ಸಂಸದ ಜಿಗಜಿಣಗಿ ಉಚಿತ ವಿಮಾನ ಸಂಚಾರ, ಸರಕಾರಿ ಬಂಗಲೆ ವಾಸ, ಟಿಎ, ಡಿಎಗೆ ಮಾತ್ರ ಸೀಮಿತ :ಸಚಿವ ಎಂ. ಬಿ. ಪಾಟೀಲ

ವಿಜಯಪುರ, ಮೇ.1: ಸಂಸದ ರಮೇಶ ಜಿಗಜಿಗಣಿ ದೆಹಲಿಯಲ್ಲಿ ಸರಕಾರಿ ಬಂಗಲೆಯಲ್ಲಿ ವಾಸಿಸುತ್ತ ಕೇವಲ ಟಿಎ, ಡಿಎ ಪಡೆಯಲು ಮಾತ್ರ ಸೀಮಿತರಾಗಿದ್ದು, ಜಿಲ್ಲೆಯಲ್ಲಿ ಎಸ್ಸಿ, ಎಸ್ಟಿ ಸಮುದಾಯಕ್ಕೂ ಯಾವುದೇ ಅಭಿವೃದ್ಧಿ ಕೆಲಸ ಮಾಡಿಲ್ಲ ಎಂದು ಕೈಗಾರಿಕೆ ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಹೇಳಿದ್ದಾರೆ.
ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ನಿವರಗಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ವಿಜಯಪುರ ಸಂಸದರ ಬಗ್ಗೆ ಹೇಳಿ ಹೇಳಿ ಸಾಕಾಗಿದೆ. ಜಿಲ್ಲೆಯಲ್ಲೂ ಅಭಿವೃದ್ಧಿ ಮಾಡಿಲ್ಲ. ಎಸ್.ಸಿ. ಮೀಸಲು ಕ್ಷೇತ್ರದಿಂದ ಆಯ್ಕೆಯಾಗಿದ್ದರೂ ಎಸ್ಸಿ, ಎಸ್ಟಿ ಸಮುದಾಯಕ್ಕೂ ನ್ಯಾಯ ಒದಗಿಸಿಲ್ಲ. ವಿಮಾನದಲ್ಲಿ ಉಚಿತವಾಗಿ ತಿರುಗಾಡುತ್ತ, ಟಿಎ, ಡಿಎ ಪಡೆದು ದೆಹಲಿಯಲ್ಲಿ ಸರಕಾರಿ ಬಂಗಲೆಯಲ್ಲಿ ಹಾಯಾಗಿ ವಾಸಿಸುವುದಕ್ಕೆ ಮಾತ್ರ ಅವರು ಸೀಮಿತರಾಗಿದ್ದಾರೆ. ಇದಷ್ಟೇ ಅವರು ಕೆಲಸ ಎಂದುಕೊಂಡಿದ್ದಾರೆ. ಮತ ಹಾಕು ಎಂದರೂ ಜನತೆ ಯೋಚನೆ ಮಾಡುತ್ತಾರೆ. ಇನ್ನು ನಿಮ್ಮ ಮತವೇ ಬೇಡ ಎಂದು ಹೇಳಿರುವ ರಮೇಶ ಜಿಗಜಿಣಗಿ ಅವರಿಗೆ ಯಾರಾದರೂ ವೋಟು ಹಾಕುತ್ತಾರಾ ಎಂದು ಪ್ರಶ್ನಿಸಿದ ಅವರು, ವಿದ್ಯಾವಂತ, ಸೌಮ್ಯ ಸ್ವಭಾವದ ರಾಜು ಆಲಗೂರ ಅವರಿಗೆ ಎಲ್ಲರೂ ಮತ ಹಾಕಿ ಜಿಲ್ಲೆ ಸವಾರ್ಂಗೀಣ ಅಭಿವೃದ್ಧಿಗೆ ಕೈಜೋಡಿಸೋಣ ಎಂದು ಅವರು ಕರೆ ನೀಡಿದರು.
ಕಾಂಗ್ರೆಸ್ಸಿನ ಸಾವಿರಾರು ಕಾರ್ಯಕರ್ತರು ಸ್ವಾತಂತ್ರ್ಯ ಹೋರಾಟ ಸಂದರ್ಭದಲ್ಲಿ ತ್ಯಾಗ ಮತ್ತು ಬಲಿದಾನ ನೀಡಿದ್ದಾರೆ. ಆ ಸಂದರ್ಭದಲ್ಲಿ ಬಿಜೆಪಿಯವರು ಬ್ರಿಟಿಷರ ಏಜೆಂಟ್ ರಾಗಿದ್ದರು. ಇಂಥ ಬಿಜೆಪಿಯವರು ನಮಗೆ ನೈತಿಕ ಪಾಠ ಹೇಳುವ ಅಗತ್ಯವಿಲ್ಲ. ಕಾಂಗ್ರೆಸ್ ದೇಶಕ್ಕೆ ಸಂವಿಧಾನ ನೀಡಿದೆ. ಅದರ ಫಲವಾಗಿಯೇ ಈಗ ಬಿಜೆಪಿಯವರು ಟೀಕೆ, ಟಿಪ್ಪಣೆ ಮಾಡಲು ಸಾಧ್ಯವಾಗಿದೆ ಎಂದು ಅವರು ಹೇಳಿದರು.
ಎಲೆಕ್ಟ್ರಾಲ್ ಬಾಂಡ್ ಪ್ರಕರಣದ ಸಂಪೂರ್ಣ ತನಿಖೆಯಾದರೆ ನರೇಂದ್ರ ಮೋದಿ ಮತ್ತು ಅಮಿತ್ ಶಾ ಕೂಡ ಒಳಗೆ ಹೋಗಬೇಕಾಗುತ್ತದೆ. ಪ್ರಧಾನಿ ನರೇಂದ್ರ ಮೋದಿ ಸಾವಿರಾರು ಕೋಟಿ ರೂಪಾಯಿ ಖರ್ಚು ಮಾಡಿ ಅಚ್ಥೆ ದಿನ್ ಎಂದು ಪ್ರಚಾರ ಮಾಡಿ ಅಧಿಕಾರಕ್ಕೆ ಬಂದು 10 ವರ್ಷಗಳಲ್ಲಿ ಏನೂ ಅಭಿವೃದ್ಧಿ ಮಾಡಿಲ್ಲ. ನಾವು ಸಾಕ್ಷಿ ಪುರಾವೆ ಇಟ್ಟುಕೊಂಡು ಮಾತನಾಡುತ್ತೇನೆ. ಮೋದಿ ಥರ ಸುಳ್ಳು ಹೇಳುವುದಿಲ್ಲ. ಎಲೆಕ್ಟ್ರಾಲ್ ಬಾಂಡ್ ಒಳ್ಳೆಯದಾದರೂ ಖರೀದಿಸಿದವರ ಹೆಸರನ್ನು ಗೌಪ್ಯವಾಗಿ ಇಡುವ ಕಾನೂನು ಜಾರಿಗೆ ತಂದಿದ್ದರು. ಸುಪ್ರೀಂ ಕೋರ್ಟ್ ಛೀಮಾರಿ ಹಾಕಿದ ಕಾರಣ ಬಾಂಡ್ ಖರೀದಿದಾರರ ಹೆಸರುಗಳು ಬಹಿರಂಗವಾಗಿವೆ ಎಂದು ಅವರು ಹೇಳಿದರು.
ನಾವು ನಿವರಗಿ ಭಾಗಕ್ಕೂ ನೀರು ಕೊಡುತ್ತೇವೆ. ಜಿಗಜಿಣಗಿ, ಗುಂದವಾನ ಸೇರಿ 16 ಕೆರೆಗಳಿಗೆ ಮೂರು ತಿಂಗಳಲ್ಲಿ ನೀರು ಬರಲಿದೆ. ಸುಮಾರು 40 ಹಳ್ಳಿಗಳ ಕುಡಿಯುವ ನೀರಿನ ಸಮಸ್ಯೆ ಬಗೆಹರಿಯಲಿದೆ. ರಾಜು ಆಲಗೂರ ಅವರಿಗೆ ಹಾಕುವ ಮತ, ಎಂಬಿಪಿ, ಸಿದ್ಧರಾಮಯ್ಯ, ಕಟಕದೊಂಡಗೆ ಹಾಕಿದಂತೆ. ಹೀಗಾಗಿ ರಾಜು ಆಲಗೂರ ಅವರನ್ನು ಗೆಲ್ಲಿಸಬೇಕು ಎಂದು ಹೇಳಿದರು.
ಅಭ್ಯರ್ಥಿ ರಾಜು ಆಲಗೂರ ಮಾತನಾಡಿ, ನಾನು ಮೊದಲ ಬಾರಿಗೆ ಶಾಸಕನಾಗಿದ್ದಾಗ ಭೀಮಾ ನದಿಗೆ ನಾಲ್ಕು ಬ್ಯಾರೇಜ್ ನಿರ್ಮಿಸಿದ್ದೇನೆ. ಎರಡನೇ ಬಾರಿ ಶಾಸಕನಾಗಿದ್ದಾಗ ಮತ್ತೆ ಎರಡು ಬ್ಯಾರೇಜ್ ನಿರ್ಮಿಸಿ ಈ ಭಾಗದಲ್ಲಿ ನೀರಾವರಿಗೆ ಕೊಡುಗೆ ನೀಡಿದ್ದೇನೆ. ಕಳೆದ 30 ವರ್ಷಗಳಲ್ಲಿ ಸಂಸದರಾಗಿ ರಮೇಶ ಜಿಗಜಿಣಗಿ ಯಾವುದೇ ಅಭಿವೃದ್ಧಿ ಕೆಲಸ ಮಾಡಲಿಲ್ಲ. ಜಿಗಜಿಣಗಿ ಯಾವ ಅಭಿವೃದ್ಧಿ ಕೆಲಸ ಮಾಡಿದ್ದಾರೆ ಎಂಬುದನ್ನು ಗ್ರಾಮಸ್ಥರು ಹೇಳಬೇಕು? ಇನ್ನು ಮುಂದೆಯೂ ತಮ್ಮೆಲ್ಲರ ಜೊತೆ ನಿರಂತರ ಸಂಪರ್ಕದಲ್ಲಿದ್ದು, ರಾಷ್ಡ್ರ ಮಟ್ಟದಲ್ಲಿ ಸೇವೆ ಸಲ್ಲಿಸಲು ಮತ ಹಾಕಿ ಗೆಲ್ಲಿಸಿ. ಜಿಲ್ಲೆಯ ಜೀತದಾಳಾಗಿ ದುಡಿಯುವೆ. ನಿಮ್ಮೆಲ್ಲರ ಧ್ವನಿಯಾಗಿ ಸಂಸತ್ತಿನಲ್ಲಿ ಕೆಲಸ ಮಾಡುತ್ತೇನೆ. ಈ ಬಾರಿ ನನಗೊಂದು ಅವಕಾಶ ನೀಡಿ ಎಂದು ಮತಯಾಚಿಸಿದರು.
ನಾಗಠಾಣ ಶಾಸಕ ವಿಠ್ಠಲ ಕಟಕದೊಂಡ ಮಾತನಾಡಿ, ಮೋದಿ ಅಭಿವೃದ್ಧಿಯಲ್ಲಿ ಫೇಲ್ ಆಗಿದ್ದಾರೆ. ರೈತರು, ಯುವಕರು, ಮಹಿಳೆಯರ ಅಭಿವೃದ್ಧಿಗೆ ಕಾಂಗ್ರೆಸ್ ಯೋಜನೆ ರೂಪಿಸಿದೆ. ರಾಜು ಆಲಗೂರ ಗೆಲ್ಲಿಸಿ ನಮ್ಮೆಲ್ಲರ ಕೈ ಬಲಪಡಿಸಿ. ನಮಗೆಲ್ಲರಿಗೂ ನೈತಿಕ ಬೆಂಬಲ ನೀಡಿ ಎಂದು ಮನವಿ ಮಾಡಿದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಂ. ಎಸ್. ಲೋಣಿ ಮಾತನಾಡಿ, ರಾಜು ಆಲಗೂರ ಒಂದು ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದಾರೆ. ಬಿಜೆಪಿ ಅಭ್ಯರ್ಥಿ ನಿಷ್ಕ್ರಿಯವಾಗಿದ್ದಾರೆ.. ಸಂಸದ ರಮೇಶ ಜಿಗಜಿಣಗಿ ಅವರಿಗೆ ವಿಶ್ರಾಂತಿಗೆ ಕಳುಹಿಸಿ ರಾಜು ಆಲಗೂರ ಅವರಿಗೆ ಮತ ಹಾಕಿ ಗೆಲ್ಲಿಸಬೇಕು ಎಂದು ಹೇಳಿದರು.
ಕೌಶಲ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಕಾಂತಾ ನಾಯಕ, ಮುಖಂಡರಾದ ಎಂ. ಆರ್. ಪಾಟೀಲ, ಡಾ. ಬಾಬುರಾಜೇಂದ್ರ ನಾಯಕ, ಮಹಾದೇವ ಹಿರಕುರುಬರ ಮಾತನಾಡಿದರು.
ಈ ಕಾರ್ಯಕ್ರಮದಲ್ಲಿ ಚಡಚಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆರ್. ಡಿ. ಹಕ್ಕೆ, ಮುಖಂಡರಾದ ಡಿ. ಎಲ್. ಚವ್ಹಾಣ, ಸುರೇಶಗೌಡ ಪಾಟೀಲ, ಸಂತೋಷಗೌಡ ಪಾಟೀಲ, ಮಹಾದೇವ ಸಾಹುಕಾರ ಭೈರಗೊಂಡ, ಭೀಮನಗೌಡ ಬಿರಾದಾರ, ಸಾಹೇಬಗೌಡ ಬಿರಾದಾರ, ಸುರೇಶ ಘೋಣಸಗಿ, ದಾನಮ್ಮ ಪಾಟೀಲ, ಬಾಬುಗೌಡ ಪಾಟೀಲ, ಭಾರತಿ, ಮುರ್ತುಜ, ಬಾಬಾಸಹೇಬ, ಶ್ರೀಶೈಲಗೌಡ, ರಾಜು ಜಾಧವ, ಪ್ರಕಾಶಗೌಡ ಪಾಟೀಲ ಮುಂತಾದವರು ಉಪಸ್ಥಿತರಿದ್ದರು.