
ಬೆಂಗಳೂರು, ಸೆ.1- ಹಾಸನ ಲೋಕಸಭಾ ಕ್ಷೇತ್ರ ಸಂಸದ ಪ್ರಜ್ವಲ್ ರೇವಣ್ಣ ಅವರ ಆಯ್ಕೆಯನ್ನು ಅಸಿಂಧು ಎಂದು ಕರ್ನಾಟಕ ಹೈಕೋರ್ಟ್ ಇಂದು ಘೋಷಿಸಿದೆ. ಇದರಿಂದಾಗಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಕುಟುಂಬಕ್ಕೆ ಭಾರೀ ಹಿನ್ನಡೆಯುಂಟಾಗಿದೆ.
ಪ್ರಜ್ವಲ್ ರೇವಣ್ಣ ಅವರು ಮಾಜಿ ಪ್ರಧಾನಿ ಮತ್ತು ಜೆಡಿಎಸ್ ವರಿಷ್ಠ ಎಚ್‌ಡಿ ದೇವೇಗೌಡ ಅವರ ಮೊಮ್ಮಗನಾಗಿದ್ದು, ಕಳೆದ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಪಾರದರ್ಶಕ ರೀತಿಯಲ್ಲಿ ನಾಮಪತ್ರ ಸಲ್ಲಿಸಿಲ್ಲ, ಚುನಾವಣಾ ಅಕ್ರಮ ಎಸಗಿದ್ದಾರೆ, ಹೀಗಾಗಿ ಅವರ ಆಯ್ಕೆ ಅಸಿಂಧು ಎಂದು ನ್ಯಾಯಮೂರ್ತಿ ನಟರಾಜನ್ ಪ್ರಕಟಿಸಿದರು.
2019 ರ ಏಪ್ರಿಲ್ 18 ರಂದು ಪ್ರಜ್ವಲ್ ಅವರ ಸಂಸದ ಆಯ್ಕೆಯನ್ನು ಪ್ರಶ್ನಿಸಿ ಬಿಜೆಪಿಯಿಂದ ಸೋತ ಅಭ್ಯರ್ಥಿ ಎ ಮಂಜು ಮತ್ತು ಕ್ಷೇತ್ರದ ಮತದಾರರಾದ ಜಿ ದೇವರಾಜೇಗೌಡ ಅವರು ಸಲ್ಲಿಸಿದ ಎರಡು ಅರ್ಜಿಗಳ ಸರಣಿ ವಿಚಾರಣೆ ನಡೆಸಿ ಅರ್ಜಿಯನ್ನು ನ್ಯಾಯಪೀಠ ಇತ್ಯರ್ಥಪಡಿಸಿತು.
ಅರ್ಜಿದಾರರು ಸಲ್ಲಿಸಿದ ಎರಡೂ ಚುನಾವಣಾ ಅರ್ಜಿಗಳನ್ನು ಭಾಗಶಃ ನ್ಯಾಯಪೀಠ ಅನುಮತಿಸಲಾಗಿದೆ. ಆದರೆ, ಮಂಜು ಅವರೇ ಭ್ರಷ್ಟಾಚಾರದಲ್ಲಿ ತೊಡಗಿರುವ ಕಾರಣ ಅವರನ್ನು ವಿಜೇತ ಅಭ್ಯರ್ಥಿ ಎಂದು ಘೋಷಿಸುವಂತೆ ಅರ್ಜಿದಾರರ ಮನವಿಯನ್ನು ಹೈಕೋರ್ಟ್ ತಿರಸ್ಕರಿಸಿ ಈ ಸಂಬಂಧ ನೊಟೀಸ್ ನೀಡಿದೆ.
ಚೆನ್ನಾಂಬಿಕಾ ಕನ್ವೆನ್ಷನಲ್ ಹಾಲ್ ಕನಿಷ್ಠ 5 ಕೋಟಿ ರೂಪಾಯಿ ಮೌಲ್ಯದ್ದಾಗಿದೆ ಆದರೆ ಪ್ರಜ್ವಲ್ ಕೇವಲ 14 ಲಕ್ಷ ರೂಪಾಯಿ ಎಂದು ಘೋಷಿಸಿದ್ದಾರೆ. ಖಾತೆಯಲ್ಲಿ ಬ್ಯಾಂಕ್ ಬ್ಯಾಲೆನ್ಸ್ 5 ಲಕ್ಷ ಎಂದು ಘೋಷಿಸಲಾಗಿದೆ ಆದರೆ 48 ಲಕ್ಷ ರೂಪಾಯಿ ಠೇವಣಿ ಇದೆ ಎಂದು ಆರೋಪಿಸಲಾಗಿದೆ. ಸಂಸದರು ಬೇನಾಮಿಗಳ ಹೆಸರಿನಲ್ಲಿ ಹಲವಾರು ಆಸ್ತಿಗಳನ್ನು ಹೊಂದಿದ್ದಾರೆ. ಅವರು ಆದಾಯ ತೆರಿಗೆ ವಂಚನೆಯನ್ನೂ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಸಂಸತ್ ಸದಸ್ಯ ಸ್ಥಾನದಿಂದ ಅನರ್ಹತೆ ಪ್ರಜ್ವಲ್ ರೇವಣ್ಣ ಅವರು ಕಾನೂನು ಸಮರ ನಡೆಸಲು ಮುಂದಾಗಿದ್ದಾರೆ. ಸರ್ವೋಚ್ಛ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸುವ ಸಂಬಂಧ ತಮ್ಮ ವಕೇಲರ ಜತೆ ಸಮಾಲೋಚನೆ ನಡೆಸಿದ್ದಾರೆ.