ಸಕಾಲಕ್ಕೆ ಎಳೆಯ ಮಕ್ಕಳ ಆರೋಗ್ಯ ತಪಾಸಣೆ ಮಾಡಿ: ಡಾ. ತಾಟಿ

ಆಳಂದ:ಜ.19: ಸಕಾಲಕ್ಕೆ ಎಳೆಯ ಮಕ್ಕಳ ಆರೋಗ್ಯ ತಪಾಸಣೆ ಕೈಗೊಂಡು ನೂನ್ಯತೆಗಳು ಕಂಡುಬಂದರೆ ಸೂಕ್ತ ಚಿಕಿತ್ಸೆ ನೀಡಿ ಆರೋಗ್ಯವನ್ನು ಕಾಪಾಡಲು ಪಾಲಕರು ಮುಂದಾಗಬೇಕು ಎಂದು ಆರ್‍ಬಿಎಸ್‍ಕೆ ವೈದ್ಯ ಡಾ. ವಿನಾಯಕ ತಾಟಿ ಅವರು ಹೇಳಿದರು.
ತಾಲೂಕಿನ ನಿಂಬಾಳ ಗ್ರಾಮದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಕೇಂದ್ರ ಸರ್ಕಾರದ ಯೋಜನೆಯಾದ “ರಾಷ್ಟ್ರೀಯ ಬಾಲ ಸ್ವಾಸ್ಥ್ಯ (ಆರ್‍ಬಿಎಸ್‍ಕೆ), ಅಡಿಯಲ್ಲಿ 256 ಮಕ್ಕಳ ಆರೋಗ್ಯ ತಪಾಸಣೆ ನಡೆಸಿ ಅವರು ಮಾತನಾಡಿದರು.
ಮಕ್ಕಳಿಗೆ ವಯಕ್ತಿಕ ಶುಚಿತ್ವ ಕಾಪಾಡುವಂತಾಗಬೇಕು. ಅಲ್ಲದೆ, ನಿಯಮಿತ ಹಲ್ಲುಜ್ಜುವ ಬಗ್ಗೆ ತಿಳಿಹೇಳಿದ ಅವರು, ಸಕಾಲಕ್ಕೆ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸೆ ಕೊಡಿಸಿದರೆ ಎಳೆಯ ಹಂತದಲ್ಲೇ ಮಕ್ಕಳ ಆರೋಗ್ಯವನ್ನು ಕಾಪಾಡಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ನೇತ್ರ ಸಹಾಯಕರಾದ ಭಾಗ್ಯಶ್ರೀ ಅವರು ಮಕ್ಕಳ ನೇತ್ರ ತಪಾಸಣೆ ಮಾಡಿ 5 ಮಕ್ಕಳಿಗೆ ಕಂಡುಬಂದ ಕಣ್ಣಿನ ದೃಷ್ಟಿ ದೋಷ ಕಂಡು ಹಿಡಿದಿದ್ದು ‘ರಾಷ್ಟ್ರೀಯ ಅಂಧತ್ವ ನಿವಾರಣಾ ಕಾರ್ಯಕ್ರಮ’ ಅಡಿಯಲ್ಲಿ ಉಚಿತ ಕನ್ನಡಕ ನೀಡಲು ಸೀಫಾರಸ್ಸು ಮಾಡಿದರು.
ಶುಶ್ರುಷಕಿ ಅನಿತಾ ಆರ್, ಶಾಲೆಯ ಮುಖ್ಯ ಶಿಕ್ಷಕ ಉದಯಕುಮಾರ ದೇಶಪಾಂಡೆ ಸೇರಿದಂತೆ ಸಿಬ್ಬಂದಿಗಳು ಹಾಜರಿದ್ದರು.