ಸಂಸ್ಕೃತಿಯ ಜೀವಂತಿಕೆಗೆ ಸಂಸ್ಥೆಗಳ ಸಹಕಾರ ಅಗತ್ಯ

ಚಿತ್ರದುರ್ಗ.ನ.೨೦: ಕನ್ನಡ ಭಾಷೆ, ಕಲೆ, ಸೊಗಡು ಉಳಿಯಲು ರೋಟರಿ ಸೇರಿದಂತೆ ವಿವಿಧ ಸಂಘ, ಸಂಸ್ಥೆಗಳು ಸಹಕಾರ ನೀಡಿದರೆ ಮಾತ್ರ ಕಸಾಪವು ಭಾಷೆ, ಸಂಸ್ಕೃತಿಯ ಜೀವಂತಿಕೆಗೊಳಿಸುವ ಕಾರ್ಯಕ್ರಮಗಳನ್ನು ನೀಡಲು ಸಾಧ್ಯ ಎಂದು ರೋಟರಿ ಕ್ಲಬ್ ಚಿನ್ಮೂಲಾದ್ರಿ ಅಧ್ಯಕ್ಷ ಇ.ಅರುಣ್ ಕುಮಾರ್ ಹೇಳಿದರುನಗರ ಸಮೀಪದ ಗೋನೂರು ಗ್ರಾಮದ ನಿರಾಶ್ರಿತರ ಪುನರ್ವಸತಿ ಕೇಂದ್ರದಲ್ಲಿ ಜಿಲ್ಲಾ ಕಸಾಪ, ಅಖಿಲ ಭಾರತ ವೀರಶೈವ ಮಹಾಸಭಾ, ಹಾಗು ರೋಟರಿ ಕ್ಲಬ್ ಸಹಯೋಗದಲ್ಲಿ  ನಡೆದ ನಾವಾಡುವ ನುಡಿಯೇ ಕನ್ನಡ ನುಡಿ ಗೀತ ಗಾಯನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಜಿಲ್ಲೆಯಲ್ಲಿ ರೋಟರಿ ಸಂಸ್ಥೆಯು ತನ್ನದೇ ಆದ ಸಮಾಜಮುಖಿ ಚಟುವಟಿಕೆಗಳಿಗೆ ಸದಾ ಪ್ರೋತ್ಸಾಹಿಸುತ್ತಲೇ ಬಂದಿದೆ. ಈಗ ಕನ್ನಡ ಸಾಹಿತ್ಯ ಪರಿಷತ್ ರೋಟರಿ ಸಹಯೋಗದೊಂದಿಗೆ ಇಂತಹ ಸ್ಥಳದಲ್ಲಿ ಕನ್ನಡ ಗೀತೆಗಾಯನಗಳ ಕಾರ್ಯಕ್ರಮ ಆಯೋಜಿಸಿರುವುದು ಸಂತಸದ ವಿಚಾರ. ಭಾಷೆ, ಸಂಸ್ಕೃತಿಯನ್ನು ಬಿಂಬಿಸುವ ಕಲೆಯನ್ನು ಜೀವಂತವಾಗಿರಿಸುವ ಇಂತಹ ಕೆಲಸಗಳಿಗೆ ರೋಟರಿ ಸಂಸ್ಥೆ ಯಾವಾಗಲೂ ಬೆಂಬಲವಾಗಿರುತ್ತದೆ ಎಂದು ತಿಳಿಸಿದರು.ಅಖಿಲ ಭಾರತ ವೀರಶೈವ ಮಹಾಸಭಾದ ರಾಜ್ಯ ಪ್ರಧಾನ ಕಾರ್ಯದರ್ಶಿ ಹೆಚ್.ಎಂ. ರೇಣುಕಾ ಪ್ರಸನ್ನ ಮಾತನಾಡಿ, ಜೀವನದಲ್ಲಿ ಆಕಸ್ಮಿಕವಾಗಿ ಜರುಗಿದ ಘಟನೆಗಳಿಂದಾಗಿ ನೀವುಗಳು ಈ ಪುನರ್ವಸತಿ ಕೇಂದ್ರಕ್ಕೆ ಬಂದಿದ್ದೀರಿ. ಬೇಗ ಗುಣಮುಖರಾಗಿ ನಿಮ್ಮ ಪರಿವಾರದೊಂದಿಗೆ ಜೀವನ ಕಳೆಯಿರಿ. ಇಲ್ಲಿನ ವಾತಾವರಣ ಸುಂದರವಾಗಿದ್ದು, ಯಾರಿಗಾದರೂ ಇಲ್ಲಿಂದ ಹೊರಹೋಗಲು ಮನಸ್ಸಾಗುವುದಿಲ್ಲ. ಆದರೆ ಕುಟುಂಬ ದೊಡ್ಡದು ಅವರೊಂದಿಗಿನ ಜೀವನ ಸಾಗಿಸಲು ಪ್ರಯತ್ನಿಸಿರಿ. ರಾಜ್ಯದ ಹಲವಾರು ಪುನರ್ವಸತಿ ಕೇಂದ್ರಗಳನ್ನು ನೋಡಿದ್ದೇನೆ. ಇಲ್ಲಿನ ಕೇಂದ್ರವೇ ಭಿನ್ನವಾಗಿದೆ. ಕೇಂದ್ರದ ಅಧೀಕ್ಷಕ ಮಹದೇವಯ್ಯ ಮಾತೃ ಹೃದಯದಿಂದ ನಿಮ್ಮನ್ನು ಸಲಹುತ್ತಿದ್ದಾರೆ ಎಂದು ನಿಮ್ಮನ್ನು ನೋಡಿದರೆ ಮೇಲ್ನೋಟಕ್ಕೆ ತಿಳಿಯುತ್ತದೆ ಎಂದು ಪುನರ್ವಸತಿ ಕೇಂದ್ರದ ವಾತಾವರಣವನ್ನು ಶ್ಲಾಘಿಸಿದರು.