ಸಂಸ್ಥಾಪನಾ ದಿನಾಚರಣೆ ಮತ್ತು ರಸಪ್ರಶ್ನೆ ಉದ್ಘಾಟನೆಯ ಕಾರ್ಯಕ್ರಮ

ಸಂಜೆವಾಣಿ ವಾರ್ತೆ
ಪಿರಿಯಾಪಟ್ಟಣ.ಮೇ.26:- ಇಂದಿನ ಯುವಜನತೆ ಸಾಹಿತ್ಯ, ನಾಟಕ, ಸಂಗೀತ, ಗ್ರಾಮೀಣ ಕಲೆಗಳ ಕಲಿಕೆ ಮುಂತಾದವುಗಳಲ್ಲಿ ಆನಂದವನ್ನು ಹುಡುಕುವುದು ಕಲಿಯಬೇಕು ಎಂದು ಕಸಾಪ ಅಧ್ಯಕ್ಷ ನವೀನ್‍ಕುಮಾರ್ ತಿಳಿಸಿದರು.
ಪಿರಿಯಾಪಟ್ಟಣದ ಆದಿಚುಂಚನಗಿರಿ ಶಿಕ್ಷಣ ಸಂಸ್ಥೆ ಬಿಜಿಎಸ್ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಸಂಸ್ಥಾಪನಾ ದಿನಾಚರಣೆ ಮತ್ತು ರಸಪ್ರಶ್ನೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಇಂದಿನ ಯುವಕರು ಕ್ರಿಕೇಟ್ ಬೆಡ್ಡಿಂಗ್, ವೀಲಿಂಗ್, ಮೊಬೈಲ್ ಗೇಮಿಂಗ್ ಮುಂತಾದ ಗೀಳಿಗೆ ಬಿದ್ದು ತಮ್ಮ ಅಮೂಲ್ಯ ಸಮಯವನ್ನು ಹಾಳುಮಾಡಿಕೊಂಡು ಭವಿಷ್ಯವನ್ನು ಕತ್ತಲು ಮಾಡಿಕೊಳ್ಳುತ್ತಿದ್ಧಾರೆ. ಅಲ್ಲದೆ ಮಾದಕ ವಸ್ತುಗಳ ಬಳಕೆ ಇತ್ತೀಚೇಗೆ ಹೆಚ್ಚಾಗುತ್ತಿರುವುದು ಆತಂಕದ ಸಂಗತಿ ಆದ್ದರಿಂದ ವಿದ್ಯಾರ್ಥಿಗಳು ಕಾಲೇಜು ಹಂತದಲ್ಲಿಯೇ ಸಾಹಿತ್ಯ, ನಾಟಕ ಮುಂತಾದವುಗಳ ಬಗ್ಗೆ ಆಸಕ್ತಿ ವಹಿಸಬೇಕು, ಚಾರಣ, ಪಕ್ಷಿವೀಕ್ಷಣೆ, ವಜ್ಯಜೀವಿ ಅಧ್ಯಯನ ಅನೇಕ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ತಮ್ಮ ವೈಯುಕ್ತಿಕ ಅಭಿವೃದ್ದಿಯೆ ಜೊತೆಗೆ ಸಮಾಜ ಸೇವೆಯನ್ನು ಮಾಡಬಹುದು, ಅಲ್ಲದೆ ಇವುಗಳಲ್ಲಿಯೂ ಉತ್ತಮವಾದುದನ್ನು ಸಾಧಿಸಬಹುದು, ಕನ್ನಡ ಸಾಹಿತ್ಯ ಪರಿಷತ್ತು ಸೇರಿ ಅನೇಕ ಸಂಸ್ಥೆಗಳು ಕನ್ನಡ ಸಾಹಿತ್ಯ,ಕವಿಗಳು ಮತ್ತು ಪುಸ್ತಕಗಳ ಬಗ್ಗೆ ಅರಿವು ಮುಡಿಸುವ ಕೆಲಸ ಮಾಡುತ್ತಿದ್ದು ಇದರೊಂದಿಗೆ ಸೇರಿ ಸೇವೆಗೆ ಮುಂದಾದರೆ ಇವುಗಳು ಸಮಾಜದಲ್ಲಿ ಉತ್ತಮ ಹೆಸರು ತಂದುಕೊಡುವುದಲ್ಲದೆ ನಮ್ಮ ನಾಡು ನುಡಿಗು ಕೊಡುಗೆ ನೀಡಿದಂತಾಗುತ್ತದೆ ಎಂದು ತಿಳಿಸಿದರು.
ಸಮಾರಂಭದ ಅಧ್ಯಕ್ಷತೆವಹಿಸಿದ್ದ ಪ್ರಾಂಶುಪಾಲರಾದ ಪ್ರವೀಣ್ ಮಾತನಾಡಿ ನಾಲ್ವಡಿ ಕೃಷ್ಣರಾಜ ಒಡೆಯರ್‍ನಿಂದ ಸ್ಥಾಪಿತವಾದ ಕನ್ನಡ ಸಾಹಿತ್ಯ ಪರಿಷತ್ತು ಅತಿದೊಡ್ಡ ಸಂಘಟನೆಯಾಗಿ ಬೆಳೆದಿದ್ದು ನಮ್ಮೆಲ್ಲರಿಗೂ ಹೆಮ್ಮೆಯ ಸಂಘತಿ, ವಿದ್ಯಾರ್ಥಿ ಜೀವನದಲ್ಲಿಯೇ ಕಥೆ, ಕಾಂದಬರಿಗಳನ್ನು ಓದುವ ಹವ್ಯಾಸ ರೂಢಿಸಿಕೊಳ್ಳಬೇಕು ಇದರಿಂದ ಅಪಾರ ಜ್ಞಾನ ಹೆಚ್ಚಾಗುವುದಲ್ಲದೆ ಓದಿಗು ಅನುಕೂಲವಾಗಲಿದೆ, ವ್ಯಕ್ತಿತ್ವದ ವಿಕಸನಕ್ಕೆ ಸಾಹಿತ್ಯ ಅಗತ್ಯವಾಗಿದ್ದು ಯುವಜನತೆ ಇದರ ಬಗ್ಗೆ ಹೆಚ್ಚಿನ ಆಸಕ್ತಿವಹಿಸಬೇಕು ಎಂದು ತಿಳಿಸಿದರು.
ರಸಪ್ರಶ್ನೆ ಕಾರ್ಯಕ್ರಮ ಈ ಸಂದರ್ಭದಲ್ಲಿ ರಸಪ್ರಶ್ನೆ ಕಾರ್ಯಕ್ರಮವನ್ನು ಏರ್ಪಡಿಸಲಾಗಿದ್ದು 50ಕ್ಕೂ ಹೆಚ್ಚು ಮಂದಿ ವಿದ್ಯಾರ್ಥಿಗಳು ರಸಪ್ರಶ್ನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಬಹುಆಯ್ಕೆಯ ಪ್ರಶ್ನೆಗಳಿಗೆ ಉತ್ತರಿಸಿದರು. ಇದರಲ್ಲಿ ಕೀರ್ತಿಕುಮಾರ್ ಪ್ರಥಮ, ದ್ವಿತೀಯ ಬಹುಮಾನವನ್ನು ಅನನ್ಯ ಮತ್ತು ಮುತ್ತುರಾಜ್ ಹಂಚಿಕೊಂಡರು, ತೃತೀಯ ಬಹುಮಾನ ಹೇಮಂತ್ ಮತ್ತು ಯಶಸ್ವಿನಿ ಪಡೆದುಕೊಂಡೆರೆ ಜೆ.ಜಿ.ಕಾರ್ತಿಕ್, ಸುನಿಲ್ ಸಮಾಧಾನಕರ ಬಹುಮಾನ ಪಡೆದುಕೊಂಡರು. ಬಹುಮಾನಿತರಿಗೆ ನಗದು ಬಹುಮಾನ ಮತ್ತು ಕನ್ನಡದ ಮಹನೀಯರ ಪರಿಚಯದ ಪುಸ್ತಕಗಳನ್ನು ಬಹುಮಾನವಾಗಿ ನೀಡಲಾಯಿತು.
ಈ ಸಂದರ್ಭದಲ್ಲಿ ರಾವಂದೂರು ಕಸಾಪ ಹೋಬಳಿ ಅಧ್ಯಕ್ಷ ಶೆಟ್ಟಹಳ್ಳಿ ಮಹದೇವ್, ಉಪನ್ಯಾಸಕರಾದ ಸ್ವಾಮಿ, ಅವಿನಾಶ್, ಪ್ರಸಾದ್, ಅವಿನಾಶ್ ಕೆ.ಎಲ್., ದಿವ್ಯ, ಶಿಲ್ಪ, ಸೇರಿದಂತೆ ಮತ್ತಿತರರು ಹಾಜರಿದ್ದರು.