ಸಂಸ್ಕಾರದಿಂದ ಜೀವನ ವಿಕಾಸ ಸಾಧ್ಯ :  ರಂಭಾಪುರಿ ಶ್ರೀ

ಖಾನಾಪುರ ಮೇ 17; ಜೀವನದ ಉನ್ನತಿಗೆ ಧರ್ಮ ದಿಕ್ಸೂಚಿ. ಧರ್ಮ ಪರಿಪಾಲನೆಯಿಂದ ಸುಖ ಶಾಂತಿ ಪ್ರಾಪ್ತಿ. ಸಂಸ್ಕಾರದಿAದ ಮನುಷ್ಯ ಜೀವನ ವಿಕಾಸಗೊಳ್ಳಲು ಸಾಧ್ಯವಾಗುವುದೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು. ಅವರು  ತಾಲೂಕಿನ ಕಕ್ಕೇರಿ ಗ್ರಾಮದಲ್ಲಿ ಶ್ರೀ ವೀರಭದ್ರಸ್ವಾಮಿ ಪ್ರತಿಷ್ಠಾಪನೆ ಅಂಗವಾಗಿ ಜರುಗಿದ ಧರ್ಮ ಜಾಗೃತಿ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.ಭಾರತ ದೇಶ ಧರ್ಮ ಪ್ರಧಾನವಾದ ದೇಶ. ಇಲ್ಲಿ ಹಲವಾರು ಧರ್ಮಗಳು ಇದ್ದು ಆಯಾ ಧರ್ಮಗಳ ಆಚರಣೆ ಭಿನ್ನವಾಗಿವೆ. ಆದರೆ ಆ ಎಲ್ಲ ಧರ್ಮಗಳ ಗುರಿ ಮಾನವ ಕಲ್ಯಾಣವೇ ಆಗಿದೆ. ವೀರಶೈವ ಧರ್ಮ ಸಕಲರಿಗೂ ಒಳಿತನ್ನೇ ಬಯಸುತ್ತಾ ಬಂದಿದೆ. ಪ್ರತಿಯೊಬ್ಬ ಮನುಷ್ಯ ಧರ್ಮ, ದೇವರು ಮತ್ತು ಗುರುವನ್ನು ಮರೆಯಬಾರದು. ಮನುಷ್ಯ ಕೊಟ್ಟಿದ್ದು ಮನೆತನಕ. ಆದರೆ ದೇವರು ಕೊಟ್ಟಿದ್ದು ಕೊನೆಯವರೆಗೂ ಇರುತ್ತದೆ. ದೇವರಲ್ಲಿ ನಂಬಿಗೆ ಧರ್ಮದಲ್ಲಿ ಶ್ರದ್ಧೆ ಇರಬೇಕು. ಶ್ರೀ ಜಗದ್ಗುರು ರೇಣುಕಾಚಾರ್ಯರು ಜೀವನ ವಿಕಾಸಕ್ಕೆ ದಶಧರ್ಮ ಸೂತ್ರ ಬೋಧಿಸಿದ್ದಾರೆ. ಶ್ರೀ ವೀರಭದ್ರಸ್ವಾಮಿ ಶ್ರೀ ರಂಭಾಪುರಿ ಪೀಠದ ಕ್ಷೇತ್ರನಾಥ ಮತ್ತು ಗೋತ್ರ ಪುರುಷನಾಗಿ ಪೂಜೆಗೊಳ್ಳುತ್ತಿದ್ದಾನೆ. ಆ ವೀರಭದ್ರಸ್ವಾಮಿ ಕಕ್ಕೇರಿಯಲ್ಲಿ ನೆಲೆಗೊಂಡು ಪೂಜೆಗೊಳ್ಳುತ್ತಿದ್ದಾನೆ. ದೇವಸ್ಥಾನದ ಸಮಿತಿಯವರು ಹಮ್ಮಿಕೊಂಡ ಕಾರ್ಯಕ್ರಮಕ್ಕೆ ಗ್ರಾಮದವರೆಲ್ಲರೂ ಒಗ್ಗಟ್ಟಿನಿಂದ ಸಹಕಾರ ನೀಡಿರುವುದು ತಮಗೆ ಅಪಾರ ಸಂತೋಷ ತಂದಿದೆ ಎಂದರು.ಸಮಾರಂಭವನ್ನು ಖಾನಾಪುರ ಕ್ಷೇತ್ರದ ನೂತನ ಶಾಸಕ ವಿಠ್ಠಲ ಹಲಗೇಕರ ಉದ್ಘಾಟಿಸಿ ಮಾತನಾಡಿದರು. ಸಂಗೊಳ್ಳಿ ಹಿರೇಮಠದ ಗುರುಲಿಂಗ ಶಿವಾಚಾರ್ಯ ಸ್ವಾಮಿಗಳು ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿರಕೋಳ ಹಿರೇಮಠದ ಗುರುಸಿದ್ಧೇಶ್ವರ ಶಿವಾಚಾರ್ಯ ಸ್ವಾಮಿಗಳು 5 ದಿನಗಳ ಕಾಲ ಪ್ರವಚನ ಮಾಡಿ ಜಾಗೃತಿ ಮೂಡಿಸಿದರು. ಹಿಡಕಲ್ ಅಡವಿಸಿದ್ದೇಶ್ವರ ಶ್ರೀಗಳು ಉಪಸ್ಥಿತರಿದ್ದರು. ಹಲವಾರು ಗಣ್ಯರಿಗೆ ಹಾಗು ದಾನಿಗಳಿಗೆ ಶ್ರೀ ರಂಭಾಪುರಿ ಜಗದ್ಗುರುಗಳು ಗುರುರಕ್ಷೆಯಿತ್ತು ಶುಭ ಹಾರೈಸಿದರು.ಸಮಾರಂಭಕ್ಕೂ ಮುನ್ನ ಗ್ರಾಮದ ಬಿಷ್ಟಾದೇವಿ ದೇವಸ್ಥಾನದಿಂದ ಶ್ರೀ ವೀರಭದ್ರಸ್ವಾಮಿ ದೇವಸ್ಥಾನದ ವರೆಗೆ ಶ್ರೀ ರಂಭಾಪುರಿ ಜಗದ್ಗುರುಗಳ ಅಡ್ಡಪಲ್ಲಕ್ಕಿ ಮಹೋತ್ಸವ ಸಂಭ್ರಮದಿAದ ಜರುಗಿತು. ಕುಂಭ ಹೊತ್ತ ಮಹಿಳೆಯರು, ಆರತಿ ಹಿಡಿದ ಸುಮಂಗಲೆಯರು, ಡೊಳ್ಳು, ಭಜನಾ ಮಂಡಳಿ ಮತ್ತು ಅಪಾರ ಭಕ್ತಸ್ತೋಮ ಮೆರವಣಿಗೆಗೆ ಕಳೆ ಕಟ್ಟಿದ ದೃಶ್ಯ ಅಪೂರ್ವವಾಗಿತ್ತು.