ಸಂಜೆವಾಣಿ ವಾರ್ತೆ
ಬಳ್ಳಾರಿ, ಏ.28: ಒಬ್ಬ ವ್ಯಕ್ತಿ ಬಾಲ್ಯದಲ್ಲಿ ಎಂಥಹ ಸಂಸ್ಕಾರ ಹೊಂದಿರುತ್ತಾನೋ, ಅಂತಹ ಬುದ್ಧಿಯನ್ನೇ ಹೊಂದಿರುತ್ತಾನೆ. ಹಾಗೆಯೇ ಯಾರಲ್ಲಿ ಸತತ ಸಾಧನೆ ಇರುತ್ತದೆಯೋ ಅವರು ಬದುಕಿನಲ್ಲಿ ಖಂಡಿತ ಸಿದ್ಧಿಗಳಿಸುತ್ತಾರೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿವೃತ್ತ ಸಹಾಯಕ ನಿರ್ದೇಶಕರಾದ ಚೋರನೂರು ಕೊಟ್ರಪ್ಪ ಅಭಿಪ್ರಾಯಪಟ್ಟರು.
ಅವರು ಡಯಟ್ ಕಾಲೇಜಿನಲ್ಲಿ ಶ್ರೀ ಹುಲಿಕುಂಟೆರಾಯ ತೊಗಲುಗೊಂಬೆ ಕಲಾ ತಂಡದವರು ಆಯೋಜಿಸಿದ ನಾಡೋಜ ದಿ|| ಬೆಳಲ್ಲು ವೀರಣ್ಣನವರ ನುಡಿನಮನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಾ, ಬಳ್ಳಾರಿ ರಂಗಭೂಮಿ ಸುಭದ್ರಮ್ಮ ಮನ್ಸೂರ್ ಹಾಗೂ ಬೆಳಗಲ್ಲು ವೀರಣ್ಣನವರಂತಹ ಅನರ್ಘ ರತ್ನಗಳನ್ನು ಕಳೆದುಕೊಂಡು ಅಕ್ಷರಶಃ ಬಡವಾಗಿದೆ. ಕಳೆದ 30 ವರ್ಷಗಳಿಂದ ಅವರೊಂದಿಗೆ ನಮ್ಮ ಒಡನಾಟವಿತ್ತು ಎಂದು ಬೆಳಗಲ್ಲು ವೀರಣ್ಣನವರೊಂದಿಗೆ ಕಳೆದ ದಿನಗಳನ್ನು ನೆನಪಿಸಿಕೊಂಡರು.
ಶ್ರೀ ಹುಲಿಕುಂಟೆರಾಯ ತೊಗಲುಗೊಂಬೆ ಕಲಾತಂಡದ ಅದ್ಯಕ್ಷರಾದ ಕೆ.ಹೊನ್ನೂರಸ್ವಾಮಿ ಪ್ರಸ್ತಾವಿಕವಾಗಿ ಮಾತನಾಡುತ್ತಾ, ಬೆಳಗಲ್ಲು ವೀರಣ್ಣನವರು ನಮ್ಮ ಸೋದರ ಮಾವ, ಅವರಿಂದ ನಾನು ತೊಗಲುಗೊಂಬೆ ಕಲೆ ಕಲಿತು ದೇಶ ವಿದೇಶಗಳಗನ್ನು ಸುತ್ತಿ ಬಂದಿದ್ದು, ಅವರಿಗೆ ರಂಗಭೂಮಿ ಸಂಪತ್ತು ಕೊಡಲಿಲ್ಲ. ಆದರೆ ತೊಗಲುಗೊಂಬೆ ನಮ್ಮ ಮಾವನವರಿಗೆ ಆರ್ಥಿಕ ಸದೃಢತೆಯ ಜೊತೆಗೆ ಅಂತಾರಾಷ್ಟ್ರೀಯ ಖ್ಯಾತಿಯನ್ನು ತಂದುಕೊಟ್ಟಿತು ಎಂದು ಹೇಳಿದರು. ಈ ಕಾರ್ಯಕ್ರಮದಲ್ಲಿ ಬಳ್ಳಾರಿ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ಕೆ.ಎರ್ರೇಗೌಡ, ಹಿರಿಯ ರಂಗಭೂಮಿ ನಟಿ ಹಾಗೂ ರಾಜ್ಯೋತ್ಸವ ಪ್ರಶಸ್ತಿ ಪುರಸೃತರಾದ ಶ್ರೀಮತಿ ವರಲಕ್ಕ್ಮಿ, ಬಾಬು ಜಗಜೀವನರಾಮ್ ರಾಜ್ಯ ಪ್ರಶಸ್ತಿ ಪುರಸೃತೆ ಹಾಗೂ ಹಿರಿಯ ಕವಿಯತ್ರಿ ಶ್ರೀಮತಿ ಎನ್.ಡಿ. ವೆಂಕಮ್ಮ, ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆರೋಗ್ಯ ಶಿಕ್ಷಣಾಧಿಕಾರಿಗಳಾದ ಈಶ್ವರ್ ಹೆಚ್.ದಾಸಪ್ಪನವರ ನುಡಿ ನಮನ ಸಲ್ಲಿಸಿದರು. ಉಪನ್ಯಾಸಕರಾದ ವೀರೇಶಯ್ಯಸ್ವಾಮಿಯವರು ವೀರಣ್ಣನವರ ಕುರಿತ ಕವಿತೆ ವಾಚಿಸಿದರು. ವೀರಣ್ಣನವರು ರಂಗಭೂಮಿಯಿಂದ ತೊಗಲುಗೊಂಬೆಗೆ ಸಾಗಿಬಂದ ದಾರಿಯ ಕುರಿತು ಬಳ್ಳಾರಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ಕೆ.ಬಿ ಸಿದ್ಧಲಿಂಗಪ್ಪ ಉಪನ್ಯಾಸ ನೀಡಿದರು. ಬೆಳಗಲ್ಲು ವೀರಣ್ಣನವರ ಬಾಲ್ಯದ ಜೀವನದಿಂದ ಹಿಡಿದು ಅವರ ಕೊನೆಯ ದಿನಗಳವರೆಗಿನ ಎಲ್ಲಾ ಸಾಧನೆ ಸಿದ್ಧಿಗಳನ್ನು ಎಳೆ ಎಳೆಯಾಗಿ ಬಿಚ್ಚಿಟ್ಟರು. ಬೆಳಗಲ್ಲು ವೀರಣ್ಣನವರು ಒಬ್ಬ ವ್ಯಕ್ತಿಯಾಗಿರಲಿಲ್ಲ. ಕಲಾರಂಗದ ಶಕ್ತಿಯಾಗಿದ್ದರು ಎಂದು ಬಣ್ಣಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಯಟ್ ಕಾಲೇಜಿನ ಉಪನಿರ್ದೇಶಕರಾದ ಶ್ರೀಮತಿ ಎ. ಹನುಮಕ್ಕ ವಹಿಸಿದ್ದರು. ಡಯಟ್ ಉಪನ್ಯಾಸಕ ಕೆ.ರೇವಣಸಿದ್ದಪ್ಪ ಸ್ವಾಗತಿಸಿದರು. ಕಾರ್ಯಕ್ರಮದ ಪ್ರಾರಂಭದಲ್ಲಿ ಪಂ. ದೊಡ್ಡಬಸವ ಗವಾಯಿ ಮತ್ತು ತಂಡದವರು ಸುಗಮ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.