ಸಂಸಾರದಲ್ಲಿ ತಾಳ್ಮೆ ಮುಖ್ಯ;  ಬಸವಪ್ರಭು ಶ್ರೀ 

ಚಿತ್ರದುರ್ಗ : ಜ. 6- ತಾಳ ತಪ್ಪಿದರೆ ಸಂಗೀತ ಕೆಡುತ್ತದೆ. ತಾಳ್ಮೆ ತಪ್ಪಿದರೆ ಸಂಸಾರ ಹದಗೆಡುತ್ತದೆ. ಮದುವೆ ನಂತರ ಜೀವನ ಯಶಸ್ವಿಯಾಗಬೇಕಾದರೆ ಸಂಸಾರದಲ್ಲಿ ತಾಳ್ಮೆ ಮುಖ್ಯ ಎಂದು ಶ್ರೀ ಬಸವಪ್ರಭು ಸ್ವಾಮಿಗಳು ನುಡಿದರು.ಶ್ರೀ ಮುರುಘರಾಜೇಂದ್ರ ಮಠದಲ್ಲಿ ನಡೆದ ಮೂವತ್ಮೂರನೆ ವರ್ಷದ ಮೊದಲ ತಿಂಗಳ ಸಾಮೂಹಿಕ ಕಲ್ಯಾಣ ಮಹೋತ್ಸವದ ಸಾನ್ನಿಧ್ಯ ವಹಿಸಿ ಮಾತನಾಡಿದ ಶ್ರೀಗಳು, ಗಂಡ ಹೆಂಡತಿ ಮಧ್ಯೆ ಕೋಪ ಬಂದಾಗ ಯಾರಾದರು ಒಬ್ಬರು ಸುಮ್ಮನಾಗಬೇಕು. ಸತಿ-ಪತಿಗಳ ಮನಸ್ಸು ಒಂದಾಗಬೇಕು. ಶ್ರೀಮಂತರಲ್ಲಿ ಅನೇಕರು ದೊಡ್ಡ ದೊಡ್ಡದಾಗಿ ವಿವಾಹ ಮಾಡುತ್ತಾರೆ. ಆದರೆ ಕೆಲವು ಸಂಸಾರದಲ್ಲಿ ಕೆಲವೇ ದಿನಗಳಲ್ಲಿ ವಿಚ್ಛೇದನಗೊಳ್ಳುತ್ತವೆ. ಹಾಗಾಗದೆ, ಅವರಲ್ಲಿ ವಿರಸ ಭಾವನೆಗಳು ಇರಬಾರದು. ಸತಿಪತಿಗಳ ನಡುವೆ ಪ್ರೀತಿ ಇರಬೇಕು. ಅಣ್ಣ-ತಮ್ಮ, ಅಪ್ಪ-ಅಮ್ಮ ಅವರ ಮಧ್ಯೆ ಬಾಂಧವ್ಯ ಇರಬೇಕು. ಮಧುರ ಬಾಂಧವ್ಯ ಇರುವ ಮನೆ ಧರ್ಮಕ್ಷೇತ್ರ ಆಗುತ್ತದೆ ಎಂದು ಹೇಳಿದರು.ಸಮ್ಮುಖ ವಹಿಸಿದ್ದ ಕೊಡ್ಲಿಪೇಟೆಯ ಕಲ್ಲಳ್ಳಿಮಠದ ಶ್ರೀ ರುದ್ರಮುನಿ ಸ್ವಾಮಿಗಳು ಮಾತನಾಡಿ, ಜೀವನ ಅಮೂಲ್ಯವಾದುದು. ಬಾಲ್ಯ, ಯೌವ್ವನ, ಮುಪ್ಪಾವಸ್ಥೆ ಬರುತ್ತದೆ. ಸಂಸ್ಕಾರಗಳಲ್ಲಿ ವಿವಾಹ ಎನ್ನುವುದು ಪ್ರಮುಖ ಘಟ್ಟ. ಸತಿ-ಪತಿಗಳು ಬದುಕನ್ನು ಸಮನವಾಗಿ ಸ್ವೀಕರಿಸಬೇಕು ಎಂದು ಹೇಳಿದರು.ಕಾರ್ಯಕ್ರಮದಲ್ಲಿ 4 ಜೋಡಿ ವಿವಾಹ ನೆರವೇರಿತು. ನಿವೃತ್ತ ನ್ಯಾಯಾಧೀಶರಾದ ಶ್ರೀ ಬಿ.ಎಸ್.ವಸ್ತçಮಠ, ಪೈಲ್ವಾನ್ ತಿಪ್ಪೇಸ್ವಾಮಿ ಮೊದಲಾದವರಿದ್ದರು.ಜಮುರಾ ಕಲಾವಿದರು ಪ್ರಾರ್ಥಿಸಿದರು. ವೀರಭದ್ರಪ್ಪ ಸ್ವಾಗತಿಸಿದರು. ಬಸವಲಿಂಗ ದೇವರು ನಿರೂಪಿಸಿದರು.