ಸಂಸ್ಕಾರವಿಲ್ಲದ ಬದುಕಿಗೆ ಭವಿಷ್ಯವಿಲ್ಲ

ಧಾರವಾಡ,ಸೆ22 : ಸಂಸ್ಕಾರವಿಲ್ಲದ ಬದುಕಿಗೆ ಭವಿಷ್ಯವಿಲ್ಲ. ಭವಿಷ್ಯವಿದ್ದರೂ ಅದಕ್ಕೆ ಅರ್ಥವಿಲ್ಲ. ವಿದ್ಯಾರ್ಥಿಗಳು ಜ್ಞಾನಾರ್ಜನೆಯ ಸಮಯದಲ್ಲಿ ವಿನಯಶಾಲಿಗಳಾಗಿ ಸಂಸ್ಕಾರವಂತರಾಗಬೇಕೆಂದು ಇನಾಮಹೊಂಗಲದ ವಿರಕ್ತಮಠದ ಪೂಜ್ಯ ಮ.ನಿ.ಪ್ರ. ಸಿದ್ಧಲಿಂಗ ಸ್ವಾಮೀಜಿಗಳು ಹೇಳಿದರು.
ಅವರು ಕ.ವಿ.ವ. ಸಂಘದ ಮಕ್ಕಳ ಮಂಟವು ಸವದತ್ತಿಯ ಇನಾಮಹೊಂಗಲದ ಸಿದ್ಧೇಶ್ವರ ಪ್ರೌಢ ಶಾಲೆಯಲ್ಲಿ ಆಯೋಜಿಸಲ್ಪಟ್ಟ ಪ್ರತಿಭಾ ಪ್ರೋತ್ಸಾಹ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಮುಂದುವರೆದು ಮಾತನಾಡಿದ ಅವರು, ಜ್ಞಾನಾರ್ಜನೆ ಎಂಬುದು ವಿದ್ಯಾರ್ಥಿಯ ಸೊತ್ತು. ನೀವೇ ನಮ್ಮ ಭವ್ಯ ಭಾರತದ ಆಧಾರ ಸ್ತಂಭಗಳಾಗಲಿರುವವರು ದೇಶದ ಉಜ್ವಲ ಭವಿಷ್ಯ ನಿಮ್ಮನ್ನೆ ಅವಲಭಿಸಿದೆ. ವಿದ್ಯಾರ್ಥಿಗಳು ಕಲಿಕಾರ್ಥಿಗಳಾಗಿರುವಾಗ ನಯ, ವಿನಯ, ಸಹಕಾರದಂತಹ ಸದ್ಗುಣಗಳನ್ನು ಬೆಳೆಸಿಕೊಂಡು, ಜವಾಬ್ದಾರಿಯುತ ಪ್ರಜೆಗಳಾಗಬೇಕು. ಕ.ವಿ.ವ. ಸಂಘದ ಮಕ್ಕಳ ಮಂಟಪವು ಸಂಚಾರಿ ಮಂಟಪವಾಗಿ ತನ್ನ ಕಾರ್ಯಕ್ರಮ ವಿವಿಧ ಜಿಲ್ಲೆಗಳಲ್ಲಿ ವಿಸ್ತ್ರತಗೊಳಿಸುತ್ತಿರುವುದು ಶ್ಲಾಘನೀಯ. ಮಕ್ಕಳ ಪ್ರಗತಿಗಾಗಿ ಶಿಕ್ಷಕರ ಜೊತೆ ಪಾಲಕರೂ ಜವಾಬ್ದಾರಿಯಿಂದ ಕೈಜೋಡಿಸಿ ಎಂದು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿದ ಸವದತ್ತಿ ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಡಾ. ಬಾಳಪ್ಪ ಚಿನಗುಡಿ ಮಾನತಾಡಿ, ಶಿಕ್ಷಣದ ಗುರಿ ಕೇವಲ ಬುದ್ಧಿ ವಿಕಾಸ ಮಾತ್ರವಲ್ಲ. ಅದು ಮಕ್ಕಳ ಸಮಗ್ರ ವಿಕಾಸವಾಗಿದೆ. ಪ್ರತಿಯೊಬ್ಬ ವಿದ್ಯಾರ್ಥಿಗಳಲ್ಲಿ ಏನಾದರೊಂದು ಪ್ರತಿಭೆ ಇದ್ದೇ ಇರುತ್ತದೆ. ಇಂತಹ ಪ್ರೋತ್ಸಾಹದಾಯಕ ಚಟುವಟಿಕೆಗಳಲ್ಲಿ ಆಸಕ್ತಿಯಿಂದ ಭಾಗವಹಿಸಿ ಸದುಪಯೋಗಪಡಿಸಿಕೊಳ್ಳಿ ಎಂದರು.
ಅಧ್ಯಕ್ಷತೆ ವಹಿಸಿದ್ದ ಪ್ರೌಢಶಾಲೆಯ ನಿವೃತ್ತ ಶಿಕ್ಷಕರಾದ ಎಸ್.ಆರ್. ದೇಸಾಯಿಮಠ ಮಾತನಾಡಿ, ಕ.ವಿ.ವ. ಸಂಘವು ಈ ನಾಡಿನ ಕನ್ನಡದ ಹೆಮ್ಮೆಯ ಸಾಂಸ್ಕøತಿಕ ಸಂಸ್ಥೆ. ನಿರಂತರವಾಗಿ ಅನೇಕ ಹೋರಾಟಗಳನ್ನು ಹುಟ್ಟು ಹಾಕಿ ಕನ್ನಡಿಗರಲ್ಲಿ ಅಭಿಮಾನ ಜಾಗೃತಿ ಮೂಡಿಸಿದೆ. ವಿದ್ಯೆಯ ಬೆಳವಣಿಗೆಯೇ ಅದರ ಧ್ಯೇಯವಾಕ್ಯವಾಗಿದೆ ಎಂದರು.
ಮಕ್ಕಳ ಮಂಟಪದ ಸಂಚಾಲಕರಾದ ಡಾ. ಧನವಂತ ಹಾಜವಗೋಳ, ಮಕ್ಕಳ ಮಂಟಪದ ಕಾರ್ಯಕ್ರಮಗಳ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಕ.ವಿ.ವ. ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ವೀರಣ್ಣ ಒಡ್ಡೀನ, ಡಾ. ಶೈಲಜಾ ಅಮರಶೆಟ್ಟಿ ಮಾತನಾಡಿದರು. ಇನಾಮಹೊಂಗಲದ ವಿವಿಧ ಶಾಲೆಗಳ ವಿದ್ಯಾರ್ಥಿಗಳು ತಮ್ಮ ಪ್ರತಿಭಾ ಪ್ರದರ್ಶನ ಅನಾವರಣಗೊಳಿಸಿದರು. ಭಾಗವಹಿಸಿದ ಎಲ್ಲಾ ಮಕ್ಕಳಿಗೆ ಅಭಿನಂದನಾ ಪತ್ರ ವಿತರಿಸಲಾಯಿತು.
ಎಸ್.ಆರ್. ಆಶಿ ಸ್ವಾಗತಿಸಿದರು. ಪಿ.ಜಿ. ನಾಗನಗೌಡರ ನಿರೂಪಿಸಿದರು. ಮುಖ್ಯಾಧ್ಯಾಪಕ ಎಚ್.ಆರ್. ನಾಯಕರ್, ಟಿ.ಡಿ. ಬೆಣಚಮಡ್ಡಿ, ನಾಗರತ್ನಾ ಮಠ, ಬಿ.ಆರ್. ಮಠ, ಶ್ರೀಶೈಲ ಹೂಗಾರ ಸೇರಿದಂತೆ ಶಿಕ್ಷಕರು ಹಾಗೂ ಆಡಳಿತ ಮಂಡಳಿಯ ನಿರ್ದೇಶಕರು ಪಾಲ್ಗೊಂಡಿದ್ದರು.