ಸಂಸ್ಕಾರ ಆಂಗ್ಲ ಮಾಧ್ಯಮ ಶಾಲೆಗೆ ಅಗ್ರಸ್ಥಾನ

ಹುಬ್ಬಳ್ಳಿ,ಜು29: ಸಂಸ್ಕಾರ ಆಂಗ್ಲ ಮಾಧ್ಯಮ ಸಿ.ಬಿ.ಎಸ್.ಇ ಶಾಲೆ ಸ್ವಚ್ಚ ಭಾರತ- ಸ್ವಚ್ಛ ವಿದ್ಯಾಲಯ 2021-22 ವರ್ಷದ ಸಮೀಕ್ಷೆಯಲ್ಲಿ ಅಗ್ರಸ್ಥಾನವನ್ನು ಕಾಯ್ದುಕೊಂಡು ರಾಜ್ಯಮಟ್ಟದ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ ಎಂದು ಪ್ರಕಟಣೆ ಹೇಳಿದೆ.
ಸ್ವಚ್ಛ ವಿದ್ಯಾಲಯ ಸಮೀಕ್ಷೆಯಲ್ಲಿ ಧಾರವಾಡ ಜಿಲ್ಲೆಯಿಂದ 1600 ಶಾಲೆಗಳ ಪೈಕಿ 1222 ಶಾಲೆಗಳು ಜಿಲ್ಲಾಮಟ್ಟದಲ್ಲಿ ಭಾಗವಹಿಸಿದ್ದವು. ಇದರಲ್ಲಿ ಅಂತಿಮವಾಗಿ ಆಯ್ಕೆಯಾದ 38, ಶಾಲೆಗಳಲ್ಲಿ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ
ವ್ಯಾಪ್ತಿಯಲ್ಲಿನ 9 ಶಾಲೆಗಳು ಮಾತ್ರ ರಾಜ್ಯಮಟ್ಟದ ಸಮೀಕ್ಷೆಗೆ ನಾಮ ನಿರ್ದೇಶನಗೊಂಡಿದ್ದು 95 ಪ್ರತಿಶತ ಅಂಕಗಳೊಂದಿಗೆ 5* (ಸ್ಟಾರ್) ಪಡೆದುಕೊಂಡು ಸಂಸ್ಕಾರ ಶಾಲೆ ಎಲ್ಲ ವಿಭಾಗದಿಂದಲೂ ಪ್ರಥಮ ಸ್ಥಾನ ಪಡೆದಿದ್ದು, ಈ ಮೂಲಕ ರಾಜ್ಯ ಮಟ್ಟದ ಸಮೀಕ್ಷೆಗೆ ನಾಮಾಂಕಿತ ಪಡೆದುಕೊಂಡಿತ್ತು.
ಅಂತೆಯೆ ಸಂಸ್ಕಾರ ಆಂಗ್ಲ ಮಾದ್ಯಮ ಶಾಲೆ ಇದೀಗ ರಾಜ್ಯ ಮಟ್ಟದ ಪ್ರಶಸ್ತಿಗೂ ಭಾಜನವಾಗಿದ್ದು, ಶಹರ (ಸೆಕೆಂಡರಿ) ವಿಭಾಗದಿಂದ ಧಾರವಾಡ ಜಿಲ್ಲೆಯಿಂದ ರಾಷ್ಟ್ರಮಟ್ಟದ ಪುರಸ್ಕಾರಕ್ಕೆ ನಾಮಾಂಕಿತಗೊಂಡ ಏಕೈಕ ಶಾಲೆಯಾಗಿದೆ. 34 ಜಿಲ್ಲೆಗಳಿಂದ 14 ಶಾಲೆಗಳಂತೆ ಒಟ್ಟು 476 ಶಾಲೆಗಳನ್ನು ರಾಜ್ಯಮಟ್ಟದಿಂದ ಆಯ್ಕೆ ಮಾಡಿಕಳುಹಿಸಲಾಗಿತ್ತು. ಸದರಿ ಶಾಲೆಗಳ ದಾಖಲೆಗಳನ್ನು ರಾಜ್ಯ ಸಮಿತಿಯ ಸದಸ್ಯರು ಪರಿಶೀಲಿಸಿ ರಾಷ್ಟ್ರ ಮಟ್ಟದ ಪ್ರಶಸ್ತಿಗೆ ಕರ್ನಾಟಕದಿಂದ ಶಾಲೆಗಳನ್ನು ಆಯ್ಕೆ ಮಾಡಿದ್ದು ಅದರಲ್ಲಿ ಧಾರವಾಡ ಜಿಲ್ಲೆಯಿಂದ ಎಲ್ಲ ವಿಭಾಗದಲ್ಲಿಯೂ ಹೆಚ್ಚು ಅಂಕಗಳನ್ನು ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ಹೆಗ್ಗಳಿಕೆ ಸಂಸ್ಕಾರ ಶಾಲೆಯದ್ದಾಗಿದೆ ಎಂದು ಪ್ರಕಟಣೆ ಹೇಳಿದೆ. ನಾಳೆ ಬೆಂಗಳೂರಿನ ಸಮಗ್ರ ಶಿಕ್ಷಣ ಕರ್ನಾಟಕ ಕಛೇರಿಯಲ್ಲಿ ನಡೆಯಲಿರುವ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾಗಿರುವ ಮಹೇಂದ್ರ ಸಿಂಘಿ ಪುರಸ್ಕಾರವನ್ನು ಸ್ವೀಕರಿಸಲಿದ್ದಾರೆ.