
ಮುಂಬೈ,ಫೆ.೨೭- ಬಾಲಿವುಡ್ ನಟಿ ಮಾಧುರಿ ದೀಕ್ಷಿತ್ ತಮ್ಮ ವೈವಾಹಿಕ ಬದುಕಿನ ಬಗ್ಗೆ ಮೊದಲ ಬಾರಿಗೆ ಮನಬಿಚ್ಚಿ ಮಾತನಾಡಿದ್ದಾರೆ.
ಸತತ ೨೪ ವರ್ಷಗಳ ಬಳಿಕ ಮಾಧುರಿ ದೀಕ್ಷಿತ್ ತಮ್ಮ ಸಂಸಾರದ ರಹಸ್ಯವನ್ನು ಬಿಚ್ಚಿಟ್ಟಿದ್ದಾರೆ.೧೯೯೯ ರಲ್ಲಿ, ಮಾಧುರಿ ದೀಕ್ಷಿತ್ ಅವರು ವೈದ್ಯ ಶ್ರೀರಾಮ್ ನೆನೆ ಅವರೊಂದಿಗೆ ಸಪ್ತಪದಿ ತುಳಿದಿದ್ದರು. ಮದುವೆಯ ನಂತರ ಮಾಧುರಿ ಚಿತ್ರರಂಗಕ್ಕೆ ಬ್ರೇಕ್ ಕೊಟ್ಟು ವಿದೇಶದಲ್ಲಿ ನೆಲೆಸಿದರು. ಆದರೆ ಮಾಧುರಿ ದೀಕ್ಷಿತ್ ದಾಂಪತ್ಯ ಜೀವನ ಅಂದುಕೊಂಡಷ್ಟು ಸುಖಮಯವಾಗಿರಲಿಲ್ಲ. ಮದುವೆಯಾದ ನಂತರ ಆಕೆ ಹಲವಾರು ತೊಂದರೆಯನ್ನು ಎದುರಿಸಿದ್ದಾರಂತೆ.
ಯೂಟ್ಯೂಬ್ ಚಾನೆಲ್‌ನಲ್ಲಿ ತಮ್ಮ ವೈವಾಹಿಕ ಜೀವನದ ಬಗ್ಗೆ ಮಾತನಾಡಿದ್ದಾರೆ. ಈ ವೇಳೆ ಸಂಸಾರದ ಅನೇಕ ವಿಚಾರಗಳನ್ನು ಬಗ್ಗೆ ಮಾತಾಡಿದ್ದು, ನಟಿ ಡಾಕ್ಟರ್ ಜೊತೆ ಹೊಂದಾಣಿಕೆ ಮಾಡಿಕೊಳ್ಳಲು ಪರಿತಪಿಸಿದ್ದಾರೆ.
ವೈದ್ಯರ ಪತ್ನಿಯಾಗಿರುವುದು ನನಗೆ ಅನೇಕ ಬಾರಿ ಕಷ್ಟ ಎನಿಸಿದೆ ಎಂದು ಹೇಳಿದ್ದಾರೆ. ಇಬ್ಬರು ಒಟ್ಟಿಗೆ ಇರಲು ಸಮಯವೇ ಸಿಗುತ್ತಿರಲಿಲ್ಲ ಎಂದು ಮಾಧುರಿ ದೀಕ್ಷಿತ್ ಹೇಳಿದ್ದಾರೆ. ನನಗೆ ಹೆಚ್ಚು ಸಮಯ ಕೊಡ್ತಿಲ್ಲ ಎಂಬ ಕಾರಣಕ್ಕೆ ತುಂಬಾ ಕಷ್ಟವಾಗುತ್ತಿತ್ತು. ಕೆಲವೊಮ್ಮೆ ಎಲ್ಲಾ ಪ್ಲಾನ್ ಬದಲಾಗಿತ್ತು. ನಾನು ಇಡೀ ದಿನ ಫೋನ್‌ನಲ್ಲಿ ಬ್ಯುಸಿಯಾಗಿ ಇರ್ತಿದ್ದೆ ಎಂದು ಹೇಳಿದ್ದಾರೆ.
ತನ್ನ ಕಷ್ಟದ ದಿನವನ್ನು ಹಂಚಿಕೊಂಡ ಮಾಧುರಿ ದೀಕ್ಷಿತ್, ಆ ದಿನಗಳು ನನಗೆ ನಿಜವಾಗಿಯೂ ಕಷ್ಟಕರವಾಗಿತ್ತು. ಅವರು ಇಲ್ಲದೇ ನಾನು ಎಷ್ಟೋ ಸಮಯ ಹೆಚ್ಚಾಗಿ ನನ್ನ ಮಕ್ಕಳೊಂದಿಗೆ ಇರ್ತಿದ್ದೆ, ಅವರನ್ನು ಶಾಲೆಗೆ ಕರೆದೊಯ್ಯಬೇಕಾಗಿತ್ತು. ನನಗೆ ಸಮಯ ಕೊಡುತ್ತಿಲ್ಲ ಎನ್ನುವ ವಿಷಯವೇ ನನಗೆ ದೊಡ್ಡ ಸಮಸ್ಯೆಯಾಗಿತ್ತು ಎಂದು ಮಾಧುರಿ ಹೇಳಿದ್ದಾರೆ.
ನಮ್ಮ ಮನೆಯಲ್ಲಿ ಏನಾದರೂ ವಿಶೇಷವಿದ್ದರೂ ಹಬ್ಬದ ಸಮಯದಲ್ಲಿ, ನೀವು ನಮ್ಮೊಂದಿಗೆ ಇರಲಿಲ್ಲ, ಆ ಸಮಯದಲ್ಲಿ ಆಸ್ಪತ್ರೆಯಲ್ಲಿ ಬೇರೆಯವರಿಗೆ ಸಹಾಯ ಮಾಡುತ್ತಿದ್ದೀರಿ. ನಾನು ಅನಾರೋಗ್ಯದಿಂದ ಬಳಲುತ್ತಿದ್ದಾಗ, ನೀವು ಬೇರೆಯವರನ್ನು ನೋಡಿಕೊಂಡಿದ್ದೀರಿ. ಇದೆಲ್ಲಾ ನನಗೆ ಕೆಲವೊಮ್ಮೆ ತುಂಬಾ ಕಷ್ಟಕರ ಅನಿಸಿದೆ ಎಂದು ಹೇಳಿದ್ದಾರೆ.
ಮಾತು ಮುಂದುವರಿಸಿದ ಮಾಧುರಿ ದೀಕ್ಷಿತ್, ಇದರ ಹೊರತಾಗಿಯೂ ನಾನು ಯಾವಾಗಲೂ ನಿಮ್ಮ ಬಗ್ಗೆ ಹೆಮ್ಮೆಪಡುತ್ತೇನೆ ಎಂದು ಹೇಳಿದ್ದಾರೆ. ನೀವು ಯಾವಾಗಲೂ ರೋಗಿಗಳ ಪರವಾಗಿ ನಿಂತಿದ್ದೀರಿ, ಅವರ ಜೀವಕ್ಕಾಗಿ ಶ್ರಮಿಸಿದ ರೀತಿ ನನ್ನ ಹೃದಯವನ್ನು ಗೆದ್ದಿವೆ. ನೀವು ತುಂಬಾ ಒಳ್ಳೆಯ ವ್ಯಕ್ತಿ ಎಂದು ಪತಿಯನ್ನು ಕೊಂಡಾಡಿದ್ದಾರೆ.