ಸಂಸಾರದಲ್ಲಿದ್ದು ಪಂಚಶೀಲ ಆಚರಿಸಿ: ಭಂತೆ ವರಜ್ಯೋತಿ ಕರೆ

ಕಲಬುರಗಿ,ನ.18-ಬುದ್ಧನು ಬೋಧಿಸಿದ ಪಂಚಶೀಲ ತತ್ವಗಳನ್ನು ಸಂಸಾರದಲ್ಲಿದ್ದುಕೊಂಡು ಸಹ ಆಚರಣೆ ಮಾಡಬೇಕು ಎಂದು ಭಂತೆ ವರಜ್ಯೋತಿ ಕರೆ ನೀಡಿದರು.
ಇಲ್ಲಿನ ರಾಮಜೀ ನಗರದಲ್ಲಿರುವ ಅಮ್ರಪಾಲಿ ಬುದ್ಧವಿಹಾರದಲ್ಲಿ ಈಚೆಗೆ ಆಯೋಜಿಸಿದ್ದ ‘ವರ್ಷಾವಾಸ ಸಮಾರೋಪ, ಕಠಿಣ ಚೀವರ ದಾನ’ ಕಾರ್ಯಕ್ರಮದಲ್ಲಿ ಧಮ್ಮ ಪ್ರವಚನ ನೀಡಿದರು.
ವರ್ಷದಲ್ಲಿ ಒಂದೇ ಬಾರಿ ವರ್ಷಾವಾಸ ಆಚರಣೆ ಬರುತ್ತದೆ. ಆಷಾಢ ಪೂರ್ಣಿಮೆಯಿಂದ ಅಶ್ವಿನಿ ಪೂರ್ಣಿಮೆವರೆಗೂ ಇರುತ್ತದೆ. ಮಳೆಗಾಲದ ಮೂರು ತಿಂಗಳು ಬೌದ್ಧ ಬಿಕ್ಕುಗಳು ಒಂದೇ ವಿಹಾರದಲ್ಲಿದ್ದು ಪೂಜೆ, ಪ್ರವಚನ, ಧ್ಯಾನ, ಧಮ್ಮ ಅಧ್ಯಯನ ಮಾಡುತ್ತಾರೆ ಎಂದರು.
ಇದು ಬುದ್ಧನ ಕಾಲದಿಂದಲೂ ನಡೆದುಕೊಂಡು ಬಂದಿರುವ ಪರಂಪರೆ ಆಗಿದೆ. ಪಂಚಶೀಲ ಆಚರಣೆ ಮಾಡುವುದರಿಂದ ಜೀವನವು ಸುಖವಾಗಿರುತ್ತದೆ. ಮೂಢನಂಬಿಕೆ, ಅಂಧ ವಿಶ್ವಾಸದಿಂದ ದೂರವಿರಲು ಇದೊಂದು ಸಾಧನ ಎಂದು ಹೇಳಿದರು.
ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಬುದ್ಧನ ಭಾವಚಿತ್ರ ಇಟ್ಟು ಪೂಜೆ ಮಾಡುವುದರಿಂದ ಏನೂ ಬದಲಾವಣೆ ಆಗುವುದಿಲ್ಲ. ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆದುಕೊಂಡಾಗ ಮಾತ್ರ ಬೌದ್ಧರಾಗಲು ಸಾಧ್ಯ ಎಂದರು.
ಭಂತೆ ಧರ್ಮಕೀರ್ತಿ, ಭಂತೆ ರಾಹುಲ, ಭಂತೆ ಅಶ್ವಜೀತ, ಭಂತೆ ಬೋಧಧರ್ಮ ಇದ್ದರು. ಕಲಬುರಗಿ ನಗರ ಹಾಗೂ ವಿವಿಧೆಡೆಯಿಂದ ಉಪಾಸಕರು ಭಾಗವಹಿಸಿದ್ದರು.