ಸಂಸ್ಕಾರ,ಮೌಲ್ಯಕ್ಕಾಗಿಭಗವದ್ಗೀತೆ ಸಾರ ಮಕ್ಕಳಿಗೆ ತಿಳಿಸಿ

ಕೋಲಾರ,ಸೆ,೭- ಧಾರ್ಮಿಕ ಶ್ರದ್ಧೆ ಕಲಿಕೆಗೆ ಪೂರಕವಾಗಿದ್ದು, ಮಕ್ಕಳಲ್ಲಿ ಸಂಸ್ಕಾರ, ಗುರುಹಿರಿಯರ ಕುರಿತ ಗೌರವ ಬೆಳೆಸುವುದರ ಜತೆಗೆ ನೈತಿಕ ಮೌಲ್ಯಗಳನ್ನು ಅಭಿವೃದ್ದಿಪಡಿಸಲು ಭಗವದ್ಗೀತೆಯ ಸಾರ ಮಕ್ಕಳಿಗೆ ತಿಳಿಸಿಕೊಡುವ ಅಗತ್ಯವಿದೆ ಎಂದು ಖ್ಯಾತ ನೇತ್ರ ವೈದ್ಯ ನಗರದ ವಿವೇಕ್ ನೇತ್ರಾಲಯದ ಡಾ.ಹೆಚ್.ಆರ್.ಮಂಜುನಾಥ್ ಅಭಿಪ್ರಾಯಪಟ್ಟರು.
ತಾಲ್ಲೂಕಿನ ಚೊಕ್ಕಹಳ್ಳಿಯ ಚಿನ್ಮಯ ವಿದ್ಯಾಲಯದಲ್ಲಿ ನಡೆದ ನೂರಾರು ಕೃಷ್ಣವೇಷಧಾರಿಗಳು ಪಾಲ್ಗೊಂಡಿದ್ದ ಸ್ಪರ್ಧೆಗಳಿಗೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು.
ಅತಿ ಹೆಚ್ಚು ಮೊಬೈಲ್ ಬಳಕೆಯೂ ಕಣ್ಣಿಗೆ ಹಾನಿಕಾರಕ ಎಂದ ಅವರು ಇತ್ತೀಚಿನ ದಿನಗಳಲ್ಲಿ ಇದು ಅತಿ ಮುಖ್ಯ ಸಮಸ್ಯೆಯಾಗಿದೆ, ಮಕ್ಕಳು ಹತ್ತಿರದಿಂದ ಟಿವಿ ನೋಡುವುದು ಸರಿಯಲ್ಲ ಎಂದು ತಿಳಿಸಿದರು.ನಂತರ ಲೀಡ್ ಬ್ಯಾಂಕ್ ಮ್ಯಾನೇಜರ್ ಸುಧೀರ್ ಮಾತನಾಡಿದರು,
ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಹಾಗೂ ಸೂಲೂರು ಗ್ರಾ.ಪಂ ಅಧ್ಯಕ್ಷ ಪೆಮ್ಮಶೆಟ್ಟಿಹಳ್ಳಿ ಸುರೇಶ್ ಮಾತನಾಡಿ, ಚಿನ್ಮಯ ವಿದ್ಯಾಲಯ ಭಾರತೀಯ ಸಂಸ್ಕೃತಿಯನ್ನು ಮಕ್ಕಳಿಗೆ ಪರಿಚಯಿಸುವ ಮೂಲಕ ಸಂಸ್ಕಾರಯುತ ಶಿಕ್ಷಣ ನೀಡುತ್ತಿದೆ, ಇದು ಮಕ್ಕಳಲ್ಲಿ ಗುರುಹಿರಿಯರ ಕುರಿತಾದ ಗೌರವ ಬೆಳೆಸುವ ಪ್ರಕ್ರಿಯೆಯಾಗಿದೆ ಎಂದರು.
ಶಾಲೆ ಆವರಣದಲ್ಲಿ ೧೦೦ಕ್ಕೂ ಹೆಚ್ಚು ರಾಧೆ ಕೃಷ್ಣ ವೇಷಧಾರಿಗಳು ಪಾಲ್ಗೊಂಡಿದ್ದು, ಮಕ್ಕಳನ್ನು ಚಿನ್ಮಯ ಸಾಂಧಿಪನಿ ಆಶ್ರಮದಿಂದ ಮೆರವಣಿಗೆಯಲ್ಲಿ ಕರೆತರಲಾಯಿತು. ಪ್ರತಿ ಕೃಷ್ಣ ವೇಷಧಾರಿಯನ್ನು ನಾಗಾಭರಣ ಬುಟ್ಟಿಯಲ್ಲಿ ಹೊತ್ತು ವೇದಿಕೆಗೆ ಕರೆತಂದಿದ್ದು ವಿಶೇಷವಾಗಿದ್ದು, ಗೋಪೂಜೆಯ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಇಡೀ ಶಾಲೆಯ ಆವರಣದಲ್ಲಿ ಎಲ್ಲಿ ನೋಡಿದರೂ ಕೃಷ್ಣ,ರಾಧೆಯರ ವೇಷಧಾರಿಗಳ ಕಲರವ ತುಂಬಿ ತುಳುಕಿದ್ದು, ತಮ್ಮ ಮಕ್ಕಳೊಂದಿಗೆ ಆಗಮಿಸಿದ್ದ ಪೋಷಕರಲ್ಲೂ ಸಂಭ್ರಮ ಮನೆ ಮಾಡಿತ್ತು. ಗಣ್ಯರಯ ಕಾರ್ಯಕ್ರಮಕ್ಕೂ ಮುನ್ನಾ ಅಲ್ಲಿ ಪ್ರತಿಷ್ಠಾಪಿಸಿದ್ದ ಬೃಹತ್ ಕೃಷ್ಣನ ಮೂತಿಗೆ ಪೂಜೆ ಸಲ್ಲಿಸಿ ಆರತಿ ಬೆಳಗಿದರು.
ಅಧ್ಯಕ್ಷತೆಯಲ್ಲಿ ಚಿನ್ಮಯ ಕಾಲೇಜಿನ ಪ್ರಾಂಶುಪಾಲ ಮಂಜುನಾಥ್ ವಹಿಸಿದ್ದು, ಕಾರ್ಯಕ್ರಮದ ಉಸ್ತುವಾರಿಯನ್ನು ಶಾಲೆಯ ಮುಖ್ಯಶಿಕ್ಷಕ ದ್ವಾರಕಾನಾಥ್, ಶಿಕ್ಷಕರಾದ ಸುಜಾತಾ, ವಾಣಿಕುಮಾರಿ, ಅರುಂಧತಿ, ಕಲ್ಪನಾ ಮತ್ತಿತರರು ವಹಿಸಿದ್ದರು.