ಸಂಸದ ಪ್ರಜ್ವಲ್ ವಿರುದ್ಧ ಸಿಎಂಗೆ ಮನೇಕಾ ಪತ್ರ

ಬೆಂಗಳೂರು, ಜು. ೧೯- ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಮನೇಕಾ ಗಾಂಧಿ ಕಿಡಿಕಾರಿದ್ದಾರೆ. ವಿದ್ಯುತ್ ಹರಿಸಿ ಆನೆಯೊಂದನ್ನು ಕೊಂದಿದ್ದಲ್ಲದೇ, ಅದರ ದಂತವನ್ನು ಮಾರಾಟ ಮಾಡಿದ ಆರೋಪಿಗಳ ರಕ್ಷಣೆಗೆ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಪ್ರಯತ್ನ ಮಾಡುತ್ತಿದ್ದಾರೆ ಎಂದು ಆರೋಪಿಸಿ ಸಂಸದೆ ಮನೇಕಾ ಗಾಂಧಿ ಅವರು ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿದ್ದಾರೆ.
ಇತ್ತೀಚೆಗೆ ಹಾಸನ ಜಿಲ್ಲೆಯ ವೀರಾಪುರ ಗ್ರಾಮದಲ್ಲಿ ಜಮೀನುಗಳಿಗೆ ನುಗ್ಗಿ ಬೆಳೆ ನಾಶ ಮಾಡುತ್ತಿದ್ದ ಆನೆಯೊಂದನ್ನು ಕೊಲ್ಲಲಾಗಿತ್ತು. ಅಲ್ಲದೇ ಸತ್ತ ಆನೆ ದಂತವನ್ನು ಬೆಂಗಳೂರಿಗೆ ತಂದು ಮಾರಾಟ ಮಾಡಲು ಆರೋಪಿಗಳು ಪ್ರಯತ್ನಿಸಿದ್ದರು. ಈ ವೇಳೆ ಪೊಲೀಸರಿಗೆ ಸಿಕ್ಕಿಬಿದ್ದ ಆರೋಪಿಗಳು, ಆನೆಯನ್ನು ವಿದ್ಯುತ್ ಹರಿಸಿ ಕೊಂದಿರುವುದನ್ನು ಒಪ್ಪಿಕೊಂಡಿದ್ದರು.
ಅರಣ್ಯ ಇಲಾಖೆಯ ಗಂಭೀರ ಪ್ರಕರಣದಲ್ಲಿ ಆರೋಪಿಗಳ ರಕ್ಷಣೆಗೆ ಒತ್ತಡ ಹೇರಿದ್ದಾರೆ ಎಂದು ಪತ್ರ ಬರೆದಿದ್ದಾರೆ. ಆರೋಪಿಗಳ ರಕ್ಷಣೆಗೆ ಸ್ಥಳೀಯ ವಲಯ ಅರಣ್ಯ ಅಧಿಕಾರಿ ಬಾರಿ ಭ್ರಷ್ಟಾಚಾರ ಮಾಡಿದ್ದಾರೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.