ಸಕಾಲದಲ್ಲಿ ಜನಸಾಮಾನ್ಯರಿಗೆ ಸರ್ಕಾರಿ ಸೌಲಭ್ಯ ತಲುಪಿಸಲು ಸೂಚನೆ

ಕುಣಿಗಲ್, ಸೆ. ೧೬- ಸರ್ಕಾರಿ ಸೌಲಭ್ಯಗಳು ಸಕಾಲದಲ್ಲಿ ಸಾರ್ವಜನಿಕರಿಗೆ ತಲುಪುವಂತಾಗಲು ಅಧಿಕಾರಿಗಳು ಪ್ರಾಮಾಣಿಕವಾಗಿ ಕೆಲಸ ಮಾಡಬೇಕು ಎಂದು ತುಮಕೂರು ಜಿಲ್ಲಾ ಲೋಕಾಯುಕ್ತ ಇನ್ಸ್‌ಪೆಕ್ಟರ್ ಶ್ರೀನಿವಾಸ್ ಹೇಳಿದರು.
ಇಲ್ಲಿನ ತಾ.ಪಂ. ಸಭಾಂಗಣದಲ್ಲಿ ಸಾರ್ವಜನಿಕರಿಂದ ಮನವಿ ಸ್ವೀಕರಿಸಿ ಅವರು ಮಾತನಾಡಿದರು.
ಇಲಾಖೆಯು ಅಧಿಕಾರಿಗಳು ಸಾರ್ವಜನಿಕರಿಗೆ ಸೌಲಭ್ಯದ ಬಗ್ಗೆ ಮಾಹಿತಿಯನ್ನು ಸರಿಯಾಗಿ ನೀಡದೆ ರೈತರು, ಬಡವರು, ಸಮಸ್ಯೆ ಉಳ್ಳವರು ದೂರು ಸಲ್ಲಿಸಲು ಮಾಹಿತಿ ಕೊರತೆಯಿಂದ ಸಾಧ್ಯವಾಗಿರುವುದಿಲ್ಲ. ಕಳೆದ ಬಾರಿ ನಾಲ್ಕು ಪ್ರಕರಣಗಳು ಬಗೆಹರಿಸಲು ಕ್ರಮ ಕೈಗೊಳ್ಳಲಾಗಿದೆ. ಕೋವಿಡ್ ಸಮಸ್ಯೆಯಿಂದ ಕಳೆದ ಏಳೆಂಟು ತಿಂಗಳಿಂದ ತಾಲ್ಲೂಕುವಾರು ಸಭೆ ನಡೆಸಲು ಸಾಧ್ಯವಾಗಿಲ್ಲ. ಜಿಲ್ಲಾ ಲೋಕಾಯುಕ್ತ ಎಸ್ಪಿ ಮಹಮ್ಮದ್ ಉಸೇನ್ ಆಗಮಿಸಿದ್ದು, ಮುಂದಿನ ದಿನಗಳಲ್ಲಿ ಎರಡು ತಿಂಗಳಿಗೊಮ್ಮೆ ಸಭೆ ನಡೆಸಲಾಗುವುದು ಎಂದರು.
ಸ್ಮಶಾನ ಅಕ್ರಮವಾಗಿ ಇರುವುದರಿಂದ ಕಂದಾಯ ಇಲಾಖೆಯು ಕ್ರಮ ತೆಗೆದುಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಜನರ ಸಮಸ್ಯೆಗಳಿಗೆ ಸೌಲಭ್ಯಗಳಿಗೆ ಒತ್ತು ನೀಡಬೇಕು. ಸರ್ಕಾರಿ ಅನುದಾನಗಳು ಎಷ್ಟು ಪ್ರಮಾಣದಲ್ಲಿ ರೈತರು, ಬಡವರು, ನಾಗರಿಕರಿಗೆ ತಲುಪುತ್ತಿದೆ ಎಂಬ ಬಗ್ಗೆ ಮುಂದಿನ ಸಭೆಗೆ ವಿವರಿಸುವಂತೆ ಅಧಿಕಾರಿಗಳಿಗೆ ತಿಳಿಸಿದರು.
ಈ ಸಂದರ್ಭದಲ್ಲಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಶಿವರಾಜಯ್ಯ, ಲೋಕಾಯುಕ್ತ ಸಿಬ್ಬಂದಿಗಳಾದ ಯತಿಗೌಡ, ಅಹಮದ್ ಪಾಷಾ, ತಾಲ್ಲೂಕು ಮಟ್ಟದ ಎಲ್ಲಾ ಅಧಿಕಾರಿಗಳು ಉಪಸ್ಥಿತರಿದ್ದರು.