
ಅಳ್ನಾವರ,ಏ23: ಶರಣೆ ಅಕ್ಕ ಮಹಾದೇವಿ ನಡೆದು ಬಂದ ಹಾದಿಯನ್ನು ತಿಳಿದುಕೊಳ್ಳಬೇಕು. ಅವರ ಜನನ, ಸಾಧನೆ, ಧರ್ಮದ ಹಾದಿಯಲ್ಲಿ ನಡೆದು ಬಂದ ಸಿದ್ದಾಂತಗಳನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು. ವಚನ ಸಾಹಿತ್ಯ, ಸಂಸ್ಕಾರ ಅರಿತು ಬದುಕು ಕಟ್ಟಿಕೊಳ್ಳಿ ಎಂದು ಧಾರವಾಡ ಮುರುಘಾಮಠದ ಮಲ್ಲಿಕಾರ್ಜುನ ಮಹಾಸ್ವಾಮೀಜಿ ಹೇಳಿದರು.
ಇಲ್ಲಿನ ಅಕ್ಕ ಮಹಾದೇವಿ ಮಹಿಳಾ ಮಂಡಳದವರು ವೀರಶೈವ ಕಲ್ಯಾಣ ಮಂಟಪದ ಆವರಣದಲ್ಲಿ ನೂತನವಾಗಿ ನಿರ್ಮಿಸಿದ ದೇವಸ್ಥಾನ, ಅರಿವಿನ ಮನೆ, ಮೂರ್ತಿ ಪ್ರತಿಷ್ಟಾಪನೆ ನೇರವೇರಿಸಿದ ನಂತರ ನಡೆದ ಧರ್ಮ ಸಭೆಯಲ್ಲಿ ಆವರು ಆಶೀರ್ವಚನ ನೀಡಿದರು.
ಸಮಾಜದ ಎಲ್ಲ ವರ್ಗದ ಜನರ ಜೊತೆ ಬೆರೆತು, ಧಾರ್ಮಿಕ ಭಾವನೆ ಬೆಳೆಸಬೇಕು. ಶರಣರ ಚಿಂತನೆ ಇಂದಿನ ಯುವ ಪೀಳಿಗೆಗೆ ದಾರಿ ದೀಪವಾಗಬೇಕು. ಮಕ್ಕಳಲ್ಲಿ ಸಂಸ್ಕಾರ ಬಿತ್ತಬೇಕು. ಅಕ್ಕ ಮಹಾದೇವಿ ಅವರು ವಚನಗಳ ಸಾರವನ್ನು ಎಲ್ಲರೂ ಸರಿಯಾಗಿ ಅರ್ಥೈಸಿಕೊಂಡು ಜೀವನ ಸಾಗಿಸಬೇಕು ಎಂದರು.
ವಿಶೇಷ ಉಪನ್ಯಾಸ ನೀಡಿದ ಬೈಲಹೊಂಗಲದ ಪ್ರೇಮಕ್ಕ ಅಂಗಡಿ ಮಾತನಾಡಿ, ಬಾಹ್ಯ ಆಡಂಬರ ತೊರೆದು ಅಕ್ಕನ ಸರಳ ಬದುಕು ಅವಲೋಕನ ಮಾಡಿಕೊಂಡು ಮುನ್ನಡೆಯಬೇಕು. ವಚನಗಳು ನಮ್ಮ ಬದುಕಿಗೆ ಮಾರ್ಗಸೂಚಿಯಾಗಿವೆ. ವಚನಗಳಲ್ಲಿ ಯೋಗ ಬೆರೆತಿದೆ. ಬದುಕಿನ ಗುರಿ ಸಾಧನೆಗೆ ಬಾಲ್ಯದಿಂದಲೆ ಅದರ ಸಾರವನ್ನು ಅಳವಡಿಸಿಕೊಂಡಲ್ಲಿ ಸುಂದರ ಬದುಕು ನಿಮ್ಮದಾಗಲು ಸಾಧ್ಯ ಎಂದರು
ಬೆಳಿಗ್ಗೆಯಿಂದ ದೇವಸ್ಥಾನದಲ್ಲಿ ಹೋಮ, ಹವನ ಸೇರಿದಂತೆ ವಿವಿಧ ಧಾರ್ಮಿಕ ಕೈಂಕರ್ಯಗಳು ನಡೆದವು. ನಂತರ ಗಣೇಶ ಮಂದಿರದಿಂದ ಅಕ್ಕ ಮಹಾದೇವಿ ಮೂರ್ತಿಯ ಭವ್ಯ ಮೆರವಣಿಗೆ ಹೊರಟಿತು. ಮಹಿಳೆಯರು ತಲೆ ಮೆಲೆ ಕುಂಭ ಹೊತ್ತು ಮೆರವಣಿಗೆಗೆ ಮೆರಗು ತಂದಿದ್ದರು. ಹಬ್ಬದ ಕಳೆ ಮನೆ ಮಾಡಿತ್ತು.
ದೇವಸ್ಥಾನ ಕಟ್ಟಲು ಸಹಾಯ, ಸಹಕಾರ ನೀಡಿದ ಗಣ್ಯರ, ದಾನಿಗಳ ಸತ್ಕಾರ ನಡೆಯಿತು. ಮಂಜುಳಾ ಕುಂಬಾರ, ಪಾರ್ವತಿ ಕುಂಬಾರ, ಪೂರ್ಣಿಮಾ ಮುತ್ನಾಳ, ಮಂಜುಳಾ ಅಂಬಡಗಟ್ಟಿ ವಚನ ಓದಿದರು. ಜಯಶ್ರೀ ಉಡುಪಿ ಭಕ್ತಿ ಗೀತೆ ಹಾಡಿದರು. ಲತಾ ಬಾಗೇವಾಡಿ ಪ್ರಾರ್ಥಿಸಿದರು. ಲತಾ ಬಿಜಾಪೂರ ಸ್ವಾಗತಿಸಿದರು. ರೇಶ್ಮಿ ತೇಗೂರ ಪ್ರಾಸ್ತಾವಿಕವಾಗಿ ಮಾತನಾಡಿದರು. ಭಾಗ್ಯಾ ಸಾಂಬ್ರಾಣಿ ನಿರೂಪಿಸಿದರು. ಸುಮಾ ಸೊಪ್ಪಿ ವಂದಿಸಿದರು.
ವೀರಶೈವ ಸಮಾಜದ ಅಧ್ಯಕ್ಷ ಎಸ್.ಬಿ. ಪಾಟೀಲ, ಉಪಾಧ್ಯಕ್ಷ ಪ್ರಕಾಶ ಕೌಜಲಗಿ, ಬಸವೇಶ ಹಟ್ಟಿಹೊಳಿ, ಗೀತಾ ತೇಗೂರ, ಅನ್ನಪೂರ್ಣ ಬೈಲೂರ, ಸುವರ್ಣಾ ಕಡಕೋಳ, ರತ್ನಾ ಧಾರವಾಡ, ಸುಮಿತ್ರಾ ಜಕಾತಿ, ವಿದ್ಯಾವತಿ ಸೊಪ್ಪಿ, ಸುವರ್ಣಾ ತೇಗೂರ, ಸುಮಂಗಲಾ ಸೊಪ್ಪಿ, ಸುಧಾ ಹಟ್ಟಿಹೋಳಿ, ಪಟ್ಟಣ ಪಂಚಾಯ್ತಿ ಅಧ್ಯಕ್ಷೆ ನೇತ್ರಾವತಿ ಕಡಕೋಳ, ಅನ್ನಪೂರ್ಣ ಕೌಜಲಗಿ, ಶೈಲಾ ಕೋಟಿ, ಅನ್ನಪೂರ್ಣ ಕೌಜಲಗಿ, ಕಲಾವತಿ ಕೊಡಳ್ಳಿ, ರಾಚವ್ವ ಹಸಬಿಮಠ, ನಾಗರತ್ನಾ ಪಾಟೀಲ, ಗೌರಮ್ಮ ಅಗಸಿಮನಿ ಇದ್ದರು.