ಸಂಸದ ಪ್ರಜ್ವಲ್ ರೇವಣ್ಣ ಪ್ರಕರಣ ಬಿಜೆಪಿಗೆ ಇರಿಸುಮುರಿಸು: ಮುಖ್ಯಮಂತ್ರಿ ಚಂದ್ರು

ಕಲಬುರಗಿ:ಮೇ.15:ಹಾಸನ್ ಸಂಸದ ಪ್ರಜ್ವಲ್ ರೇವಣ್ಣ ಪೆನ್‍ಡ್ರೈವ್ ಪ್ರಕರಣವು ಬಿಜೆಪಿಯವರಿಗೆ ಇರಿಸುಮುರಿಸು ತಂದಿದ್ದು, ನುಂಗಲಾಗದ ಬಿಸಿ ತುಪ್ಪವಾಗಿದೆ ಎಂದು ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಹಾಗೂ ಖ್ಯಾತ ಚಲನಚಿತ್ರ ನಟ ಮುಖ್ಯಮಂತ್ರಿ ಚಂದ್ರು ಅವರು ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಬುಧವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾನು ಪೆನ್‍ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ತಿಮ್ಮ, ರಾಮ, ಬೊಮ್ಮ ಎಂದು ಹೇಳುವುದಿಲ್ಲ. ಈ ಸಮಾಜದಲ್ಲಿ ಗಂಡು, ಹೆಣ್ಣು ಎಂಬ ಎರಡು ವ್ಯಕ್ತಿಗಳಿದ್ದು, ಅವರೂ ಮನುಷ್ಯರು. ಹಾಗಾಗಿ ಅವರಿಗೆ ಗೌರವ ಕೊಡಬೇಕಾಗುತ್ತದೆ. ತಾಯಿ, ತಂಗಿ, ಅಕ್ಕನಿಗೆ ಕೊಡಬೇಕಾದ ಗೌರವ ಕೊಡಬೇಕು. ತಮ್ಮ ನಡುವಳಿಕೆಯಲ್ಲಿ ವ್ಯತ್ಯಾಸವಾದಾಗ ಅವರನ್ನು ಯಾರೂ ಕ್ಷಮಿಸಬಾರದು. ಅಂತಹ ವ್ಯಕ್ತಿಗಳಿಗೆ ಹೆದರಬಾರದು. ಅವರಿಗೆ ಶಿಕ್ಷೆ ಆಗಬೇಕು. ಅದು ಪ್ರಜ್ವಲ್ ರೇವಣ್ಣ ಇರಲಿ, ಯಾರಾದರೂ ಆಗಲಿ ಅವರಿಗೆ ಕಠಿಣ ಶಿಕ್ಷೆ ಆಗಬೇಕು ಎಂದರು.
ಪೆನ್‍ಡ್ರೈವ್ ಹಾಗೂ ಕಂಪ್ಯೂಟರ್‍ನಲ್ಲಿದ್ದುದು ಸತ್ಯವೋ, ಸುಳ್ಳೋ ಎಂಬುದನ್ನು ತನಿಖೆ ಆಗಬೇಕು. ಹಾಗಾಗಿ ಆರೋಪಿಗಳನ್ನು ಬಂಧಿಸಬೇಕು. ಮೇಲ್ನೋಟಕ್ಕೆ ಸಂಸದ ಪ್ರಜ್ವಲ್ ರೇವಣ್ಣ ಅವರು ತಪ್ಪಿಸಿಕೊಂಡು ಹೋಗಿದ್ದರಿಂದ ಸಹಜವಾಗಿ ತಪ್ಪು ಮಾಡಿರುವುದು ಗೊತ್ತಾಗುತ್ತದೆ. ಎಸ್‍ಐಟಿ ದಾಖಲೆಗಳನ್ನು ಈ ಕುರಿತು ಕಲೆ ಹಾಕುತ್ತಿದೆ ಎಂದು ಅವರು ಹೇಳಿದರು.
ಬಿಜೆಪಿಯವರದು ಈ ವಿಷಯದಲ್ಲಿ ದುರಂತವಾಗಿದೆ. ತಾವು ಸೋಲುತ್ತೇವೆ ಎಂಬುದು ಅವರಿಗೆ ತಿಳಿದಿದೆ. ಮೋದಿ ಅಲೆ ಹೋಗಿದೆ. 400 ಸೀಟುಗಳು ಗೆಲ್ಲುವುದು ಸಹ ಸಾಧ್ಯವಿಲ್ಲ ಎಂಬುದು ಅವರಿಗೆ ಗೊತ್ತಾಗಿದೆ. ಹೀಗಾಗಿ ಈಗ ಈ ಪ್ರಕರಣವು ಇರಿಸುಮುರಿಸು ಆಗಿದೆ. ನುಂಗಲಾಗದ ಬಿಸಿತುಪ್ಪವಾಗಿದೆ. ತಪ್ಪು ಯಾರೇ ಮಾಡಿದರೂ ಶಿಕ್ಷೆ ಆಗಬೇಕು. ಜತೆಯಲ್ಲಿದ್ದು ರಾಜಕಾರಣ ಮಾಡಿ. ಆದಾಗ್ಯೂ, ತಪ್ಪಿತಸ್ಥರನ್ನು ಖಂಡಿಸಿ ಜೈಲಿಗೆ ಹಾಕಿಸುವಂತಹ ಕೆಲಸ ಆಗಬೇಕು ಎಂದು ಅವರು ಪ್ರತಿಪಾದಿಸಿದರು.