ಸಂಸ್ಕೃತಿ ಇಲಾಖೆಯಲ್ಲಿ ಅವ್ಯವಹಾರ ಕಲಾವಿದರ ಆರೋಪ

ಬಳ್ಳಾರಿ,ಜೂ.೬- ನಾಡಿನ ಜನತೆಗೆ ಸಂಗೀತ, ನೃತ್ಯ, ನಾಟಕಗಳ ಮೂಲಕ ಜೀವನದ ಮೌಲ್ಯಗಳನ್ನು ತಿಳಿಸಬೇಕಾದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿ. ಕಾರ್ಯಕ್ರಮ ಮಾಡದೆ ಹಣ ಲಪಟಾಯಿಸುವ, ನಕಲಿ ಬಿಲ್ ಸೃಷ್ಟಿ, ಕಲಾವಿದರಿಂದ ಹಿರಿಯ ಅಧಿಕಾರಿಗಳ ಹೆಸರಲ್ಲಿ ಬೆದರಿಸಿ ಹಣ ಸಂಗ್ರಹ ಮೊದಲಾದವುಗಳ ಮೂಲಕ ಕೆಲ ಸಹಾಯಕ ನಿರ್ದೇಶಕರುಗಳಿಂದ “ಅಸಂಸ್ಕೃತಿಯ” ಇಲಾಖೆಯಾಗಿದೆ ಬಳ್ಳಾರಿ ಜಿಲ್ಲೆಯ ಕಲಾವಿದರ ವೇದಿಕೆಯ ಕಲಾವಿದರು ಆರೋಪಿಸಿದ್ದಾರೆ.

ವೇದಿಕೆಯ ಸಂಚಾಲಕ, ರಂಗ ಕರ್ಮಿ ಕೆ.ಜಗದೀಶ ಮತ್ತಿತರ ಕಲಾವಿದರು ಇಂದು ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ. ಈ ಹಿಂದೆ ಬಳ್ಳಾರಿ, ವಿಜಯನಗರ ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ ಈ ಇಲಾಖೆಯ ಸಹಾಯಕ ನಿರ್ದೇಶಕರಾಗಿ, ಕಲಾವಿದರಿಂದ ಹಣ ಸಂಗ್ರಹದ ಆರೋಪದ ಮೇಲೆ ಅಮಾನತುಗೊಂಡು ನಂತರ ಇಲಾಖೆಯ ವಿಚಾರಣೆ ಬಾಕಿ ಇರಿಸಿ ಸಧ್ಯ ಹಾವೇರಿ ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಿದ್ದಲಿಂಗೇಶ ರಂಗಣ್ಣನವರ್ ತಮ್ಮಅವಧಿಯಲ್ಲಿ ಮಾಡಿರುವ ಹಗರಣಗಳ ಬಗ್ಗೆ ಮತ್ತು ಹಾಲಿ ಕೊಪ್ಪಳದ ಸಹಾಯಕ ನಿರ್ದೇಶಕ ಕೊಟ್ರೇಶ್ ಮತ್ತು ಬಳ್ಳಾರಿಯ ಪ್ರಭಾರಿ ಸಹಾಯಕನಿರ್ದೇಶಕ ಸುರೇಶ್ ಅವರು ಸಹ ಹಗರಣದ ದಾಖಲೆಗಳನ್ನು ಮಾಹಿತಿ ಹಕ್ಕಿನಡಿ ಕೇಳಿದರೂ ನೀಡುತ್ತಿಲ್ಲ ಅಂದರೆ ಇವರು ಸಹ ಸಿದ್ದಲಿಂಗೇಶ್ ಅವರ ಜೊತೆ ಶಾಮೀಲಾಗಿದ್ದಾರೆ ಎನಿಸುತ್ತಿದೆ ಎಂದು ಆರೋಪಿಸಿದ್ದಾರೆ.

ಸಿದ್ಧಲಿಂಗೇಶ ಕೆ. ರಂಗಣ್ಣನವರ್ ಮತ್ತು ಕೊಟ್ರೇಶ್ ಅವರ ಅವಧಿಯಲ್ಲಿ ಬಳ್ಳಾರಿ ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ ನಡೆದಿರುವ ಎಲ್ಲಾ ಕಾರ್ಯಕ್ರಮಗಳ ಸಂಭಾವನೆಗಳ ಪಾವತಿ, ರಸೀದಿ ಮತ್ತು ಅದಕ್ಕೆ ಸಂಬಂಧಿಸಿರುವ ಕಾರ್ಯಕ್ರಮಗಳ ಪೋಟೋಗಳು ಅಸಲಿಯೋ ನಕಲಿಯೋ ಎಂಬುದನ್ನು ಕೂಲಂಕಷವಾಗಿ ತನಿಖೆ ಮಾಡಬೇಕೆಂದು ಆಗ್ರಹಿಸಿದರು.