ಸಂಸ್ಕರಿಸಿದ ಆಹಾರದಿಂದ ಹೆಚ್ಚಿನ ಲಾಭ


ಧಾರವಾಡ ಅ.28-ಕಚ್ಚಾ ಕೃಷಿ ಉತ್ಪನ್ನಗಳನ್ನು ಹಾಗೇ ಮಾರುವುದರಿಂದ ಲಾಭದಾಯಕವಾಗಿಲ್ಲ. ಆದ್ದರಿಂದ, ಸಂಸ್ಕರಿಸಿದ ಆಹಾರಗಳನ್ನು ಮಾರಿ ಹೆಚ್ಚಿನ ಲಾಭ ಪಡೆಯಬಹುದು ಎಂದು ಧಾರವಾಡ ಕೃಷಿ ವಿಶ್ವವಿದ್ಯಾಲಯದಲ್ಲಿ ಎನ್‍ಎಎಚ್‍ಇಪಿ-ಐಡಿಪಿ ಯೋಜನೆಯಡಿ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ಅವಕಾಶಗಳು ಮತ್ತು ನಾವಿನ್ಯತೆಗಳ ಕುರಿತ ವೆಬಿನಾರನ್ನು ಉದ್ಘಾಟಿಸಿ, ನಿರ್ದೇಶಕರು, ಐಐಎಫ್‍ಟಿ, ತಂಜಾವುರ, ತಮಿಳುನಾಡು ಡಾ. ಆನಂದರಾಮ ಕೃಷ್ಣನ್ ತಿಳಿಸಿದರು.
ಅವರು ಉದ್ಯಮಗಳ ತಾಂತ್ರಿಕತೆ, ಹಣಕಾಸು, ತರಬೇತಿ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಒದಗಿಸುವ (ಪಿ.ಎಮ್.ಎಫ್.ಪಿ.ಇ.) ಪ್ರಧಾನ ಮಂತ್ರಿ ಆಹಾರ ಸಂಸ್ಕರಣೆ ಉದ್ಯಮಗಳು ಯೋಜನೆಯ ಬಗ್ಗೆಯೂ ತಿಳಿಸಿದರು.
ವ್ಯವಸ್ಥಾಪಕ ನಿರ್ದೇಶಕರು, ಕೆಎಪಿಪಿಇಸಿ, ಶಿವರಾಜ ಬಿ. ಆಹಾರ ಸಂಸ್ಕರಣೆ ಯೋಜನೆಗಳ ಬಗ್ಗೆ ವಿವರಿಸಿದರು. ಮುಂದಿನ ಐದು ವರ್ಷಗಳಲ್ಲಿ ಸುಮಾರು 11,000 ಆಹಾರ ಸಂಸ್ಕರಣೆ ಘಟಕಗಳನ್ನು ಸ್ಥಾಪಿಸುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು. ಅಧ್ಯಕ್ಷತೆ ವಹಿಸಿದ್ದ ಕೃಷಿ ವಿಶ್ವವಿದ್ಯಾಲಯ, ಧಾರವಾಡದ ಕುಲಪತಿಗಳಾದ ಡಾ. ಮಹಾದೇವ ಬ. ಚೆಟ್ಟಿ ಭಾರತದಲ್ಲಿ ವೈವಿಧ್ಯಮಯ ಹಣ್ಣು ಮತ್ತು ತರಕಾರಿಗಳನ್ನು ಬೆಳೆಯುತ್ತಿರುವುದರಿಂದ ಆಹಾರ ಸಂಸ್ಕರಣಾ ಘಟಕಗಳನ್ನು ಸ್ಥಾಪಿಸಲು ವಿಪುಲ ಅವಕಾಶಗಳಿವೆ. ಉದ್ಯೋಗ ಬಯಸುವುದರ ಬದಲು ಉದ್ಯೋಗ ಸೃಷ್ಠಿಸಲು ಪ್ರಯತ್ನ ಮಾಡುವಂತೆ ಆಹಾರ ತಂತ್ರಜ್ಞಾನ ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಸೀತಾಫಲ ಹಣ್ಣಿಗೆ ಆಯುಶ್ಯ ಕಡಿಮೆ, ಆದರೆ, ಅಪಾರ ಪೋಷಕಾಂಶಗಳನ್ನು ಹೊಂದಿರುವುದರಿಂದ ಅದನ್ನು ಸಂಸ್ಕರಿಸುವ ತಂತ್ರಜ್ಞಾನ ಆವಿಷ್ಕರಿಸಿದರೆ ಆಹಾರ ಸುರಕ್ಷತೆಯಲ್ಲಿ ಮಹತ್ವದ ಹೆಜ್ಜೆಯಾಗಬಹುದೆಂದರು. ಸಹಾಯಕ ಪ್ರಾಧ್ಯಾಪಕರು, ಐಐಎಫ್‍ಟಿ, ತಂಜಾವುರ, ತಮಿಳುನಾಡು ಡಾ. ಡಿ.ವಿ. ಚಿದಾನಂದ ಹಾಗೂ ಪ್ರಧಾನ ವಿಜ್ಞಾನಿ ಸಿ.ಎಫ್.ಟಿ.ಆರ್.ಐ. ಮೈಸೂರು ಡಾ. ಉಮೇಶ ಹೆಬ್ಬಾರ ಇವರು ಪಿಎಮ್‍ಎಫ್‍ಎಮ್‍ಎಈ, ಉದ್ಧೇಶ, ಮಾರ್ಗಸೂಚಿ, ಅನುಷ್ಠಾನ, ಅರ್ಜಿ ಸಲ್ಲಿಸಲು ಅರ್ಹತೆ ಮತ್ತು ಕಿರು ಆಹಾರ ಸಂಸ್ಕರಣ ತಂತ್ರಜ್ಞಾನಗಳ ಕುರಿತು ಸವಿಸ್ತಾರವಾಗಿ ತಿಳಿಸಿದರು.
ಡಾ. ಸಾವಿತ್ರಿ ಸಲಹೆಗಾರರು, ಆಹಾರ ನಿಯಂತ್ರಕರು ಮತ್ತು ಮುಖ್ಯಸ್ಥರು, ಬ್ರಿಟಾನಿಯಾ, ಬೆಂಗಳೂರು ಇವರು ಉತ್ಪಾದಿಸಿದ ಆಹಾರ ಉತ್ಪನ್ನಗಳಿಗೆ ಎಫ್‍ಎಸ್‍ಎಸ್‍ಎಐ, ನೊಂದಣಿ ಮತ್ತು ಪರವಾನಗಿಯ ಪಡೆಯುವ ಕಾರ್ಯವನ್ನು ಸರಳ ಮತ್ತು ಸವಿಸ್ತಾರವಾಗಿ ವಿವರಿಸಿದರು. ಇದಲ್ಲದೇ ಬ್ರ್ಯಾಡಿಂಗ್, ಲೇಬಲಿಂಗ್, ಅವಶ್ಯಕತೆ ಮಾಡುವ ವಿಧಾನಗಳ ಬಗ್ಗೆ ಮಂಜುನಾಥ ಪಾಟೀಲ್, ಲೀಟಲ್ ಸೀಸರ್ಸ್ ಕಂಪನಿಯ ಏಷಿಯ-ಫೆಸಿಪಿಕ್ ವಲಯದ ಮುಖ್ಯಸ್ಥರು ಮಾತನಾಡಿದರು. ಹಣಕಾಸಿನ ಸಹಾಯವನ್ನು ಪಡೆಯಲು ಕೊಡಬೇಕಾದ ಯೋಜನಾ ವರದಿ ತಯಾರಿಸುವುದುರ ಕುರಿತು ಮಯೂರ ಕಾಂಬಳೆ, ಜಿಲ್ಲಾಭಿವೃದ್ಧಿ ನರ್ಬಾಡ್, ಧಾರವಾಡ ತಿಳಿಸಿದರು. ಡಾ. ಆಶಾಲತಾ ಕೆ.ವಿ., ಡಾ. ಉಷಾ ಮಳಗಿ, ಡಾ. ಹೇಮಲತಾ ಎಸ್., ಡಾ. ಎಸ್.ಎ. ದೇಸಾಯಿ ಮತ್ತು ಕವಿತಾ ಸಿ. ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಎನ್‍ಎಎಚ್‍ಇಪಿ-ಐಡಿಪಿ ಯೋಜನೆ ಹಾಗೂ ಬಿ.ಟೆಕ್. (ಆಹಾರ ತಂತ್ರಜ್ಞಾನ), ಸಮುದಾಯ ವಿಜ್ಞಾನ ಮಹಾವಿದ್ಯಾಲಯ, ಧಾರವಾಡ ಪದವಿ ಸಿಬ್ಬಂದಿ ವರ್ಗದವರು ಆಯೋಜಿಸಿದರು.