ಸಕಲ ಸಿದ್ಧತೆಗಳೊಂದಿಗೆ ಮಂಗಳೂರು ವಿ.ವಿಯ ಪದವಿ ಮೌಲ್ಯಮಾಪನ ಕಾರ್ಯ ಆರಂಭ


ಮಂಗಳೂರು,ಅ.೩೦- ಮಂಗಳೂರು ವಿಶ್ವವಿದ್ಯಾನಿಲಯದ ಪದವಿ ಪರೀಕ್ಷೆಗಳು ಯಶಸ್ವಿಯಾಗಿ ವಿಶ್ವವಿದ್ಯಾನಿಲಯದಿಂದ ನಿರ್ವಹಿಸಲ್ಪಟ್ಟಿದ್ದು, ಪರೀಕ್ಷೆಗಳು ಮುಗಿದ ತಕ್ಷಣವೇ ಉತ್ತರಪತ್ರಿಕೆಗಳ ಮೌಲ್ಯಮಾಪನವು ಆರಂಭಗೊಂಡಿದೆ. ಕೋವಿಡ್-೧೯ನ ಸಂದಿಗ್ಧ ಸ್ಥಿತಿಯಲ್ಲಿ ಅಕಾಲಿಕ ಸ್ಥಿತಿಗತಿಯಲ್ಲಿ ಪರೀಕ್ಷೆಗಳನ್ನು ನಡೆಸಬೇಕಾಗಿ ಬಂದಿದ್ದು ಮೌಲ್ಯಮಾಪನವನ್ನು ಸಕಾಲಿಕವಾಗಿ ನಡೆಸಲು ಎರಡು ಮೌಲ್ಯಮಾಪನ ಕೇಂದ್ರಗಳನ್ನು ಆರಂಭಿಸಲಾಗಿದ್ದು ಮಂಗಳೂರಿನ ರಥಬೀದಿಯ ಡಾ.ಪಿ.ದಯಾನಂದ ಪೈ-ಪಿ.ಸತೀಶ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಾಗೂ ಉಡುಪಿಯ ಎಂ.ಜಿ.ಎಂ ಕಾಲೇಜಿನಲ್ಲಿ ವಾಣಿಜ್ಯಶಾಸ್ತ್ರ ಉತ್ತರಪತ್ರಿಕೆಗಳ ಮೌಲ್ಯಮಾಪನ ಪ್ರಕ್ರಿಯೆಯು ಸಕಲ ಸಿದ್ಧತೆಗಳೊಂದಿಗೆ ಆರಂಭಗೊಂಡಿರುತ್ತದೆ.
ಸ್ಯಾನಿಟೈಶೇಷನ್, ಕಡ್ಡಾಯ ಮಾಸ್ಕ್‌ಧಾರಣೆ, ಸಾಮಾಜಿಕ ಅಂತರವನ್ನು ಕಾಪಾಡಿಕೊಂಡು ಹಿರಿಯ ಉಪನ್ಯಾಸಕರುಗಳಿಗೆ ಮೌಲ್ಯಮಾಪನವನ್ನು ಕಡ್ಡಾಯಗೊಳಿಸಿದೆ ಸಕಾಲದಲ್ಲಿ ವಿದ್ಯಾರ್ಥಿಗಳಿಗೆ ಫಲಿತಾಂಶ ನೀಡಿ ಸ್ನಾತಕೋತ್ತರ ಪ್ರವೇಶ ಪ್ರಕ್ರಿಯೆಯನ್ನು ಸುಗಮಗೊಳಿಸಲು ವಿಶ್ವವಿದ್ಯಾನಿಲಯವು ತಯಾರಾಗಿರುತ್ತದೆ ಎಂದು ಕುಲಸಚಿವರು ತಿಳಿಸಿದರು.
ಮಂಗಳೂರಿನ ಡಾ.ಪಿ.ದಯಾನಂದ ಪೈ- ಪಿ.ಸತೀಶ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಮೌಲ್ಯಮಾಪನ ಪೂರ್ವಭಾವಿ ಸಭೆಯಲ್ಲಿ ಕುಲಸಚಿವರು ವಿಶ್ವವಿದ್ಯಾನಿಲಯವನ್ನು ಪ್ರತಿನಿಧಿಸಿ ಮಾತನಾಡಿದರು. ಮಂಗಳೂರು ಮೌಲ್ಯಮಾಪನ ಕೇಂದ್ರಕ್ಕೆ ೪೦೦ ಮಂದಿ ಹಾಗೂ ಉಡುಪಿ ಮೌಲ್ಯಮಾಪನ ಕೇಂದ್ರಕ್ಕೆ ೧೦೦ ಮಂದಿಯನ್ನು ಮೌಲ್ಯಮಾಪಕರಾಗಿ ಆಯ್ಕೆ ಮಾಡಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಉಪನ್ಯಾಸಕರು ಮೌಲ್ಯಮಾಪನಕ್ಕೆ ಹಾಜರಾಗಿದ್ದರು.
ಕಾರ್ಯಕ್ರಮದಲ್ಲಿ ವಾಣಿಜ್ಯಶಾಸ್ತ್ರ ಪರೀಕ್ಷಾ ಮಂಡಳಿಯ ಅಧ್ಯಕ್ಷ ಶಿರ್ವದ ಸುಂದರಾಮ ಶೆಟ್ಟಿ ಕಾಲೇಜಿನ ಪ್ರೊ. ಕೆ.ಜಿ ಮಂಜುನಾಥ, ಸುಬ್ರಹ್ಮಣ್ಯದ ಕೆ.ಎಸ್.ಎಸ್ ಕಾಲೇಜಿನ ಪ್ರೊ. ಬಾಲಕೃಷ್ಣ ಪೈ. ಪಿ, ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ರಾಜಶೇಖರ್ ಹೆಬ್ಬಾರ್ ಸಿ. ಮತ್ತಿತರರು ಉಪಸ್ಥಿತರಿದ್ಧರು.