ಸಕಲ ಸರ್ಕಾರಿ ಗೌರವಗಳೊಂದಿಗೆ ಮಾಜಿ ಶಾಸಕ ವಾಲ್ಮೀಕಿ ನಾಯಕ್ ಅಂತ್ಯಕ್ರಿಯೆ

ಕಲಬುರಗಿ:ಮಾ.20:ಹೃದಯಾಘಾತದಿಂದ ನಿಧನರಾದ ಚಿತ್ತಾಪುರ ಮೀಸಲು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ವಾಲ್ಮೀಕಿ ನಾಯಕ್ ಅವರ ಅಂತ್ಯಕ್ರಿಯೆ ಶನಿವಾರ ಸಕಲ ಸರ್ಕಾರಿ ಗೌರವಗಳೊಂದಿಗೆ ವಾಡಿ ಪಟ್ಟಣದ ಅವರ ಸ್ವಂತ ಜಮೀನಿನಲ್ಲಿ ನೆರವೇರಿತು.
ಪೋಲಿಸರು ಮೂರು ಸುತ್ತು ಗಾಳಿಯಲ್ಲಿ ಗುಂಡು ಹಾರಿಸುವ ಮೂಲಕ ಸಕಲ ಸರ್ಕಾರಿ ಗೌರವದೊಂದಿಗೆ ಬಂಜಾರಾ ಸಮುದಾಯದ ಧಾರ್ಮಿಕ ವಿಧಿ- ವಿಧಾನಗಳ ಬಳಿಕ ವಾಲ್ಮೀಕಿ ನಾಯಕ್ ಅವರ ಹಿರಿಯ ಪುತ್ರ ವಿಠಲ್ ನಾಯಕ್ ಅವರು ಚಿತೆಗೆ ಅಗ್ನಿಸ್ಪರ್ಶ ಮಾಡಿದರು. ನಾಯಕ್ ಅವರ ಅಂತಿಮ ಯಾತ್ರೆಯಲ್ಲಿ ಕಲಬುರ್ಗಿ ಸೇರಿದಂತೆ ಯಾದಗಿರಿ, ಬೀದರ್ ಜಿಲ್ಲೆಗಳಿಂದ ಅಪಾರ ಅಭಿಮಾನಿಗಳು, ಬಂಜಾರಾ ಸಮುದಾಯದ ಮುಖಂಡರು ಭಾಗವಹಿಸಿದ್ದರು.
ರಾಜ್ಯದ ಪಶು ಸಂಗೋಪನೆ, ಬೀದರ್ ಹಾಗೂ ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್, ಸಂಸದ ಡಾ. ಉಮೇಶ್ ಜಾಧವ್, ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಅಧ್ಯಕ್ಷ ದತ್ತಾತ್ರೇಯ್ ಪಾಟೀಲ್ ರೇವೂರ್, ಜಿಲ್ಲಾ ಸಹಕಾರ ಬ್ಯಾಂಕ್, ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷರೂ ಆದ ಸೇಡಂ ಶಾಸಕ ರಾಜಕುಮಾರ್ ಪಾಟೀಲ್ ತೆಲ್ಕೂರ್, ಶಾಸಕರಾದ ಚಿತ್ತಾಪುರದ ಪ್ರಿಯಾಂಕ್ ಖರ್ಗೆ, ಗ್ರಾಮೀಣ ಕ್ಷೇತ್ರದ ಬಸವರಾಜ್ ಮತ್ತಿಮೂಡ್, ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ್, ನಾಲವಾರ್ ಕೋರಿಸಿದ್ದೇಶ್ವರ್ ಮಠದ ಪೀಠಾಧಿಪತಿ ಡಾ. ಸಿದ್ಧ ತೋಟೆಂದ್ರ ಶಿವಾಚಾರ್ಯರು ಸೇರಿದಂತೆ ಅನೇಕರು ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಂಡಿದ್ದರು.
ಈ ಸಂದರ್ಭದಲ್ಲಿ ಸಂಸದ ಡಾ. ಉಮೇಶ್ ಜಾಧವ್, ಮಾಜಿ ಸಚಿವರೂ ಆದ ರಾಜ್ಯ ವಿಧಾನ ಪರಿಷತ್ ಸದಸ್ಯ ಸುನೀಲ್ ವಲ್ಲ್ಯಾಪುರ, ಮಾಜಿ ಶಾಸಕ ವಿಶ್ವನಾಥ್ ಪಾಟೀಲ್ ಹೆಬ್ಬಾಳ್, ಕಾಡಾ ಅಧ್ಯಕ್ಷ ಶರಣಪ್ಪ ತಳವಾರ್, ಮುಖಂಡ ಧರ್ಮಣ್ಣ ಇಟಗಾ ಮುಂತಾದವರು ಉಪಸ್ಥಿತರಿದ್ದರು.