ಸಂಸದ ಖೂಬಾ ಪಲಾಯನವಾದಿ : ಖಂಡ್ರೆ ವಾಗ್ದಾಳಿ

ಬೀದರ:ನ.6: ಭಾಲ್ಕಿ ತಾಲ್ಲೂಕಿನಲ್ಲಿ ವಸತಿ ಯೋಜನೆಗಳ ಅನುಷ್ಠಾನ ಕುರಿತಂತೆ ಬಹಿರಂಗ ಚರ್ಚೆಗೆ ಆಗಮಿಸದೆ ಬಿಜೆಪಿ ಸಂಸದ ಭಗವಂತ ಖೂಬಾ ಮತ್ತು ಬಿಜೆಪಿಯ ಡಿ.ಕೆ.ಸಿದ್ರಾಮ (ಡಿಕೆಸಿ) ಪಲಾಯನವಾದ ಅನುಸರಿಸಿದ್ದಾರೆ ಎಂದು ಶಾಸಕ ಮತ್ತು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಇಲ್ಲಿ ಗುರುವಾರ ವಾಗ್ದಾಳಿ ನಡೆಸಿದರು.
ಬೀದರ್ ಜಿಲ್ಲೆಯ ವಸತಿ ಫಲಾನುಭವಿಗಳಿಗೆ ಅನ್ಯಾಯದ ವಿರುದ್ಧ ಹಮ್ಮಿಕೊಳ್ಳಲಾದ ಜಿಲ್ಲಾಧಿಕಾರಿ ಕಚೇರಿ ಚಲೋ ರ್ಯಾಲಿಯನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು. ತಮ್ಮ ಮಾತಿನುದ್ದಕ್ಕೂ ಸಂಸದ ಖೂಬಾ ಮತ್ತುಡಿ.ಕೆ.ಸಿದ್ರಾಮ ( ಡಿಕೆಸಿ )ವಿರುದ್ಧ ತೀಕ್ಷ್ಣ ಟೀಕಾ ಪ್ರಹಾರ ಮಾಡಿದ ಅವರು ಭಾಲ್ಕಿ ತಾಲ್ಲೂಕು ವಸತಿ ಯೋಜನೆಗಳ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಬಹಿರಂಗ ಚರ್ಚೆಗೆ ಆಗಮಿಸುವಂತೆ ಸಂಸದ ಖೂಬಾ ಮತ್ತು ಡಿಕೆಸಿದ್ರಾಮ ಇಬ್ಬರಿಗೂ ನಾನು ಪಂಥಾವ್ಹಾನ ನೀಡಿದ್ದೆ. ಆದರೆ, ಇಬ್ಬರೂ ಬಂದಿಲ್ಲ. ಬಹಿರಂಗ ಚರ್ಚೆ ನಡೆಸಲು ಬೀದರ್ ಕ್ಷೇತ್ರದ ಸಂಸದರಿಗೆ ಎದೆಗಾರಿಕೆ ಇಲ್ಲ.ಬೀದರ್ ಗಣೇಶ ಮೈದಾನದಲ್ಲಿ ಬಹಿರಂಗ ಚರ್ಚೆ ನಡೆಸಲು ಅನುಮತಿ ನಿರಾಕರಿಸಲಾಯಿತು. ಆದರೆ, ಗಣೇಶ ಮೈದಾನದಲ್ಲಿ ಸಮಾವೇಶ ಹಮ್ಮಿಕೊಳ್ಳುವುದಕ್ಕೆ ಸಂಸದ ಖೂಬಾರಿಗೆ ಅನುಮತಿ ನೀಡಲಾಯಿತು. ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದೆ. ಗಣೇಶ ಮೈದಾನದಲ್ಲಿ ಬಹಿರಂಗ ಚರ್ಚೆ ನಡೆಸಲು ಬಿಜೆಪಿ ಭಗವಂತ ಖೂಬಾ ಏಕೆ ಅನುಮತಿ ಪಡೆಯಲಿಲ್ಲ. ಎಂದರು.
ಸಂಸದ ಖೂಬಾ ಭಾಲ್ಕಿ ತಾಲ್ಲೂಕಿನಲ್ಲಿ ವಸತಿ ಯೋಜನೆಗಳ ಅನುಷ್ಠಾನ ಕುರಿತಂತೆ ಸುಖಾಸುಮ್ಮನೆ ಕ್ಯಾತೆ ತೆಗೆದು ಸುಳ್ಳು ದಾಖಲಾತಿಗಳನ್ನು ಸೃಷ್ಠಿಸಿ ವಿಚಾರಣೆ ನಡೆಸಿದರು. ವಸತಿ ಯೋಜನೆಗಳ 6 ಸಾವಿರಕ್ಕೂ ಹೆಚ್ಚು ಬಡ ಫಲಾನುಭವಿಗಳಿಗೆ ಸರ್ಕಾರದಿಂದ ಹಣ ಬಿಡುಗಡೆಗೆ ಅಡ್ಡಗಾಲು ಹಾಕಿದ್ದಾರೆ. ಜಿಲ್ಲೆಯಲ್ಲಿ ಇನ್ನುಳಿದ 9 ಸಾವಿರ ಫಲಾನುಭವಿಗಳಿಗೆ ಬಿಡುಗಡೆ ಮಾಡಿದ ಒಟ್ಟು 91 ಕೋಟಿ ರೂ.ಗಳನ್ನು ಹಿಂದಕ್ಕೆ ಪಡೆಯುವಂತೆ ಸಂಸದ ಖೂಬಾ ಮತ್ತು ಬಿಜೆಪಿಯ ಡಿಕೆಸಿದ್ರಾಮ ಸರ್ಕಾರಕ್ಕೆ ದುಂಬಾಲು ಬಿದ್ದಿದ್ದಾರೆ ಎಂದು ದೂರಿದರು.
ವಸತಿ ಯೋಜನೆಗಳ ಬಡ ಫಲಾಭವಿಗಳಿಗೆ ಸರ್ಕಾರ ಹಣ ಬಿಡುಗಡೆ ಮಾಡುವವರೆಗು ಕೂಡ ನಮ್ಮ ಹೋರಾಟ ನಿಲ್ಲದು ಎಂದು ಅವರು ಘೋಷಿಸಿದರು. ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಸವರಾಜ್ ಜಾಬಶೆಟ್ಟಿ, ಶಾಸಕರಾದ ರಾಜಶೇಖರ್ ಪಾಟೀಲ್, ರಹೀಮ್ ಖಾನ್, ಎಮ್‍ಎಲ್‍ಸಿ ಅರವಿಂದ ಕುಮಾರ್ ಅರಳಿ ಮಾತನಾಡಿ ಭಾಲ್ಕಿ ತಾಲ್ಲೂಕಿನಲ್ಲಿ ವಸತಿ ಯೋಜನೆಗಳ ಅನುಷ್ಠಾನ ಕುರಿತಂತೆ ಸಂಸದ ಖೂಬಾ ವಿರುದ್ಧ ವಾಗ್ದಾಳಿ ನಡೆಸಿದರು. ಮಾಜಿ ಸಂಸದ ನರಸಿಂಗ್ ರಾವ್ ಸೂರ್ಯವಂಶಿ, ವಿಧಾನ ಪರಿಷತ್ ಸದಸ್ಯರಾದ ವಿಜಯ್ ಸಿಂಗ್, ಡಾ.ಚಂದ್ರಶೇಖರ್ ಪಾಟೀಲ್, ಮಾಜಿ ಎಮ್‍ಎಲ್‍ಸಿ ಕೆ.ಪುಂಡಲೀಕ ರಾವ್, ಕಾಂಗ್ರೆಸ್ ಮುಖಂಡರಾದ ಇರ್ಷಾದ್ ಅಲಿ ಪಹಲ್ವಾನ್, ಶಂಕರದೊಡ್ಡಿ, ದತ್ತಾತ್ರಿ ಮೂಲಗೆ, ಶಂಕರ ದೊಡ್ಡಿ, ಅಮೃತರಾವ್ ಚಿಮಕೋಡ್, ರೋಹಿದಾಸ ಘೋಡೆ, ಶಿವರಾಜ್ ಹಾಸನಕರ್, ಎಮ್.ಎ.ಸಮಿ ಮತ್ತು ಕಲಬುರಗಿ ಜಿಲ್ಲೆಯ ದೀಪಕ್ ನಾಗ್ ಪುಣ್ಯಶೆಟ್ಟಿ ಮತ್ತು ಶರಣು ಮೋದಿ ಸೇರಿದಂತೆ ಇನ್ನೂ ಅನೇಕರು ಉಪಸ್ಥಿತರಿದ್ದರು. ರ್ಯಾಲಿಯಲ್ಲಿ ಹಲವರು ಜನ ಪಾಲ್ಗೊಂಡಿದ್ದರು.