ಸಕಾಲದಲ್ಲಿ ಸಾರ್ವಜನಿಕರಿಗೆ ಆರೋಗ್ಯ ಸೇವೆ ತಲುಪಿಸಿ : ಸಿಇಓ ಸೂಚನೆ

ವಿಜಯಪುರ ಸೆ.1: ಆರೋಗ್ಯ ಇಲಾಖೆಯಿಂದ ಸಾರ್ವಜನಿಕರಿಗೆ ಸಕಾಲದಲ್ಲಿ ಸೇವೆ ಒದಗಿಸಬೇಕು. ಯಾವುದೇ ಲೋಪವಾಗದಂತೆ ಸರ್ಕಾರದ ಮಾರ್ಗಸೂಚಿಯನ್ವಯ ನಿಯಮಿತವಾಗಿ ಆರೋಗ್ಯ ಸೇವೆ ಒದಗಿಸುವಂತೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ಶಿಂಧೆ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಜರುಗಿದ ಮಟ್ಟದ ಜಿಲ್ಲಾ ಆರೋಗ್ಯ ಸಂಘದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳಲ್ಲಿ ಕ್ಷಯ ಮುಕ್ತ ಭಾರತ ಅಭಿಯಾನದಡಿ ಗುರುತಿಸಲ್ಪಟ್ಟ ಗ್ರಾಮ ಪಂಚಾಯತಗಳಲ್ಲಿ, ಚುನಾಯಿತ ಪಂಚಾಯತ ಸದಸ್ಯರುಗಳಿಗೆ ಕಾರ್ಯಕ್ರಮದ ಕುರಿತು ಅರಿವು ಮೂಡಿಸಬೇಕು. ಪಂಚಾಯತಿಗಳ ಸಹಯೋಗದೊಂದಿಗೆ ಕಾರ್ಯಕ್ರಮ ಅಚ್ಚು-ಕಟ್ಟಾಗಿ ಹಮ್ಮಿಕೊಳ್ಳಬೇಕು. ಕ್ಷಯ ರೋಗ ಹರಡದಂತೆ ಅವಶ್ಯಕ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಅವರು ಸೂಚಿಸಿದರು.
2023-24ನೇ ಸಾಲಿನಲ್ಲಿ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿಯಲ್ಲಿ ಜಿಲ್ಲಾ ಮಟ್ಟದಲ್ಲಿ ಮಾಹಿತಿ ಶಿಕ್ಷಣ ಮತ್ತು ಸಂವಹನ ಮೂಲಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಕ್ರೀಯಾ ಯೋಜನೆಗೆ ಅನುಮತಿ ನೀಡಿದ ಅವರು, ಯೋಜನೆಯಲ್ಲಿನ ಕಾರ್ಯಕ್ರಮಗಳನ್ನು ಜಿಲ್ಲೆಯಲ್ಲಿ ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು. ನಿಗದಿತ ಸಮಯದಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಯಶಸ್ವಿಗೊಳಿಸಬೇಕು ಎಂದು ಅವರು ಹೇಳಿದರು.
ಸರಕಾರಿ ಆರೋಗ್ಯ ಸಂಸ್ಥೆಗಳಲ್ಲಿ ಅವಧಿ ಮುಗಿದಿರುವ ಔಷಧಿಗಳು ಇರದಂತೆ ಕ್ರಮವಹಿಸಬೇಕು. ತಾಲೂಕಾ ಆರೋಗ್ಯಾಧಿಕಾರಿಗಳು ಆಸ್ಪತ್ರೆಯ ಮಾಹಿತಿ ಮೇಲಾಧಿಕಾರಿಗಳಿಗೆ ಒದಗಿಸುವಂತೆ ಕ್ರಮ ವಹಿಸಬೇಕು. ಜಿಲ್ಲೆಯ ಎಲ್ಲಾ ಆರೋಗ್ಯ ಸಂಸ್ಥೆಗಳ ಅನುದಾನಗಳ ಲೆಕ್ಕ ಶೀರ್ಷಿಕೆ ಮತ್ತು ಪೂರೈಕೆ ವಿಭಾಗ ಹಾಗೂ ಇತರೆ ವಹಿಗಳ ನಿರ್ವಹಣೆಗೆ ಸೂಚಿಸಿದ ಅವರು, ಸಭೆಗೆ ಗೈರಾದ ಅಧಿಕಾರಿಗಳ ಮೇಲೆ ಕಾನೂನು ರಿತ್ಯ ಕ್ರಮ ಕೈಗೊಳ್ಳುವಂತೆ ಅವರು ಸೂಚಿಸಿದರು.
ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಬಸವರಾಜ ಹುಬ್ಬಳ್ಳಿ, ಜಿಲ್ಲಾ ಸಂತಾನೋತ್ಪತ್ತಿ ಮತ್ತು ಮಕ್ಕಳ ಆರೋಗ್ಯ ಅಧಿಕಾರಿ ಡಾ. ಕೆ ಡಿ ಗುಂಡಬಾವಡಿ ಸೇರಿದಂತೆ ಎಲ್ಲ ಕಾರ್ಯಕ್ರಮ ಅನುಷ್ಠಾನ ಅಧಿಕಾರಿಗಳು, ತಾಲೂಕಾ ಆರೋಗ್ಯಾಧಿಕಾರಿಗಳು, ಜಿಲ್ಲಾ ಮಟ್ಟದ ಆಯುಷ್ ಅಧಿಕಾರಿಗಳು, ಜಿಲ್ಲಾ ಶಸ್ತ್ರ ಚಿಕಿತ್ಸಕರು ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.