ಸಂಸಾರ ಜೀವನದಲ್ಲಿ ಸಂಕಷ್ಟಗಳು ಬಂದರೂ ಹೊಂದಿಕೊಂಡು ಹೋಗಬೇಕು

ಚಿತ್ರದುರ್ಗ.ಜೂ.೬: ಜಗಳದಿಂದ ಸಂಸಾರಗಳು ತೊಂದರೆಗೆ ಸಿಲುಕುವ ಸಂದರ್ಭಗಳು ಹೆಚ್ಚಿರುತ್ತವೆ. ಹಾಗಾಗಿ ಸಂಸಾರ ಜೀವನದಲ್ಲಿ ಸಂಕಷ್ಟಗಳು ಬಂದರೂ ಹೊಂದಿಕೊಂಡು ಹೋಗಬೇಕು ಎಂದು ಶ್ರೀ ಬಸವಪ್ರಭು ಸ್ವಾಮಿಗಳು ನುಡಿದರು.ಶ್ರೀ ಮುರುಘರಾಜೇಂದ್ರ ಮಠದಲ್ಲಿ ಶುಕ್ರವಾರ ನಡೆದ ಮೂವತ್ಮೂರನೆ ವರ್ಷದ ಆರನೇ ತಿಂಗಳ ಸಾಮೂಹಿಕ ಕಲ್ಯಾಣ ಮಹೋತ್ಸವದ ಸಾನ್ನಿಧ್ಯ ವಹಿಸಿ ಮಾತನಾಡಿದ ಶ್ರೀಗಳು, ಪರಿಸರವನ್ನು ರಕ್ಷಿಸುವ ಹೊಣೆ ನಮ್ಮೆಲರದಾಗಿದೆ. ಪ್ರಕೃತಿ ತಾಯಿ ಇದ್ದಂತೆ. ಮುಂದಿನ ಸಂಕುಲ ಉಳಿಯಬೇಕಾದರೆ ಪ್ರಕೃತಿಯನ್ನು ಮಗುವಿನಂತೆ ಪೋಷಿಸಿ, ರಕ್ಷಿಸಬೇಕಾಗಿದೆ ಎಂದರು.ನಿಪ್ಪಾಣಿಯ ಶ್ರೀ ಮುರುಘೇಂದ್ರ ಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮಿಗಳು ಮಾತನಾಡಿ, 12ನೇ ಶತಮಾನದಲ್ಲಿ ಜಾತಿ ಮತ ಪಂಥಗಳನ್ನು ಮೀರಿ ಅನುಭವ ಮಂಟಪದಲ್ಲಿ ಭಾಗವಹಿಸುತ್ತಿದ್ದರು. ಶರಣೆ ದಾನಮ್ಮದೇವಿ ಹಾಗು ಬಸವಾದಿ ಪ್ರಮಥರು ಸಾಮೂಹಿಕ ಕಲ್ಯಾಣಕ್ಕೆ ಅಂದೇ ಚಾಲನೆ ನೀಡಿದರು. ಹಾಗೆಯೇ ಶ್ರೀಮಠವು ಸಹ ಕಳೆದ 33 ವರ್ಷಗಳಿಂದ ಜಾತ್ಯತೀತವಾಗಿ ಕಲ್ಯಾಣ ಮಹೋತ್ಸವವನ್ನು ನಡೆಸಿಕೊಂಡು ಬರುತ್ತಿರುವುದು ಈ ಭಾಗದ ಜನರ ಕಲ್ಯಾಣ ಕಾರ್ಯಗಳಿಗೆ ಅನುಕೂಲವಾಗಿದೆ ಎಂದು ಹೇಳಿದರು.ಮುಖ್ಯಅತಿಥಿ ಡಾ. ಸಿ.ಆರ್. ನಸೀರ್ ಅಹಮದ್ ಮಾತನಾಡಿ, ಇದೊಂದು ಐತಿಹಾಸಿಕ ಮಠ. ಬಸವಾದಿ ಪ್ರಮಥರ ತತ್ವಸಿದ್ಧಾಂತದ ತಳಹದಿಯ ಮೇಲೆ ಶ್ರೀಮಠ ನಡೆಯುತ್ತಿದೆ. ಸಾಮೂಹಿಕ ಕಲ್ಯಾಣ ಮಹೋತ್ಸವದಿಂದ ಸಮಾಜಕ್ಕೆ ಒಳ್ಳೆಯ ಸಂದೇಶ ಹೋಗಿದೆ. ಇಲ್ಲಿನ ದಾಸೋಹ ಸೇವೆಯು ದೊಡ್ಡದು. ಶ್ರೀಮಠವು ಎಲ್ಲ ಸಮಾಜ, ಧರ್ಮಗಳನ್ನು ಅಪ್ಪಿಕೊಂಡಿದೆ ಒಪ್ಪಿಕೊಂಡಿದೆ ಎಂದರು.ಕಾರ್ಯಕ್ರಮದಲ್ಲಿ ಲಿಂಗಾಯತ (ವರ) – ಆದಿಕರ್ನಾಟಕ (ವಧು) ಅಂತರ್ಜಾತಿ ವಿವಾಹ ಸೇರಿದಂತೆ 12 ಜೋಡಿಗಳ ವಿವಾಹ ನೆರವೇರಿತು. ಇದೇ ಸಂದರ್ಭದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ವಧು-ವರರಿಂದ ಸಸಿಗಳನ್ನೆ ನೆಡಸಲಾಯಿತು.ಯುಗಧರ್ಮ ರಾಮಣ್ಣ ಲಾವಣಿಗಳನ್ನು ಹಾಡಿದರು. ತೋಟಪ್ಪ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಶಿವಕುಮಾರ್ ಸ್ವಾಗತಿಸಿದರು. ಪ್ರಕಾಶ್‌ದೇವರು ನಿರೂಪಿಸಿದರು.