ಸಂಸ್ಕೃತಿ, ಇತಿಹಾಸವನ್ನು ತಿಳಿಸುವ ಮಹತ್ವದ ಕೊಂಡಿ

ರಾಯಚೂರು,ಮೇ.೧೯- ಪುರಾತತ್ವ ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆ, ಸರ್ಕಾರಿ ವಸ್ತು ಸಂಗ್ರಹಾಲಯ ಹಾಗೂ ಎಲ್‌ವಿಡಿ ಕಾಲೇಜು ಮಹಾವಿದ್ಯಾಲಯ ಇವರ ಸಂಯುಕ್ತಾಶ್ರಾಯದಲ್ಲಿ ಅಂತರಾಷ್ಟ್ರೀಯ ವಸ್ತು ಸಂಗ್ರಹಾಲಯ ದಿನಾಚರಣೆಯನ್ನು ಮೇ.೧೮ ರ ನಗರದ ಸರ್ಕಾರಿ ವಸ್ತು ಸಂಗ್ರಹಾಲಯ ನವರಂಗ ದರ್ವಜಾನಲ್ಲಿ ಆಚರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಸರ್ಕಾರಿ ವಸ್ತು ಸಂಗ್ರಹಾಲಯದ ಕ್ಯೂರೇಟರ್ ಪ್ರಭಾರಿ ಶಿವಪ್ರಕಾಶ್ ಮಾತನಾಡಿ, ಕಾಲ ಗರ್ಭದಲ್ಲಿ ಹೂತು ಹೋಗಿದ್ದ ಹಾಗೂ ಮರೆತು ಹೋಗಿದ್ದ ಸ್ಮಾರಕ, ಶಾಸನಗಳು, ನಾಣ್ಯಗಳು ಕಾಲ ಭಗ್ನಾವಶೇಷಗಳನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗೆ ಇತಿಹಾಸದ ಬಳುವಳಿಯಾಗಿ ನೀಡಬೇಕಾಗಿದ್ದು, ಪ್ರತಿಯೊಬ್ಬರ ಕರ್ತವ್ಯವೆಂದು ಹೇಳಿದರು. ಹಿಂದಿನ ಜನರ ಜೀವನ ಶೈಲಿ, ರಾಜ ಮನೆತನಗಳ ಆಳ್ವಿಕೆ, ಅವರು ಬಳಸುತ್ತಿದ್ದ ವಸ್ತುಗಳು, ಕಲೆಗೆ ಅವರು ನೀಡುತ್ತಿದ್ದ ಪ್ರೋತ್ಸಾಹ ಎಲ್ಲವನ್ನು ಪ್ರಾಚ್ಯ ವಸ್ತುಗಳಿಂದ ತಿಳಿಯಬಹುದಾಗಿದೆ ಎಂದರು.
ವಸ್ತು ಸಂಗ್ರಹಾಲಯಗಳು ಆಯಾ ದೇಶಗಳ ಸಂಸ್ಕೃತಿ, ಇತಿಹಾಸವನ್ನು ತಿಳಿಸುವ ಮಹತ್ವದ ಕೊಂಡಿಗಳಾಗಿವೆ. ಇತಿಹಾಸ, ಸಂಸ್ಕೃತಿಯನ್ನು ಪರಿಚಯಿಸುವ ಕೆಲಸ ಮಾಡುತ್ತಿರುವ ವಸ್ತು ಸಂಗ್ರಹಾಲಯಗಳ ಮಹತ್ವವನ್ನು ತಿಳಿಯಪಡಿಸುವ ದೃಷ್ಟಿಯಿಂದ ಮೇ ೧೮ ರಂದು ವಿಶ್ವಸಂಸ್ಥೆ ವಿಶ್ವದಾದ್ಯಂತ ವಸ್ತು ಸಂಗ್ರಹಾಲಯಗಳ ದಿನಾಚರಣೆಯನ್ನು ಆಚರಣೆ ಮಾಡುತ್ತಿದೆ’ ಎಂದು ವಿವರಿಸಿದರು.
ಈ ಸಂದರ್ಭದಲ್ಲಿ ದತ್ತ್ ಭಟ್, ಮೆಹಬೂಬ್ ಜಿಲಾನಿ, ಚನ್ನರೆಡ್ಡಿ ಕಾಲೇಜು ವಿದ್ಯಾರ್ಥಿಗಳಿಗೆ ಸೇರಿದಂತೆ ಉಪಸ್ಥಿತರಿದ್ದರು.