ಸಂಸದ ಮುನಿಸ್ವಾಮಿರಿಗೆ ಅಭಿಮಾನಿಗಳ ಹಾರೈಕೆ

ಕೋಲಾರ,ಏ.೧೭: ಕೋಲಾರ ಲೋಕಸಭಾ ಕ್ಷೇತ್ರದ ಸಂಸದ ಎಸ್.ಮುನಿಸ್ವಾಮಿಯವರು ರಾಜಕೀಯವಾಗಿ ಇನ್ನೂ ಉನ್ನತ ಸ್ಥಾನಕ್ಕೆ ಏರಲಿ ಹಾಗೂ ಅವರಿಗೆ ದೇವರು ಆಯಸ್ಸು, ಆರೋಗ್ಯ, ಐಶ್ವರ್ಯ, ಸುಖ, ಶಾಂತಿ ನೀಡಲಿ ಎಂದು ಎಸ್.ಮುನಿಸ್ವಾಮಿ ಅಭಿಮಾನಿ ಬಳಗದ ರಾಜ್ಯಾಧ್ಯಕ್ಷ ಕಲ್ಕೆರೆ ವಿಜಯಕುಮಾರ್ ತಿಳಿಸಿದರು.
ನಗರ ಹೊರವಲಯದ ಅಂತರಗಂಗಾ ಬುದ್ಧಿಮಾಂದ್ಯ ಮಕ್ಕಳ ವಸತಿ ಶಾಲೆಯಲ್ಲಿ ಸಂಸದ ಎಸ್.ಮುನಿಸ್ವಾಮಿರವರ ಹುಟ್ಟುಹಬ್ಬವನ್ನು ಮಕ್ಕಳೊಂದಿಗೆ ಎಸ್ ಮುನಿಸ್ವಾಮಿ ಅಭಿಮಾನಿ ಬಳಗದ ಗೆಳೆಯರು ಆಚರಿಸಿ ಮಾತನಾಡುತ್ತಾ, ಉಳ್ಳವರು ಇಲ್ಲದವರಿಗೆ ತಮ್ಮ ಕೈಲಾದ ಸಹಾಯವನ್ನು ಮಾಡುವ ಮೂಲಕ ಅರ್ಥಪೂರ್ಣ ಹುಟ್ಟುಹಬ್ಬಗಳನ್ನು ಆಚರಿಸಿಕೊಂಡಾಗ ಮಾತ್ರ ತಮ್ಮಗಳ ಜೀವನ ಸಾರ್ಥಕತೆ ಕಾಣುತ್ತವೆ ಎಂದು ತಿಳಿಸಿದರು.
ಈ ಸಂಧರ್ಭದಲ್ಲಿ ಮಕ್ಕಳಿಗೆ ಬೆಳಗಿನ ಉಪಹಾರದೊಂದಿಗೆ ಕೇಕ್ ವಿತರಿಸಲಾಯಿತು. ನಂತರ ನಗರದ ಶ್ರೀ ಸಾಯಿಬಾಬಾ ದೇವಾಲಯದಲ್ಲಿ ಸಂಸದರ ಹೆಸರಿನಲ್ಲಿ ವಿಶೇಷ ಪೂಜೆ ಸಲ್ಲಿಸಿ, ಎಸ್.ಎನ್.ಆರ್ .ಆಸ್ಪತ್ರೆಯಲ್ಲಿ ಹೊರ ರೋಗಿಗಳಿಗೆ ಮಾಸ್ಕ್ ಗಳನ್ನು ವಿತರಿಸುವ ಮೂಲಕ ಅರ್ಥಪೂರ್ಣವಾಗಿ ಸಂಸದರ ಹುಟ್ಟು ಹಬ್ಬವನ್ನು ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಎಸ್.ಮುನಿಸ್ವಾಮಿ ಅಭಿಮಾನಿ ಬಳಗದ ಉಪಾಧ್ಯಕ್ಷ ವೆಂಕಟಾಚಲಪತಿ, ರಾಮಾಂಜನಪ್ಪ, ರವಿ, ಶ್ರೀನಾಥ್, ಅನಿಲ್, ನಿತಿನ್, ಮಂಜುನಾಥ್ ಹಾಗೂ ವಸತಿ ಶಾಲೆಯ ಕಾರ್ಯದರ್ಶಿ ಶಂಕರ್, ಪ್ರಜ್ಞಾ ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.