
ಸಂಜೆವಾಣಿ ವಾರ್ತೆ
ಕೊಟ್ಟೂರು, ಆ.27: ದ್ವೇಷ ಬಿಟ್ಟು ಸಮಾಜದಲ್ಲಿ ಉತ್ತಮ ನಾಗರೀಕರಾಗಿ ಬದುಕು ನಡೆಸಬೇಕು. ಪ್ರವಚನಗಳಲ್ಲಿ ಅನೇಕ ಉಪಕಥೆಗಳನ್ನು ಹೇಳುವ ಮೂಲಕ ಬಾಳಿನ ಪಾಠಗಳನ್ನು ತಿಳಿಸಲಾಗುತ್ತದೆ. ಪ್ರತಿ ಹಂತದಲ್ಲಿಯೂ ಮನುಷ್ಯನಿಗೆ ಸಹಜವಾದ ಚಿಂತನೆಗಳು ಇರುತ್ತವೆ. ಈ ಚಿಂತನೆಗಳು ಮನುಷ್ಯನನ್ನು ನಕರಾತ್ಮಕ ಯೋಜನೆಗಳಿಗೆ ದೂಡುತ್ತವೆ. ಆದರೆ ನಾವು ಯಾವಾಗಲು ಸಕಾರಾತ್ಮಕವಾಗಿರುವ ಯೋಚನೆಗಳನ್ನೇ ಮಾಡಬೇಕು. ಇದರಿಂದ ಸಮಾಜಕ್ಕೂ, ಕುಟುಂಬಕ್ಕೂ, ನಮ್ಮ ಮನಸ್ಸಿಗೂ ನೆಮ್ಮದಿ ನೀಡುತ್ತವೆ ಎಂದು ವಿಜಯನಗರ ಜಿಲ್ಲಾಧಿಕಾರಿ ಎಂ ಎಸ್ ದಿವಾಕರ್ ಹೇಳಿದರು.
ತಾಲ್ಲೂಕಿನ ಉಜ್ಜಯಿನಿ ಗ್ರಾಮದ ಉಜ್ಜಯಿನಿ ಸದ್ಧರ್ಮ ಪೀಠದಲ್ಲಿ ವರಮಹಾಲಕ್ಷ್ಮಿ ಹಬ್ಬದ ನಿಮಿತ್ತ ಹಮ್ಮಿಕೊಂಡಿದ್ದ ಮಹಿಳೆಯರಿಗೆ ಉಡಿ ತುಂಬುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ವರಮಹಾಲಕ್ಷ್ಮಿ ಪೂಜೆ ಸಕಲರಿಗೂ ಆರೋಗ್ಯ, ನೆಮ್ಮದಿ ಆಶ್ವರ್ಯ ಕರುಣಿಸಲಿ ಎಂದರು.
ಸಕಲ ಜೀವಿಗಳಿಗೂ ಜಗದ್ಗುರು ಮರುಳಾಧ್ಯರು ಲೇಸನ್ನು ಉಂಟು ಮಾಡಲಿ, ಉತ್ತಮ ಮಳೆ ಬಂದು ರೈತರು ಸಮೃದ್ಧ ಬೆಳೆ ಬೆಳೆಯುವಂತಾಗಲಿ, ವರಮಹಾಲಕ್ಷ್ಮಿ ಪೂಜೆ ಮಹಿಳೆಯರಿಗೆ ಸೌಭಾಗ್ಯವನ್ನು ನೀಡಲಿ ಎಂದು ಉಜ್ಜಯಿನಿ ಜಗದ್ಗುರು ಸಿದ್ಧಲಿಂಗ ದೇಶಿ ಕೇಂದ್ರ ಶಿವಾಚಾರ್ಯ ಶ್ರೀ ಗಳು ಹೇಳಿದರು. ಇದಕ್ಕೂ ಮುನ್ನ ಪೀಠದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಹರಪನಹಳ್ಳಿ ಶಾಸಕಿ ಎಂ.ಪಿ. ಲತಾ, ತಹಶೀಲ್ದಾರ್ ಅಮರೇಶ್ವರ ಜಿ.ಕೆ. ಇದ್ದರು. ಇದೇ ಸಂದರ್ಭದಲ್ಲಿ ಮಹಿಳೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಯಶಸ್ವಿಯಾಗಿ ನಡೆಸಿಕೊಟ್ಟರು.