ಸಂಸದ ಮುನಿಸ್ವಾಮಿ ವಿರುಧ್ಧ ಕುತಂತ್ರಕ್ಕೆ ಖಂಡನೆ

ಕೋಲಾರ,ಮೇ.೨೯:ಜನತೆಯ ಕಷ್ಟ ಸುಖಗಳಿಗೆ ಸ್ಪಂದಿಸಿ ಅವರಿಗೆ ಆತ್ಮಸ್ತೈರ್ಯವನ್ನು ತುಂಬುತ್ತಿರುವ ಸಂಸದ ಎಸ್. ಮುನಿಸ್ವಾಮಿ ಅವರನ್ನು ರಾಜಕೀಯವಾಗಿ ಮೂಲೆಗುಂಪು ಮಾಡಲು ಮುಂದಾಗಿರುವ ಕ್ರಮವನ್ನು ಬಿಜೆಪಿ ಯುವ ಮೋರ್ಚಾದ ಅಧ್ಯಕ್ಷ ಬಾಲಾಜಿ ತೀವ್ರವಾಗಿ ಖಂಡಿಸಿದ್ದಾರೆ.
ಕರೋನಾ ಬಂದಾಗಿನಿಂದ ಮಾಯವಾಗಿದ್ದ ಶಾಸಕರುಗಳು ತಮ್ಮ ಕ್ಷೇತ್ರದಲ್ಲಿ ಏನೆಲ್ಲಾ ಬೆಳವಣಿಗೆಗಳು ನಡೆಯುತ್ತಿದ್ದರೂ ಧ್ವನಿ ಎತ್ತದ ಶಾಸಕರುಗಳು ಸಂಸದರ ಪ್ರಾಮಾಣಿಕ ಸೇವೆ, ಕಾರ್ಯವೈಖರಿಯನ್ನು ಜೀರ್ಣಿಸಿಕೊಳ್ಳಲಾಗಿದೆ ಇಂತಹ ಹೇಳಿಕೆಗಳನ್ನು ನೀಡುತ್ತಿರುವುದು ಅವರಿಗೆ ಶೋಭೆ ತರುವುದಿಲ್ಲ ಎಂದರು.
ನಿಸ್ವಾರ್ಥ ಸೇವೆ, ಸರಳ ಜೀವನ, ಕರೋನ ವಾರಿಯರ್, ಸೇವಾಮನೋಭಾವ ವ್ಯಕ್ತಿತ್ವವುಳ್ಳ ಲೋಕಸಭಾ ಸದಸ್ಯರಾದ ಮುನಿಸ್ವಾಮಿ ರವರನ್ನು ತೇಜೋವಧೆ ಮಾಡಲು ಯತ್ನಿಸುತ್ತಿರುವ ಶಾಸಕರ ನಡುವಳಿಕೆಗಳನ್ನು ತೀವ್ರವಾಗಿ ಖಂಡಿಸಿದರು.
ಗುರುವಾರದಂದು ಎಸ್.ಎನ್ ರೆಸಾರ್ಟ್‌ನಲ್ಲಿ ಸಭೆ ಸೇರಿದ ಜಿಲ್ಲೆಯ ಎಲ್ಲಾ ಶಾಸಕರು ಲೋಕಸಭಾ ಸದಸ್ಯರ ಮೇಲೆ ಇಲ್ಲಸಲ್ಲದ ಆರೋಪಗಳನ್ನು ಮಾಡಿ ವ್ಯರ್ಥ ಕಾಲಹರಣ ಮಾಡುವುದು ಖಂಡನೀಯ. ಇಷ್ಟೇ ಅಲ್ಲದೆ ಇಲ್ಲಸಲ್ಲದ ಆರೋಪಗಳನ್ನು ಹೀಗೆ ಮುಂದುವರಿಸಿದರೆ ಅವರ ವಿರುದ್ಧವಾಗಿ ಕೋಲಾರ ಜಿಲ್ಲಾ ಯುವ ಮೋರ್ಚಾ ವತಿಯಿಂದ ಜಿಲ್ಲಾದ್ಯಂತ ತೀವ್ರ ಪ್ರತಿಭಟನೆಗಳನ್ನು ಕೈಗೊಳ್ಳಬೇಕಾಗುತ್ತದೆ ಎಂದು ಈ ಮೋರ್ಚಾದ ಅಧ್ಯಕ್ಷ ಬಾಲಾಜಿ ಎಚ್ಚರಿಸಿದರು.
ಗಾಲ್ಫ್ ಕ್ಲಬ್‌ನಲ್ಲಿ ಸಭೆ ಸೇರಿ ಕಾಲಹರಣ ಮಾಡುವ ಬದಲು ತಮ್ಮ ತಮ್ಮ ತಾಲೂಕಿನಲ್ಲಿ ಮಾಡತಕ್ಕಂತಹ ಅಭಿವೃದ್ಧಿ ಕಾರ್ಯಕ್ರಮಗಳನ್ನು ಜನರಿಗೆ ಮುಟ್ಟಿಸುವಲ್ಲಿ ಯಶಸ್ವಿಯಾಗಿ ಎಂದು ಆಗ್ರಹಿಸಿದರು.