಪ್ರಕರಣಗಳಲ್ಲಿ 141 ಪ್ರಕರಣಗಳು ಇತ್ಯರ್ಥ ಪಡಿಸಿದೆ.

ಇ-ಆಫೀಸ್ ಕಾರ್ಯನಿರ್ವಹಣೆ:

ಕಂದಾಯ ಇಲಾಖೆ ವ್ಯಾಪ್ತಿಯ ಕಚೇರಿಯಲ್ಲಿ ಸಾರ್ವಜನಿಕರು ಸಲ್ಲಿಸುವ ಅರ್ಜಿಗಳ ನಿಖರತೆ, ಪಾರದರ್ಶಕತೆ ಮತ್ತು ತ್ವರಿತ ವಿಲೇವಾರಿಗೆ ಇ-ಆಫೀಸ್ ಅನುಷ್ಠಾನಗೊಳಿಸಲಾಗಿದ್ದು, ಕಳೆದ 6 ತಿಂಗಳ ಅವಧಿಯಲ್ಲಿ ಜಿಲ್ಲೆಯ 11 ತಹಶೀಲ್ದಾರ ಕಚೇರಿಗಳಲ್ಲಿ 1,13,383 ಕಡತಗಳು ಸೃಜಿಸಿದ್ದು, 1,10,856 ಕಡಗಳನ್ನು ವಿಲೇವಾರಿ ಮಾಡಲಾಗಿದೆ. ಕಳೆದ 6 ತಿಂಗಳಲ್ಲಿ ವಿಲೇವಾರಿ ಕಡತ ಪ್ರಮಾಣ ನೋಡಿದಾಗ ಅದು ಶೇ.98ಕ್ಕೆ ತಲುಪಿದೆ. ಇದರಿಂದ ಜನರಿಗೆ ತ್ವರಿತ ನ್ಯಾಯ ಸಿಗುವಂತಾಗಿದೆ.

125 ಕಂದಾಯ ಗ್ರಾಮ ಪ್ರಸ್ತಾವನೆ ಸಲ್ಲಿಕೆ:

ಜಿಲ್ಲೆಯಲ್ಲಿ ದಾಖಲೆ ರಹಿತ ಜನ ವಸತಿಗಳನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸಲು ಒಟ್ಟು 353 ಕಂದಾಯ ಗ್ರಾಮಗಳನ್ನು ಗುರುತಿಸಿ ಮೇ-2023 ಅಂತ್ಯಕ್ಕೆ 269 ಪ್ರಾಥಮಿಕ ಅಧಿಸೂಚನೆ ಹಾಗೂ 153 ಅಂತಿಮ ಅಧಿಸೂಚನೆ ಹೊರಡಿಸಲಾಗಿದೆ. ಮೇ-2023ರ ನಂತರ ಪ್ರಾಥಮಿಕ ಅಧಿಸೂಚನೆ ಹೊರಡಿಸಲು 84 ಹಾಗೂ ಅಂತಿಮ ಅಧಿಸೂಚನೆ ಹೊರಡಿಸಲು 116 ಒಟ್ಟು 200 ಪ್ರಕರಣಗಳು ಬಾಕಿ ಇದ್ದು, ಇದರ ಪೈಕಿ ನವೆಂಬರ್-2023ರ ಅಂತ್ಯಕ್ಕೆ 48 ಗ್ರಾಮಗಳನ್ನು ಪ್ರಾಥಮಿಕ ಅಧಿಸೂಚನೆಗೆ ಮತ್ತು 77 ಗ್ರಾಮಗಳನ್ನು ಅಂತಿಮ ಅಧಿಸೂಚನೆ ಸೇರಿ ಒಟ್ಟು 125 ಪ್ರಸ್ತಾವನೆಗಳನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಇದರಿಂದ ಸೂರಿಲದ್ದವರಿಗೆ ಸೂರು ಕಲ್ಪಿಸುವ, ಹಕ್ಕು ಪತ್ರ ನೀಡಲಾಗುತ್ತದೆ.

ಇನ್ನು ಜಿಲ್ಲೆಯಲ್ಲಿ ಸರ್ಕಾರಿ ಜಮೀನಿನಲ್ಲಿ ಅಕ್ರಮವಾಗಿ ನಿರ್ಮಿಸಿರುವ ಮನೆಗಳನ್ನು ಸಕ್ರಮಗೊಳಿಸಲು ಗ್ರಾಮೀಣ ಪ್ರದೇಶದಲ್ಲಿ (94ಸಿ) ಸ್ವೀಕೃತ 14,558 ಅರ್ಜಿಗಳಲ್ಲಿ 13,304 ಹಾಗೂ ನಗರ ಪ್ರದೇಶದಲ್ಲಿ (94ಸಿಸಿ) 1,515 ಅರ್ಜಿಗಳಲ್ಲಿ 1,494 ಅರ್ಜಿಗಳು ವಿಲೇವಾರಿ ಮಾಡಿ ಹಕ್ಕು ಪತ್ರ ನೀಡಲಾಗಿದ್ದು, ಕ್ರಮವಾಗಿ ಶೇ.91 ಮತ್ತು ಶೇ.98ರಷ್ಟು ಪ್ರಗತಿ ಸಾಧಿಸಲಾಗಿದೆ.