ಸಂಸದ ಅನಂತಕುಮಾರ್ ಹೆಗಡೆ ವಿರುದ್ಧ ದಾಖಲು

ಸಂಜೆವಾಣಿ ನ್ಯೂಸ್
ಮೈಸೂರು: ಜ.16:- ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಪ್ರಚೋದನಕಾರಿ ಹಾಗೂ ನಿಂದನಾತ್ಮಕ ಹೇಳಿಕೆ ನೀಡಿರುವ ಬಿಜೆಪಿ ಸಂಸದ ಅನಂತಕುಮಾರ್ ಹೆಗಡೆ ವಿರುದ್ಧ ಕಾನೂನು ಕ್ರಮಕೈಗೊಳ್ಳುವಂತೆ ಆಗ್ರಹಿಸಿ ಜಿಲ್ಲಾ ಮತ್ತು ನಗರ ಕಾಂಗ್ರೆಸ್ ಸಮಿತಿ ನಗರ ಪೆÇಲೀಸ್ ಆಯುಕ್ತರಿಗೆ ದೂರು ದಾಖಲಿಸಿತು.
ಜ.13 ರಂದು ಉತ್ತರಕನ್ನಡ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಕುಮಟಾದಲ್ಲಿ ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುವಾಗ,
ರಾಜ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಏಕವಚನದಲ್ಲಿ ನಿಂದಿಸಿದ್ದಾರೆ. ಹಿಂದೂ ಸಮಾಜವನ್ನು ಜಾತಿ, ಧರ್ಮ, ಭಾಷೆಯ ಹೆಸರಿನಲ್ಲಿ ಮುರುಕುರಾಮಯ್ಯ ಅಂಥವರು ಒಡೆಯುತ್ತಿದ್ದಾರೆ ಎಂದು ಆಧಾರರಹಿತ ಆರೋಪ ಮಾಡಿರುವುದಲ್ಲದೆ, ನಮ್ಮ ವಿರೋಧಿ ಸಿದ್ದರಾಮಯ್ಯ ಹೊರತು ಕಾಂಗ್ರೆಸ್ ಅಲ್ಲ. ಅಲ್ಪಸಂಖ್ಯಾತರ ಮತಗಳಿಗಾಗಿ ಗತಿಗೆಟ್ಟ ಮಾನಸಿಕತೆಗೆ ನಮ್ಮ ವಿರೋಧವಿದೆ. ಇದಲ್ಲದೇ ಭಟ್ಕಳದ ಚಿನ್ನದಪಳ್ಳಿ ಮಸೀದಿ ಧ್ವಂಸ ಮಾಡುವುದಾಗಿ ಹೇಳಿದ್ದಾರೆ.
ಅನಂತಕುಮಾರ್ ಹೆಗಡೆಯವರು “ಸಿದ್ದರಾಮಯ್ಯ ನೀ ಬರ್ಲಿ ಬಿಡ್ಲಿ ರಾಮಜನ್ಮಭೂಮಿ ನಿಲ್ಲಲ್ಲ ಮಗನೇ” ಎಂದು ನಿಂದಿಸಿದ್ದಾರೆ. ಇವರು ನಿರಂತರವಾಗಿ ಸಿದ್ದರಾಮಯ್ಯನವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿರುತ್ತಾರೆ. ಈಗ ಲೋಕಸಭಾ ಚುನಾವಣೆ ಸಮೀಪಿಸುತ್ತಿರುವುದರಿಂದ ರಾಜ್ಯದಲ್ಲಿ ಕೋಮು ಸಂಘರ್ಷಕ್ಕೆ ಪ್ರಚೋದಿಸುತ್ತಿದ್ದಾರೆ.
ರಾಜ್ಯದಲ್ಲಿ ಸಮುದಾಯಗಳ ನಡುವೆ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ಈ ಹಿಂದೆ ಬಿಜೆಪಿ ಬಂದಿರುವುದೇ ದೇಶದಲ್ಲಿ ಸಂವಿಧಾನ ಬದಲಾವಣೆಯನ್ನು ಮಾಡುವುದಕ್ಕಾಗಿ ಎಂದು ಹೇಳಿದ್ದರು. ಆದ್ದರಿಂದ ಕೂಡಲೇ ಇವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಮತ್ತು ಇವರನ್ನು ಚುನಾವಣೆ ಮುಗಿಯುವವರೆಗೆ ಬಂಧಿಸಬೇಕು ಎಂದು ದೂರು ನೀಡಿದರು.
ಕೆಪಿಸಿಸಿ ಮಾದ್ಯಮ ವಕ್ತಾರ ಎಂ.ಲಕ್ಷ್ಮಣ್, ಮೈಸೂರು ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್, ನಗರಾಧ್ಯಕ್ಷ ಆರ್.ಮೂರ್ತಿ, ಮಾಜಿ ಶಾಸಕ ಎಂ.ಕೆ.ಸೋಮಶೇಖರ್, ಪ್ರಧಾನ ಕಾರ್ಯದರ್ಶಿ ಎಂ.ಶಿವಣ್ಣ, ಮಾದ್ಯಮ ವಕ್ತಾರ ಮಹೇಶ್, ಪ್ರಚಾರ ಸಮಿತಿಯ ನಾಗೇಶ್, ನಜರಬಾದ್ ನಟರಾಜ್, ಡೇರಿ ವೆಂಕಟೇಶ್, ಉತ್ತನಹಳ್ಳಿ ಮಹದೇವು ಇನ್ನಿತರರು ಉಪಸ್ಥಿತರಿದ್ದರು.