ಸಕಾಲದಲ್ಲಿ ಚಿಕಿತ್ಸೆ ಪಡೆದು ಕ್ಷಯರೋಗದಿಂದ ಗುಣಮುಖರಾಗಿ – ಶ್ರೀನಿವಾಸ್.


ಸಂಜೆವಾಣಿ ವಾರ್ತೆ
ಕೂಡ್ಲಿಗಿ.ಜು. 19: –  ಸಾಂಕ್ರಾಮಿಕ ರೋಗವಾಗಿರುವ ಕ್ಷಯರೋಗಕ್ಕೆ ಸತತ 6 ತಿಂಗಳು ವೈದ್ಯರ ಸಲಹೆಯಂತೆ ಚಿಕಿತ್ಸೆ ಪಡೆದರೆ ಖಂಡಿತವಾಗಿ ಗುಣಮುಖರಾಗಬಹುದು. ಈ ರೋಗಕ್ಕೆ ಭಯಪಡುವ ಅಗತ್ಯವಿಲ್ಲ ಎಂದು ಹಿರಿಯ ಆರೋಗ್ಯ ಸಹಾಯಕ ಶ್ರೀನಿವಾಸ್ ತಿಳಿಸಿದರು.
ತಾಲೂಕಿನ ಬಯಲುತುಂಬರಗುದ್ದಿ ಗ್ರಾಮದಲ್ಲಿ ಆರೋಗ್ಯ ಇಲಾಖೆಯಿಂದ ಆಯೋಜಿಸಿದ್ದ ಕ್ಷಯರೋಗ ನಿರ್ಮೂಲನಾ ಅಭಿಯಾನದ ಅಂಗವಾಗಿ ಸೊಇಮವಾರ ಸಮೀಕ್ಷೆಗೆ ಚಾಲನೆ ನೀಡಿ ಮಾತನಾಡಿದರು.
ಮನೆ ಮನೆಗೆ ತೆರಳಿ ಮನೆಯವರ ಕಫದ ಮಾದರಿ ಪಡೆದು ಪರೀಕ್ಷೆಗೆ ಕಳಿಸಲಾಗುವುದು. ರೋಗದ ಲಕ್ಷಣ ಕಂಡು ಬಂದಲ್ಲಿ ರೋಗಿಗೆ ಸಂಪೂರ್ಣ ಉಚಿತ ಚಿಕಿತ್ಸೆಯನ್ನು ಸರ್ಕಾರವೇ ನೀಡಲಿದೆ. ಗಾಳಿ, ಧೂಳು, ಕ್ಷಯರೋಗಿಯ ಕೆಮ್ಮಿನಿಂದ ಮತ್ತೊಬ್ಬರಿಗೆ ಕ್ಷಯರೋಗ ಬರುತ್ತದೆ.
ಎಕ್ಸ್ ರೇ, ಕಫ ಪರೀಕ್ಷೆ, ಸಿಬಿನ್ಯಾಟ್‌ ವಿಧಾನಗಳ ಮೂಲಕ ಕ್ಷಯರೋಗ ಪತ್ತೆ ಹಚ್ಚಬಹುದಾಗಿದ್ದು, ರೋಗಿಗಳು ನಿರಂತರ 6 ತಿಂಗಳು ಚಿಕಿತ್ಸೆ ಪಡೆದು ಪೌಷ್ಟಿಕಾಂಶಯುಕ್ತ ಆಹಾರ ಸೇವಿಸಿದರೆ ಸಂಪೂರ್ಣ ಗುಣಮುಖರಾಗುತ್ತಾರೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕಮ್ಯೂನಿಟಿ ಆರೋಗ್ಯಧಿಕಾರಿ ನೀಲಾವತಿ, ಸಿಎಚ್ ಸಿಒಗಳಾದ ಕಾಳಮ್ಮ, ಮಾಲತಿ, ಶಶಿಕಲಾ, ಆಶಾ ಕಾರ್ಯಕರ್ತೆಯರಾದ ವೀಣಾ, ಶಿವಗಂಗಾ, ಗೀತಾ, ನಿರ್ಮಲಾ, ವೀಣಾ, ಗೀತಾ, ಸುಜಾತಾ ಇತರರಿದ್ದರು.