ಸಕಾರಾತ್ಮಕ ಮನೋಭಾವವೇ ಸಕಲ ಸಾಧನೆಗೆ ದಾರಿದೀಪ

ರಾಯಚೂರು,ಫೆ.೨೬- ಜ್ಞಾನವೇ ಜೀವನ ಪ್ರಯತ್ನವೇ ಯಶಸ್ಸು ಎಂದರಿತು ಸಕಾರಾತ್ಮಕ ಮನೋಭಾವ ಬೆಳೆಸಿಕೊಂಡರೆ ಸಾಕು ಅದುವೇ ಸಕಲ ಸಾಧನೆಗೆ ಸೋಪಾನವಾಗುತ್ತದೆ ಎಂದು ಸಾಹಿತಿ ರಮೇಶಬಾಬು ಯಾಳಗಿ ಹೇಳಿದರು.
ಅವರು ಸಿರವಾರದಲ್ಲಿ ಶನಿವಾರ ಸಂಜೆ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ವಾರ್ಷಿಕೋತ್ಸವ ಹಾಗೂ ಹತ್ತನೆಯ ತರಗತಿಯ ವಿದ್ಯಾರ್ಥಿಗಳ ಬಿಳ್ಕೊಡುಗೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ತೀವ್ರವಾದ ಜ್ಞಾನಾಶಕ್ತಿ, ದೃಢವಾದ ನಿಷ್ಠೆ, ನಲುಗದ ಏಕಾಗ್ರತೆ, ಅಚಲ ಶೃದ್ಧೆ, ಬಿಡದ ಛಲ, ಸತತ ಪ್ರಯತ್ನ ನಿಮ್ಮದಾದರೆ ಯಶಸ್ಸು ನಿಮ್ಮದಾಗುತ್ತದೆ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಸಿರವಾರ ತಾಲೂಕಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಗುಂಡಪ್ಪ ಸಿರವಾರ ಅವರು ಮಾತನಾಡಿ ಕಷ್ಟ ಎದುರಿಸಿದಾಗ ಮಾತ್ರ ಸುಖವನ್ನು ಅನುಭವಿಸಲು ಸಾಧ್ಯ. ವಿದ್ಯಾರ್ಥಿ ಜೀವನವೆಂದರೆ ವಿಶ್ರಾಂತಿಯ ಸಮಯವಲ್ಲ ನಿಮ್ಮ ಕಠಿಣ ಪರಿಶ್ರಮದ ಮೇಲೆ ಮುಂದಿನ ಭವಿಷ್ಯ ನಿರ್ದಾರವಾಗುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಸತಿ ಶಾಲೆಯ ಪ್ರಾಂಶುಪಾಲ ಶರಣಬಸವ ಆಲ್ದಾಳ ಅವರು ಮಾತನಾಡಿ ಹೆದರದೆ ಪರೀಕ್ಷೆ ಎದುರಿಸಿ ಉತ್ತಮ ಅಂಕಗಳನ್ನು ಗಳಿಸಿಕೊಂಡು ತಾವೆಲ್ಲರೂ ಉತ್ತೀರ್ಣರಾಗಿ ಹೆತ್ತವರಿಗೆ ಕಲಿತ ಶಾಲೆಗೆ ಕೀರ್ತಿ ತನ್ನಿ ಎಂದು ಶುಭ ಹಾರೈಸಿದರು.
ವೇದಿಕೆಯಲ್ಲಿ ಇಂದಿರಾಗಾಂಧಿ ವಸತಿ ಶಾಲೆಯ ಪ್ರಾಂಶುಪಾಲ ಹೇಮಣ್ಣ ಅವರು ಉಪಸ್ಥಿತರಿದ್ದರು. ವಿದ್ಯಾರ್ಥಿನಿಯರಾದ ಪ್ರಿಯಾಂಕಾ, ಅಂಕಿತಾ, ಸೃಷ್ಟಿ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.
ಅಡುಗೆ ಸಹಾಯಕರನ್ನು ಇದೇ ಸಂದರ್ಭದಲ್ಲಿ ವಸ್ತ್ರಗಳನ್ನು ನೀಡಿ ಸನ್ಮಾನಿಸಿ ಗೌರವಿಸಲಾಯಿತು. ನಂತರ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.