
ಸಂಜೆವಾಣಿ ವಾರ್ತೆ
ಸಿರುಗುಪ್ಪ, ಏ.11: ವೀರಶೈವ ಧರ್ಮದ ಆಚಾರ, ವಿಚಾರ, ನಡೆ-ನುಡಿ, ಯೋಗ, ಧ್ಯಾನ, ವೈದಿಕ, ಶಿವ ಪೂಜೆ ವಿಧಾನ ಇಂದಿನ ಮಕ್ಕಳು ಕಲಿಯುವುದು ಅವಶ್ಯಕ, “ಸಂಸ್ಕಾರ ಆದರ್ಶ ಜೀವನಕ್ಕೆ ದಾರಿ”ವಾಗಿರುತ್ತದೆಂದು ವೈ.ಜ್ಯೋ.ಪಾ.ಶಾಲೆಯ ಪ್ರಾಚಾರ್ಯ ಬಿ.ಎಂ.ಚಂದ್ರಮೌಳಿ ಹೇಳಿದರು.
ನಗರದ ನೀಲಕಂಠೇಶ್ವರ ಗುಡಿ ಹತ್ತಿರ ಶ್ರೀ ಜಗದ್ಗುರು ಪಂಚಾಚಾರ್ಯ ವೈದಿಕ ಜ್ಯೋತಿಷ್ಯ ಪಾಠಶಾಲೆಯ ಶ್ರೀಗುರು-ನಿರಂಜನ ಮನೆಯಲ್ಲಿ ಸಿರುಗುಪ್ಪ ತಾಲ್ಲೂಕು ವೀರಶೈವ ಜಂಗಮರ ಸಂಘದವತಿಯಿಂದ ವೀರಶೈವ ಲಿಂಗಾಯತ ಬಾಲಕ ಬಾಲಕಿಯರಿಗೆ ಉಚಿತವಾಗಿ ವೈದಿಕ ಸಂಸ್ಕಾರ ಶಿಬಿರವನ್ನು ನಡೆಸಲಾಯಿತು.
ಇಂದಿನ ಪೋಷಕರು ಕೆಲಸದ ಒತ್ತಡದಲ್ಲಿ ಮಕ್ಕಳಿಗೆ ಸ್ವಧರ್ಮದ ಸಂಸ್ಕಾರಗಳನ್ನು ಕಲಿಸುವ ಬದಲಿಗೆ ಮೊಬೈಲ್ ದಾಸರನ್ನಾಗಿಸಿದ್ದಾರೆ, ಅನ್ಯದೇಶದ ಸಂಸ್ಕೃತಿಯನ್ನು ಬಿಟ್ಟು ನಮ್ಮ ದೇಶದ ಗುರುಕುಲ ಪದ್ದತಿ, ಶರಣರ ಆಚಾರ ವಿಚಾರಗಳನ್ನು ಪೋಷಕರು ಮೈಗೂಡಿಸಿಕೊಂಡಲ್ಲಿ ಮಕ್ಕಳು ಕಲಿಯಲು ಸಾಧ್ಯವಾಗುತ್ತದೆಂದು ತಿಳಿಸಿದರು.
ರೇಣುಕಾಶ್ರಮದ ಎಚ್.ಎಂ.ಸಿದ್ದಲಿಂಗಯ್ಯ ಸ್ವಾಮಿ, ಆರ್ಚಕರಾದ ಚೆನ್ನಬಸವ, ಎಚ್.ಎಂ.ಸಿದ್ದೇಶ, ವಿಶ್ವನಾಥ ಸ್ವಾಮಿ, ವೀರಯ್ಯ ಸ್ವಾಮಿ ರವರಿಂದ ಬೋಧನೆ ನಡೆಯಿತು. ಕರಾಟೆ ಶಿಕ್ಷಕ ಮಲ್ಲಿಕಾರ್ಜುನ ಸ್ವಾಮಿ ರವರು ಯೋಗ, ಧ್ಯಾನ ಕಲಿಸಿಕೊಟ್ಟರು.
ಅಧ್ಯಕ್ಷ ಟಿ.ಎಂ.ಸಿದ್ದಲಿಂಗಸ್ವಾಮಿ, ಉಪಾಧ್ಯಕ್ಷ ಎಚ್.ಕೆ.ಸುರೇಶ ಸ್ವಾಮಿ, ಮುಖಂಡರಾದ ಎಂ.ಮಹಾಂತೇಶ ಸ್ವಾಮಿ, ಸಿಂಧು ಬಸವ, ಕೆ.ಎಂ.ವಿರೂಪಾಕ್ಷಯ್ಯ ಸ್ವಾಮಿ, ಜೆ.ಶಿವಮೂರ್ತಿ ಸ್ವಾಮಿ ಇದ್ದರು.