ಸಂಸ್ಕಾರವಂತರ ಬದುಕು ಸಾರ್ವಕಾಲಿಕ ಸತ್ಯ: ಡಾ. ಸೇಡಂ

ಕಲಬುರಗಿ,ಮಾ.26: ಸಂಸ್ಕಾರವಂತರ ಬದುಕು ಸಾರ್ವಕಾಲಿಕ ಸತ್ಯವಾಗಿದೆ ಎಂದು ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲಕ ಮತ್ತು ಕೃಷಿ, ಸಾಂಸ್ಕøತಿಕ ಸಂಘಟನೆ ಅಧ್ಯಕ್ಷ ಡಾ. ಬಸವರಾಜ್ ಪಾಟೀಲ್ ಸೇಡಂ ಅವರು ಹೇಳಿದರು.
ನಗರದ ಶ್ರೀ ಶರಣಬಸವೇಶ್ವರ್ ಕಾಲೇಜಿನ ಬಸವರಾಜಪ್ಪ ಅಪ್ಪಾ ಸ್ಮರಣಾರ್ಥ ಭವನದಲ್ಲಿ ಭಾನುವಾರ ಹಮ್ಮಿಕೊಂಡ ಶ್ರೀಮತಿ ಸುಶೀಲಾಬಾಯಿ ಚನ್ನವೀರಪ್ಪಾ ಗುಡ್ಡಾ, ಚನ್ನವೀರಪ್ಪಾ ಗುಡ್ಡಾ ದಂಪತಿಗಳ ಸಹಸ್ರ ಚಂದ್ರದರ್ಶನ ಕಾರ್ಯಕ್ರಮದಲ್ಲಿ ಆಶಯ ನುಡಿಗಳನ್ನಾಡಿದ ಅವರು, ಗುಡ್ಡಾ ಅವರ ಕಾರ್ಯಕ್ರಮಕ್ಕೆ ಇಷ್ಟೊಂದು ಜನ ಸೇರಿದ್ದೇ ಅವರ ಸಂಸ್ಕಾರವನ್ನು ಎತ್ತಿ ತೋರಿಸುತ್ತದೆ ಎಂದು ಬಣ್ಣಿಸಿದರು.
ಚನ್ನವೀರಪ್ಪ ಅವರು ಸದಾ ಮೌನಿಯಾದವರು. ಕಾಯಕದಲ್ಲಿ ತೊಡಗಿಸಿಕೊಂಡು ಅಲ್ಲಿ ಸಾರ್ಥಕ ಕಾರ್ಯಗಳನ್ನು ಮಾಡುತ್ತ ಭಾರತೀಯ ಸಂಸ್ಕøತಿಯನ್ನು ಸದಾ ಕಾಲ ಸ್ಮರಣೆ ಮಾಡಿಕೊಂಡು, ಇತರರಿಗೂ ಸಹ ಅದನ್ನೇ ಬೋಧಿಸಿ ಆ ಮಾರ್ಗದಲ್ಲಿಯೇ ನಡೆಯುವ ಹಾಗೆ ಪ್ರೇರೇಪಿಸಿದ್ದಾರೆ ಎಂದು ಅವರು ಹೇಳಿದರು.
ನಾನು ನಗರಕ್ಕೆ ಬಂದಾಗ ಅವರ ಮನೆಯಲ್ಲಿಯೇ ಇದ್ದು, ಅವರ ನಿಸ್ವಾರ್ಥ ಬದುಕಿಗೆ ಮನಸೋತು ಅವರ ಹಾಗೆಯೇ ಕಾರ್ಯಪ್ರವೃತ್ತವಾಗಬೇಕೆಂಬ ಹಂಬಲ ನನಗಾಯಿತು. ಅವರ ಪ್ರೇರಣೆಯೇ ನಾನಿಂದು ಮಟ್ಟಕ್ಕೆ ಬೆಳೆಯುವಂತಾಯಿತು ಎಂದು ಅವರು ತಿಳಿಸಿದರು.
ರಾಷ್ಟ್ರೀಯ ಸ್ವಯಂ ಸೇವಕ ಸಂಘ, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ರಾಜ್ಯ ಮಟ್ಟದ ಯಾರೇ ಪ್ರಮುಖರು ಬಂದರೂ ಸಹ ಇವರ ಮನೆಯಲ್ಲಿಯೇ ಆತಿಥ್ಯ ಸ್ವೀಕರಿಸಬೇಕು. ಅಂತಹ ಉದಾತ್ತ ಮನಸ್ಸು ಅವರದಾಗಿತ್ತು. ಚನ್ನವೀರಪ್ಪ ಅವರೊಂದಿಗೆ ಅವರ ಸಂಗಾತಿಯೂ ಅವರ ಎಲ್ಲ ಕಾರ್ಯಗಳಿಗೆ ಮನಪೂರ್ವಕವಾಗಿ ಬೆಂಬಲಿಸುತ್ತಿದ್ದರು ಎಂದು ಅವರು ಹೇಳಿದರು.
ಇದಕ್ಕೆ ಸಾಕ್ಷಿ ಎಂಬಂತೆ ಅವರ ಸ್ಮರಣ ಸಂಚಿಕೆ ಮೌನ ತಪಸ್ವಿಯಲ್ಲಿ ವಿವಿಧ ಲೇಖಕರು ಅವರ ಗುಣಗಾನ ಮಾಡಿದ್ದೇ ಸಾಕ್ಷಿ. ಮುಂದೆಯೂ ಸಹ ಶತಾಯುಷಿಯಾಗಿ ಇನ್ನು ಹೆಚ್ಚಿನ ಸೇವೆಯನ್ನು ಸಲ್ಲಿಸುವಂತಾಗಲಿ ಎಂದು ಅವರು ಶುಭ ಹಾರೈಸಿದರು.
ಸ್ಮರಣ ಸಂಚಿಕೆ ಸಂಪಾದಕ ಡಾ. ಟಿ. ಗುರುಬಸಪ್ಪ, ರಾಜ್ಯ ವಿಧಾನ ಪರಿಷತ್ ಮಾಜಿ ಸದಸ್ಯ ಅಲ್ಲಮಪ್ರಭು ಪಾಟೀಲ್, ಮಾಜಿ ಮೇಯರ್ ಹಾಗೂ ಅಖಿಲ ಭಾರತ ವೀರಶೈವ ಮಹಾಸಭೆ ಜಿಲ್ಲಾಧ್ಯಕ್ಷ ಡಾ. ಶರಣಕುಮಾರ್ ಮೋದಿ, ಜಿಲ್ಲಾ ವೀರಶೈವ ಸಮಾಜದ ಅಧ್ಯಕ್ಷ ಅರುಣಕುಮಾರ್ ಪಾಟೀಲ್ ಕೊಡಲಹಂಗರಗಾ, ಶ್ರೀ ಶರಣಬಸವೇಶ್ವರ್ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ್ ದೇಶಮುಖ್, ಕಲ್ಯಾಣಪ್ಪ ಪಾಟೀಲ್, ಮಹಾನಗರ ಪಾಲಿಕೆಯ 31ನೇ ವಾರ್ಡಿನ ಸದಸ್ಯೆ ಶ್ರೀಮತಿ ಶಾಂತಾಬಾಯಿ ಹಾಲಮಠ್ ಮುಂತಾದವರು ಉಪಸ್ಥಿತರಿದ್ದರು.
ಡಾ. ಶರಣಬಸಪ್ಪ ಅಪ್ಪಾ ಮತ್ತು ಡಾ. ದಾಕ್ಷಾಯಣಿ ಅಪ್ಪಾ ದಂಪತಿಗಳು ಚನ್ನವೀರಪ್ಪ ಗುಡ್ಡಾ ದಂಪತಿಗಳಿಗೆ ಸತ್ಕರಿಸಿ ಆಶೀರ್ವದಿಸಿದರು. ನೇತೃತ್ವವನ್ನು ಕೊತ್ತಲಬಸವೇಶ್ವರ್ ಶಿಕ್ಷಣ ಸಮಿತಿ ಅಧ್ಯಕ್ಷ ಸದಾಶಿವ್ ಮಹಾಸ್ವಾಮೀಜಿ ವಹಿಸಿದ್ದರು. ಸಾವಿರಾರು ಅಭಿಮಾನಿಗಳು ಚನ್ನವೀರಪ್ಪ ಗುಡ್ಡಾ ದಂಪತಿಗಳಿಗೆ ಅಭಿನಂದಿಸಿದರು.