ಸಂಸ್ಕಾರವಂತ ಮಕ್ಕಳು ದೇಶದ ಅಮೂಲ್ಯ ಆಸ್ತಿ

ಕಲಬುರಗಿ:ಮಾ.25: ಸಮಾಜದಲ್ಲಿ ಜರುಗುತ್ತಿರುವ ಕೊಲೆ, ಸುಲಿಗೆ, ದರೋಡೆ, ಭ್ರಷ್ಟಾಚಾರ, ಅನೈತಿಕ ಚಟುವಟಿಕೆಗಳಿಗೆ ಸಂಸ್ಕಾರದ ಕೊರತೆಯಿದೆ. ಆದ್ದರಿಂದ ನಾವೂ ಮಕ್ಕಳಿಗೆ ಶಿಕ್ಷಣ ನೀಡುವುದರ ಜೊತೆಗೆ ಅವರಿಗೆ ಬಾಲ್ಯದಿಂದಲೇ ನೈತಿಕ ಮೌಲ್ಯಗಳು, ಶರಣ ಸಂಸ್ಕಾರ ನೀಡಬೇಕು. ಇದರಿಂದ ಮುಂದೆ ಅವರು ದೇಶಕ್ಕೆ ಅಮೂಲ್ಯ ಆಸ್ತಿಯಾಗುವದರ ಜೊತೆಗೆ, ಉತ್ತಮ ಸಮಾಜ ನಿರ್ಮಾಣವಾಗುತ್ತದೆಯೆಂದು ಹಿರಿಯ ಮಕ್ಕಳ ಸಾಹಿತಿ ಎ.ಕೆ.ರಾಮೇಶ್ವರ ಅಭಿಮತ ವ್ಯಕ್ತಪಡಿಸಿದರು.

 ನಗರದ ಹೊರವಲಯದ ರಾಣೆಸ್ಪೀರ ದರ್ಗಾ ರಸ್ತೆಯಲ್ಲಿರುವ ಶಿವಲಿಂಗೇಶ್ವರ ಕಾಲನಿಯಲ್ಲಿ ಉಪನ್ಯಾಸಕ, ಸಮಾಜ ಸೇವಕ ಬಸವರಾಜ ಎಸ್.ಪುರಾಣೆ ಅವರ ಸುಪುತ್ರ ಪ್ರೀತಮ್‍ನ ಏಳನೇ ಜನ್ಮದಿನಾಚರಣೆಯ ಪ್ರಯುಕ್ತ 'ಬಸವೇಶ್ವರ ಸಮಾಜ ಸೇವಾ ಬಳಗ'ದ ವತಿಯಿಂದ ಮಂಗಳವಾರ ಸಂಜೆ ಹಮ್ಮಿಕೊಂಡಿದ್ದ 'ಶರಣ ಸಂಗಮ ಕಾರ್ಯಕ್ರಮ'ದಲ್ಲಿ 'ವಚನ ಸಾಹಿತ್ಯದಲ್ಲಿ ಮಾನವೀಯ ಮೌಲ್ಯಗಳು' ಎಂಬ ವಿಷಯದ ಮೇಲೆ ಜರುಗಿದ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ನೀಡುತ್ತಿದ್ದರು.

ವಿಶೇಷ ಉಪನ್ಯಾಸ ನೀಡಿದ ಶರಣ ಚಿಂತ ಶಿವಕಾಂತ ಚಿಮ್ಮಾ, ಬಸವಾದಿ ಶರಣರು ನೀಡಿರುವ ಅನುಭವದ ಅಮೃತವನ್ನು ಹೊಂದಿರುವ ವಚನಗಳನ್ನು ಮಕ್ಕಳಿಗೆ ಅದರ ಅರ್ಥ ಸಹಿತವಾಗಿ ಮನನ ಮಾಡಿಸಬೇಕು. ಅವುಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಂಡರೆ ಜೀವನ ಸುಂದರವಾಗಿ ನಿರ್ಮಾಣವಾಗುತ್ತದೆ. ಪ್ರತಿಯೊಂದು ಸಮಸ್ಯೆಗೆ ಬಸವಾದಿ ಶರಣರ ವಚನ ಸಾಹಿತ್ಯದಲ್ಲಿ ಪರಿಹಾರವಿದ್ದು, ಈ ತತ್ವ ಸಾರ್ವಕಾಲಿಕ ಪ್ರಸ್ತುತವಾಗಿದೆ. ವಚನ ಸಾಹಿತ್ಯವು ಮಾನವೀಯ ಮೌಲ್ಯಗಳ ಆಗರವಾಗಿದೆಯೆಂದು ಹೇಳಿದರು.

ಕಾರ್ಯಕ್ರಮದಲ್ಲಿ ಪ್ರಮುಖರಾದ ಬಸವರಾಜ ಎಸ್.ಪುರಾಣೆ, ಪರಮೇಶ್ವರ ಪುರಾಣೆ, ಶ್ವೇತಾ ಬಿ.ಪುರಾಣೆ, ಪ್ರೀತಮ್ ಬಿ.ಪುರಾಣೆ, ಮಹಾನಂದ ಚೌದರಿ, ಎಚ್.ಬಿ.ಪಾಟೀಲ, ನರಸಪ್ಪ ಬಿರಾದಾರ ದೇಗಾಂವ, ಸುನೀಲಕುಮಾರ ವಂಟಿ, ರಾಮಚಂದ್ರ ಕಾರಭೋಸಗಾ, ಪ್ರೊ.ಎಸ್.ಕೆ.ಕಲ್ಯಾಣರಾವ, ಅಜೀತ್, ಅಣ್ಣಾರಾ ಎಚ್.ಮಂಗಾಣೆ, ಮಹಾಂತೇಶ ಬಿ.ಬಿರಾದಾರ, ದಾನೇಶ ವಗ್ಗಿ, ಬಸವರಾಜ ವಾಡಿ, ರೇಣುಕಾಚಾರ್ಯ ಸ್ಥಾವರಮಠ, ನಾಗೇಶ ತಿಮಾಜಿ, ಬಸವರಾಜ ಹೆಳವರ ಯಾಳಗಿ, ಮಂಗಲಾ ಡೆಂಕಿ, ಸಂಗೀತಾ ಪುರಾಣೆ, ಅಮರಜೀತ ಹೊಸಳ್ಳಿ, ವಿಜಯಕುಮಾರ ಮಾಸ್ಟರ್, ಶಿವಲಿಂಗ ಪುರಾಣೆ, ಆರೂಷಿ, ಸೋನಿ, ರೋಹಿಣಿ, ಮಲ್ಲು ಸೇರಿದಂತೆ ಮತ್ತಿತರರಿದ್ದರು.