ಸಂಸದ ಪ್ರಜ್ವಲ್ ಅಮಾನತಿಗೆ ಶಾಸಕ ಕಂದಕೂರ ಆಗ್ರಹ

ಬೆಂಗಳೂರು, ಏ. ೨೯- ಅಶ್ಲೀಲ ವಿಡಿಯೋ ಪ್ರಕರಣಗಳಲ್ಲಿ ಎಫ್‌ಐಆರ್ ದಾಖಲಾಗಿರುವ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಪಕ್ಷದಿಂದ ಅಮಾನತುಗೊಳಿಸಬೇಕು ಎಂದು ಗುರುಮಠ್‌ಕಲ್‌ನ ಜೆಡಿಎಸ್ ಶಾಸಕ ಶರಣಗೌಡ ಕಂದಕೂರ ಆಗ್ರಹಿಸಿದ್ದಾರೆ.
ಈ ಬಗ್ಗೆ ಅವರು ಜೆಡಿಎಸ್‌ನ ರಾಷ್ಟ್ರೀಯ ಅಧ್ಯಕ್ಷ ಹಾಗೂ ಮಾಜಿ ಪ್ರಧಾನಿ ದೇವೇಗೌಡ ಅವರಿಗೆ ಪತ್ರ ಬರೆದು ಕೆಲ ದಿನಗಳಿಂದ ರಾಜ್ಯಾದ್ಯಂತ ಹರಿದಾಡುತ್ತಿರುವ ಅಶ್ಲೀಲ ವಿಡಿಯೋ ತುಣುಕುಗಳು ಪಕ್ಷಕ್ಕೆ ಮುಜುಗರ ತಂದಿವೆ. ಈ ವಿಡಿಯೋ ದೃಶ್ಯಗಳಲ್ಲಿ ಸಂಸದ ಪ್ರಜ್ವಲ್ ರೇವಣ್ಣ ಕಾಣಿಸಿಕೊಂಡಿದ್ದಾರೆ. ಮೇಲ್ನೋಟಕ್ಕೆ ಅವರು ತಪ್ಪಿತಸ್ಥರು ಎಂಬ ಭಾವನೆ ಉಂಟಾಗಿದೆ. ಹಾಗಾಗಿ ಅವರನ್ನು ಪಕ್ಷದಿಂದ ಅಮಾನತು ಮಾಡಬೇಕು ಎಂದು ಮನವಿ ಮಾಡುವುದಾಗಿಯೂ ಅವರು ಪತ್ರದಲ್ಲಿ ಹೇಳಿದ್ದಾರೆ.
ಜಾತ್ಯತೀತ ನೆಲೆಗಟ್ಟಿನ ಮೇಲೆ ನೀವು ಪಕ್ಷ ಕಟ್ಟಿದ್ದೀರಿ ಪಕ್ಷದ ಚಿಹ್ನೆ ತೆನೆಹೊತ್ತ ಮಹಿಳೆಯದ್ದಾಗಿದ್ದು, ಇದು ಮಹಿಳೆಯರ ಮೇಲಿನ ಗೌರವವನ್ನು ಪ್ರತಿನಿಧಿಸುತ್ತದೆ. ಈ ಎಲ್ಲ ಹಿನ್ನೆಲೆ ಪರಂಪರೆ ಹೊಂದಿರುವ ಪಕ್ಷಕ್ಕೆ ವಿಡಿಯೋ ಪ್ರಕರಣ ಮುಜುಗರ ತಂದಿರುವುದಂತು ಸುಳ್ಳಲ್ಲ. ಹಾಗಾಗಿ ಎರಡನೇ ಹಂತದ ಚುನಾವಣೆ ಸಂದರ್ಭದಲ್ಲಿ ಪಕ್ಷದ ಮೇಲೆ ವ್ಯತಿರಿಕ್ತಿ ಪರಿಣಾಮ ಬೀರದಿರಲು ಕೂಡಲೇ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಪಕ್ಷದಿಂದ ಅಮಾನತು ಮಾಡಲು ಕೋರುತ್ತೇನೆ ಎಂದು ಶರಣಗೌಡ ಕಂದಕೂರು ಪತ್ರದಲ್ಲಿ ಹೇಳಿದ್ದಾರೆ.
ಈ ಪ್ರಕರಣದ ಬಗ್ಗೆ ರಾಜ್ಯ ಸರ್ಕಾರ ಎಸ್‌ಐಟಿ ತನಿಖೆ ನಡೆಸಿದೆ. ತಾವು ಪಕ್ಷದ ಆಂತರಿಕ ಸಮಿತಿಯನ್ನು ರಚನೆ ಮಾಡಿ ಆ ಸಮಿತಿ ವಿಡಿಯೋ ಪ್ರಕರಣದ ಸತ್ಯಾಸತ್ಯತೆಯನ್ನು ನಾಡಿನ ತಾಯಂದಿರಿಗೆ ಗೊತ್ತು ಮಾಡುವಂತಾಗಲಿ. ಅಲ್ಲಿವರೆಗೆ ಪ್ರಜ್ವಲ್ ರೇವಣ್ಣ ಅವರನ್ನು ಅಮಾನತು ಮಾಡಿ. ನಾನು ತುಂಬಾ ಕಿರಿಯ, ಅತ್ಯಂತ ಹಿರಿಯರಾದ ತಮಗೆ ಸಲಹೆ ಕೊಡುವಷ್ಟ ದೊಡ್ಡವನಲ್ಲ ಪರಿಸ್ಥಿತಿ ಹಾಗಿದೆ. ಹೀಗಾಗಿ ನಾನು ಪತ್ರ ಬರೆದು ತನ್ನ ಅಂತರಾಳದ ಅಭಿಪ್ರಾಯವನ್ನು ಮುಕ್ತ ಮನಸ್ಸಿನಿಂದ ವ್ಯಕ್ತಪಡಿಸುವೆ ಎಂದು ಕಂದಕೂರ ಮಾಜಿ ಪ್ರಧಾನಿಗಳಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.