ಸಂಸ್ಕಾರ ಕಲಿತ ಮಕ್ಕಳು ದೇಶದ ಆಸ್ತಿ: ಶಿವರುದ್ರಪ್ಪ ಮೇಟಿ

ದಾವಣಗೆರೆ. ಜ.೨೨; ಜೀವನದಲ್ಲಿ ಸಂಸ್ಕಾರ ಕಲಿತ ಮಕ್ಕಳು ದೇಶದ ಆಸ್ತಿ ಎಂದು ಸಂತೆಬೆನ್ನೂರು ಠಾಣೆಯ ಸಬ್ ಇನ್ಸ್ ಪೆಕ್ಟರ್ ಶಿವರುದ್ರಪ್ಪ ಮೇಟಿ ಅಭಿಪ್ರಾಯ ಪಟ್ಟರು.ಸಮೀಪದ ಎಕ್ಕೆಗೊಂದಿ ಗ್ರಾಮದಲ್ಲಿ ಏರ್ಪಡಿಸಿದ್ದ ತುಮಕೂರು ಸಿದ್ದಗಂಗಾ ಶ್ರೀಗಳ ನಾಲ್ಕನೆಯ ವರ್ಷದ ಪುಣ್ಯಸ್ಮರಣೆಯ ಕಾರ್ಯಕ್ರಮ ದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.ಕಲಿತ ಮಕ್ಕಳು, ವಿದ್ಯಾವಂತ ಮಕ್ಕಳೇ ಹೆತ್ತವರ ಶೋಷಿಸಿ ವೃದ್ಧಾಶ್ರಮಕ್ಕೆ  ನೂಕುತ್ತಿದ್ದಾರೆ ಇದು ಈ ನಾಗರಿಕ ಸಮಾಜದ ದುರಂತ ಎಂದರು. ಸಾಹಿತಿ ಸಂತೆಬೆನ್ನೂರು ಫೈಜ್ನಟ್ರಾಜ್ ಅತಿಥಿ ಭಾಷಣ ಮಾಡುತ್ತಾ ಶರಣರ ವಚನಗಳು ಇಂದಿನ ಪೀಳಿಗೆ ಅರಿಯಬೇಕು. ಜ್ಞಾನ, ತಿಳಿವಳಿಕೆಯ ಜೊತೆಗೆ ಅಕ್ಷರ ದ ಹಸಿವು,  ಬೌದ್ಧಿಕ ಹಸಿವು ನೀಗಿಸಿ ಬಾಳಬೇಕು. ಶ್ರೀ ಗಳ ಮಾರ್ಗದರ್ಶನ ಈ ಗ್ರಾಮಕ್ಕಿದೆ ಇಲ್ಲಿನ ನೆಲ ತುಮಕೂರು ಮಠದ ಮಾದರಿಯಾಗಲಿ ಎಂದು ಹೇಳಿದರು. ಯುಗಧರ್ಮ ರಾಮಣ್ಣ ಜನಪದ ಲಾವಣಿಗಳ ಮೂಲಕ ಕಾರ್ಯಕ್ರಮ ದ ಕಳೆ ಹೆಚ್ಚಿಸಿದರು.  ಜನಪದ ವಿದ್ವಾಂಸರಾದ ಕೋಗಲೂರು ಶರಣಪ್ಪ ಇಂದಿನ ದಾಂಪತ್ಯ ದಲ್ಲಿನ ಬಿರುಕನ್ನು ಹಾಸ್ಯ ಚಟಾಕಿಯ ಮೂಲಕ ವಿವರಿಸಿದರು. ಮತ್ತೋರ್ವ ಅತಿಥಿ ಹೊನ್ನಾಯಕನ ಹಳ್ಳಿಯ ಮುರಿಗೇಂದ್ರಪ್ಪ ಜನಜೀವನದ ಸರಳತೆ ಬಗ್ಗೆ ಮಾತಾಡಿ ಜನಪದ ಗೀತೆಗಳನ್ನು ಹಾಡಿ ರಂಜಿಸಿದರು.ಸುಶೀಲಮ್ಮ ಪ್ರಾರ್ಥನೆ ಮಾಡಿದರು. ವಿಜಯ ಕುಮಾರ್ ನಿರೂಪಣೆ ಮಾಡಿದರು. ಶಶಿಕುಮಾರ್ ಸ್ವಾಗತಿಸಿದರು. ಎಸ್. ಸಿ ರುದ್ರೇಶ್ ವಂದಿಸಿದರು.ಕೋಲಾಟ, ವೀರಗಾಸೆ, ಕುಂಭಮೇಳ ಕಾರ್ಯಕ್ರಮ ಜರುಗಿತು. ಸಿದ್ಧಗಂಗಾಶ್ರೀಗಳ ಶಿಷ್ಯರು ಮತ್ತು ಹಳೆಯ ವಿದ್ಯಾರ್ಥಿ ಸಂಘ ಆಯೋಜಿಸಿದ್ದ ಈ ಕಾರ್ಯಕ್ರಮ ದಲ್ಲಿ ಏರ್ ಟೆಲ್ ಗಣೇಶ್, ಜಿ.ಆರ್ ರಾಜಪ್ಪ, ಸಿ.ಎಲ್ ರವಿಕುಮಾರ್, ಶ್ರುತಿಗಣೇಶ್, ತಾರೇಶ್, ಲಿಂಗರಾಜ್, ನಾರಮ್ಮ ಸಾನಂದಪ್ಪ, ಬಸವರಾಜಪ್ಪ ಮುಂತಾದವರು ಹಾಜರಿದ್ದರು. ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು.