ಸಂಸದೀಯ ವ್ಯವಸ್ಥೆ ಸುಧಾರಣೆಗೆ ಕ್ರಿಯಾಯೋಜನೆ

ಬೆಂಗಳೂರು, ಸೆ. ೨೫- ಶಾಸಕಾಂಗದಲ್ಲಿ ಶಿಸ್ತು ಮತ್ತು ಸಭ್ಯತೆಯ ಗುಣಮಟ್ಟ ಕಡಿಮೆಯಾಗುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಲೋಕಸಭಾಧ್ಯಕ್ಷ ಓಂಬಿರ್ಲಾ ಅವರು, ಸಂಸದೀಯ ಪ್ರಜಾಪ್ರಭುತ್ವದ ವಿಶಿಷ್ಟತೆ ಮತ್ತು ವಿಶ್ವಾಸರ್ಹತೆಯನ್ನು ಸುಧಾರಿಸಲು ಸಮಗ್ರ ಕ್ರಿಯಾಯೋಜನೆಯನ್ನು ರೂಪಿಸಲಾಗುವುದು ಎಂದರು.
ವಿಧಾನಸೌಧದಲ್ಲಿಂದು ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಲೋಕಸಭಾಧ್ಯಕ್ಷ ಓಂಬಿರ್ಲಾ ಅವರು, ಅಕ್ಟೋಬರ್‌ನಲ್ಲಿ ನಡೆಯುವ ಎಲ್ಲ ರಾಜ್ಯಗಳ ವಿಧಾನಮಂಡಲದ ವಿಧಾನಸಭೆಯ ಅಧ್ಯಕ್ಷರ ಸಮ್ಮೇಳನದಲ್ಲಿ ಸದನದ ಕಲಾಪಗಳನ್ನು ಶಿಸ್ತು ಮತ್ತು ಘನತೆಯಿಂದ ಜನಸಾಮಾನ್ಯರ ಭಾವನೆಗಳಿಗೆ ಅನುಗುಣವಾಗಿ ನಡೆಸಿ ಪ್ರಜಾಪ್ರಭುತ್ವದ ಸಂಸ್ಥೆಗಳನ್ನು ಹೆಚ್ಚು ಕ್ರಿಯಾಶೀಲವಾಗಿಸುವುದು ಸೇರಿದಂತೆ ಈಗಿನ ಕಲಾಪದ ಗುಣಮಟ್ಟವನ್ನು ಸುಧಾರಿಸಲು ಸಮಗ್ರ ಕ್ರಿಯಾ ಯೋಜನೆಯನ್ನು ರೂಪಿಸಲಾಗುವುದು ಎಂದರು.
ಈ ಪೀಠಾಸೀನಾಧಿಕಾರಿಗಳ ಸಮ್ಮೇಳನಕ್ಕೆ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳನ್ನು ಆಹ್ವಾನಿಸಲಾಗುವುದು ಎಂದು ಅವರು ಹೇಳಿದರು.
ದೇಶ ಸ್ವಾತಂತ್ರ್ಯದ ೭೫ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿರುವಾಗ ನಮ್ಮ ಶಾಸಕಾಂಗದಲ್ಲಿ ಶಿಸ್ತು ಮತ್ತು ಗುಣಮಟ್ಟ ಕಡಿಮೆಯಾಗುತ್ತಿರುವ ಬಗ್ಗೆಯೂ ತಾವು ಚಿಂತಿತರಾಗಿದ್ದೇವೆ ಎಂದು ಅವರು ಹೇಳಿದರು.
ಜನಪ್ರತಿನಿಧಿಗಳು ಜನರಿಂದ ಚುನಾಯಿತರಾಗಿರುತ್ತಾರೆ. ದೇಶದ ಎಲ್ಲ ಪ್ರಜಾಪ್ರಭುತ್ವ ಸಂಸ್ಥೆಗಳ ಸುಗಮ ಮತ್ತು ಸುವ್ಯವಸ್ಥಿತ ಕಾರ್ಯನಿರ್ವಹಣೆ ಮತ್ತು ಅಪೇಕ್ಷೆ, ಅದರಲ್ಲಿ ಸಮಗ್ರ ಚರ್ಚೆ ಹಾಗೂ ಸಾರ್ವಜನಿಕರಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಚಿಂಚನೆ ಇರಬೇಕು. ಆಗ ಮಾತ್ರ ಸಾರ್ವಜನಿಕ ಆಸೆ, ಆಶೋತ್ತರಗಳನ್ನು ಈಡೇರಿಸಲು ಸಾಧ್ಯ ಎಂದರು.
ದೇಶವು ಸ್ವಾತಂತ್ರ್ಯ ಅಮೃತ ಮಹೋತ್ಸವನ್ನು ಆಚರಿಸುತ್ತಿರುವ ಹಿನ್ನೆಲೆಯಲ್ಲಿ ಪ್ರಜಾಪ್ರಭುತ್ವದ ಸಂಸ್ಥೆಗಳನ್ನು ಹೆಚ್ಚು ಬಲವರ್ಧನೆಗೊಳ್ಳಲು ಹಾಗೂ ಸಶಕ್ತಗೊಳಿಸಲು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಪ್ರಜಾಪ್ರಭುತ್ವದಲ್ಲಿ ದೇಶದ ಮಹಿಳೆಯರು ಮತ್ತು ಯುವಜನರ ಸಕ್ರಿಯ ಭಾಗವಹಿಸುವಿಕೆಯನ್ನು ಖಚಿತಪಡಿಸಿಕೊಳ್ಳುವ ನಿಟ್ಟಿನಲ್ಲಿ ಪ್ರಯತ್ನ ನಡೆಸಿದ್ದೇವೆ ಎಂದರು.
ಶತಮಾನೋತ್ಸವ
ಈ ವರ್ಷ ಸಾರ್ವಜನಿಕ ಲೆಕ್ಕ ಪತ್ರ ಸಮಿತಿಗೆ ನೂರು ವರ್ಷ ತುಂಬಲಿದೆ. ಸಾರ್ವಜನಿಕ ಲೆಕ್ಕಪತ್ರ ಸಮಿತಿಯ ಶತಮಾನೋತ್ಸವ ಆಚರಣೆಯನ್ನು ಡಿಸೆಂಬರ್ ೪ ಮತ್ತು ೫ ರಂದು ಆಯೋಜಿಸಲಾಗುವುದು. ಈ ಆಚರಣೆಯಲ್ಲಿ ದೇಶದ ಸಾರ್ವಜನಿಕ ಪ್ರತಿನಿಧಿಗಳನ್ನು ಹಾಗೂ ಇತರ ಪ್ರಜಾಪ್ರಭುತ್ವ ರಾಷ್ಟ್ರಗಳ ಪ್ರತಿನಿಧಿಗಳನ್ನು ಆಹ್ವಾನಿಸುವುದಾಗಿ ಅವರು ಹೇಳಿದರು.
ಸದನದಲ್ಲಿ ಗುಣಟ್ಟದ ಕಲಾಪಕ್ಕೆ ಒತ್ತು ನೀಡಲು ಸಂಸತ್‌ನ ಗ್ರಂಥಾಲಯವನ್ನು ಡಿಜಿಟಲೀಕರಣಗೊಳಿಸಲಾಗುತ್ತಿದೆ. ಸಂಸತ್‌ನ ಗ್ರಂಥಾಲಯವು ನೂರು ವರ್ಷಗಳನ್ನು ಪೂರೈಸಿದೆ ಎಂದರು.
ಸದನದಲ್ಲಿ ಗುಣಮಟ್ಟದ ಚರ್ಚೆಯಾಗಿ ಸುಗಮ ಕಲಾಪಕ್ಕೆ ಅನುವು ಮಾಡಿಕೊಡುವ ಜವಾಬ್ದಾರಿ ಆಡಳಿತ ಮತ್ತು ವಿರೋಧ ಪಕ್ಷ ಸೇರಿದಂತೆ ಎಲ್ಲ ರಾಜಕೀಯ ಪಕ್ಷಗಳಿಗೂ ಸೇರಿದ್ದು ಎಂದರು.
ಪ್ರಜಾಪ್ರಭುತ್ವದ ಸೊಗಡೇ ಪರ ವಿರೋಧ ಅಭಿಪ್ರಾಯ, ಚರ್ಚೆ. ಈ ಪರ ವಿರೋಧ ಅಭಿಪ್ರಾಯದ ಸೊಗಡು ಗದ್ದಲದಲ್ಲಿ ಅಂತ್ಯವಾಗಬಾರದು. ಆರೋಗ್ಯಕರ ಚರ್ಚೆಗಳು ನಡೆಯಬೇಕು ಎಂದು ಅವರು ಹೇಳಿದರು.
ಪ್ರತಿಯೊಬ್ಬ ಸದಸ್ಯರು ಸಭಾಧ್ಯಕ್ಷರ ಪೀಠದ ಘನತೆ, ಗೌರವವನ್ನು ಗಮನದಲ್ಲಿಟ್ಟುಕೊಂಡು ಮಾತನಾಡಬೇಕು. ಆಧಾರರಹಿತ ಆರೋಪಗಳನ್ನು ಮಾಡುವುದು ಸರಿಯಲ್ಲ ಎಂದರು.
ಸಂಸದೀಯ ಪ್ರಜಾಪ್ರಭುತ್ವ ಸಂಸ್ಥೆಗಳ ಚುನಾಯಿತಿ ಪ್ರತಿನಿಧಿಗಳ ಕಾರ್ಯಕ್ಷಮತೆಯನ್ನು ಹೆಚ್ಚಿಸಲು ಅವರ ಸಾಮರ್ಥ್ಯ ವೃದ್ಧಿ ಮಾಡುವ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗುತ್ತಿದೆ. ಪಂಚಾಯ್ತಿಯಿಂದ ಹಿಡಿದು ಸಂಸತ್‌ನವರೆಗೂ ಎಲ್ಲ ಸಾರ್ವಜನಿಕ ಪ್ರತಿನಿಧಿಗಳ ಸಾಮರ್ಥ್ಯವನ್ನು ಅಭಿವೃದ್ಧಿಪಡಿಸಲು ಕಾರ್ಯಕ್ರಮಗಳನ್ನು ಹಾಕಿಕೊಳ್ಳಲಾಗುತ್ತಿದೆ. ಜನಪ್ರತಿನಿಧಿಗಳಿಗೆ ತರಬೇತಿ ನೀಡಿ, ಭವಿಷ್ಯದಲ್ಲಿ ಪ್ರಜಾಪ್ರಭುತ್ವವನ್ನು ಬಲಪಡಿಸುವ ಪ್ರಯತ್ನವನ್ನು ನಡೆಸುವುದಾಗಿ ಅವರು ಹೇಳಿದರು.
ಅಕ್ಟೋಬರ್‌ನಲ್ಲಿ ಸಿಮ್ಲಾದಲ್ಲಿ ಪೀಠಾಸೀನಾಧಿಕಾರಿಗಳ ಮೂರು ದಿನಗಳ ಸಮ್ಮೇಳನ ನಡೆಯುತ್ತಿದ್ದು, ಈ ಸಮ್ಮೇಳನದಲ್ಲೇ ಪಕ್ಷಾಂತರ ನಿಷೇಧ ಕಾಯ್ದೆಯ ಸುಧಾರಣೆ ಬಗ್ಗೆ ರಚಿಸಲಾಗಿರುವ ಸಮಿತಿಯ ವರದಿಯ ಬಗ್ಗೆಯೂ ಚರ್ಚೆ ನಡೆಸಿ ಈ ವರದಿಯನ್ನು ಜಾರಿ ಮಾಡುವಂತೆ ಸರ್ಕಾರವನ್ನು ಆಗ್ರಹಿಸಲಾಗುವುದು ಎಂದರು.
ಪ್ರಸ್ತುತ ಪಕ್ಷಾಂತರ ಕಾಯ್ದೆಯಲ್ಲಿನ ಕೆಲ ನ್ಯೂನ್ಯತೆಗಳನ್ನು ಸರಿಪಡಿಸುವ ನಿಟ್ಟಿನಲ್ಲಿ ಸಿ.ಪಿ. ಜೋಷಿ ನೇತೃತ್ವದ ಸಮಿತಿ ತಮಗೆ ವರದಿ ನೀಡಿದೆ. ಆ ಬಗ್ಗೆ ಪೀಠಾಸೀನಾಧಿಕಾರಿಗಳ ಸಮ್ಮೇಳನದಲ್ಲಿ ಚರ್ಚೆ ಮಾಡುತ್ತೇವೆ ಎಂದರು.
ವಿಧಾನಸಭೆಗಳಲ್ಲಿ ಲೋಕಸಭಾಧ್ಯಕ್ಷರುಗಳು ಭಾಷಣ ಮಾಡುವುದು ಹೊಸದೇನಲ್ಲ. ಈ ರೀತಿ ವಿವಿಧ ರಾಜ್ಯಗಳಲ್ಲಿ ಲೋಕಸಭಾಧ್ಯಕ್ಷರುಗಳು ಭಾಷಣ ಮಾಡಿದ ಉದಾಹರಣೆ ಇದೆ ಎಂದು ಅವರು ಪರೋಕ್ಷವಾಗಿ ನಿನ್ನೆ ಕಾಂಗ್ರೆಸ್ ಪಕ್ಷ ಲೋಕಸಭಾಧ್ಯಕ್ಷರು ವಿಧಾನಸಭೆಗಳಲ್ಲಿ ಭಾಷಣ ಮಾಡುವಂತಿಲ್ಲ ಎಂಬ ಆರೋಪಕ್ಕೆ ಪ್ರತಿಕ್ರಿಯೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ರಾಜ್ಯ ವಿಧಾನಸಭಾಧ್ಯಕ್ಷ ವಿಶ್ವೇಶ್ವರಹೆಗಡೆ ಕಾಗೇರಿ, ಲೋಕಸಭೆಯ ಸೆಕ್ರೇಟರಿ ಜನರಲ್ ಉತ್ಪಲ್ ಸಿಂಗ್, ರಾಜ್ಯ ವಿಧಾನಸಭೆಯ ಕಾರ್ಯದರ್ಶಿ ವಿಶಾಲಾಕ್ಷಿ ಉಪಸ್ಥಿತರಿದ್ದರು.

ಓಂ ಬಿರ್ಲಾ ಬಾಷಣ ಕಾಗೇರಿ ಸಮರ್ಥನೆ

ಲೋಕಸಭಾಧ್ಯಕ್ಷರು ವಿಧಾನಮಂಡಲ ಉದ್ದೇಶಿಸಿ ಮಾತನಾಡುವುದು ಹೊಸ ಪರಂಪರೆಯೂ ಅಲ್ಲ, ಸಂವಿಧಾನದ ಆಶಯಕ್ಕೆ ವಿರೋಧವೂ ಅಲ್ಲ ಎಂದು ರಾಜ್ಯ ವಿಧಾನಸಭೆಯ ಅಧ್ಯಕ್ಷ ವಿಶ್ವೇಶ್ವರಹೆಗಡೆ ಕಾಗೇರಿ ಸ್ಪಷ್ಟಪಡಿಸಿದರು.
ವಿಧಾನಸೌಧದಲ್ಲಿಂದು ಲೋಕಸಭಾಧ್ಯಕ್ಷರ ಪತ್ರಿಕಾಗೋಷ್ಠಿ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಆರೋಪಗಳ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಲೋಕಸಭಾಧ್ಯಕ್ಷರುಗಳು ಈ ಹಿಂದೆ ವಿವಿಧ ರಾಜ್ಯಗಳ ರಾಜ್ಯಸಭೆಗಳಲ್ಲಿ ಭಾಷಣ ಮಾಡಿದ ಹಲವು ಉದಾಹರಣೆಗಳಿವೆ. ಲೋಕಸಭಾಧ್ಯಕ್ಷರು ಈ ರೀತಿ ಭಾಷಣ ಮಾಡುವುದು ಹೊಸ ಪರಂಪರೆ ಅಲ್ಲ. ಸಂವಿಧಾನ ಆಶಯಕ್ಕೂ ವಿರುದ್ಧವಲ್ಲ ಎಂದರು.
ಸಂವಿಧಾನದ ಆಶಯಗಳಿಗೆ ಅನುಗುಣವಾಗಿಯೇ ಸಂವಿಧಾನಬದ್ಧ ಸ್ಥಾನಗಳಲ್ಲಿ ಜವಾಬ್ದಾರಿ ಇರುವವರು ಎಲ್ಲವನ್ನು ನೋಡಿಯೇ ತೀರ್ಮಾನ ಮಾಡಿರುತ್ತಾರೆ. ಲೋಕಸಭಾಧ್ಯಕ್ಷರು ರಾಜ್ಯ ವಿಧಾನಸಭೆಗಳಲ್ಲಿ ಭಾಷಣ ಮಾಡುವುದು ಸಂವಿಧಾನ ವಿರೋಧಿ, ಹೊಸ ಪರಂಪರೆ ಎಂದು ಹೇಳಿರುವವರಿಗೆ ಮಾಹಿತಿ ಕೊರತೆ ಇದೆ. ಅವರಿಗೆ ಮಾಹಿತಿಯನ್ನು ತಿಳಿಸಲಾಗುವುದು ಎಂದು ಕಾಗೇರಿ ಹೇಳಿದರು.
ಈ ಹಿಂದೆ ಎಸ್.ಎಂ. ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದಾಗ ೨೦೦೨ ಜೂನ್ ೨೦ ರಂದು ರಾಜ್ಯ ವಿಧಾನಸಭೆಯಲ್ಲಿ ಆಗಿನ ಲೋಕಸಭಾ ಸ್ಪೀಕರ್ ಮನೋಹರ್ ಜೋಷಿ ಅವರು ಮಾತನಾಡಿದ್ದಾರೆ. ಇದೇನು ಹೊಸದಲ್ಲ. ಕಾಂಗ್ರೆಸ್ ನಾಯಕರಿಗೆ ಮಾಹಿತಿ ಕೊರತೆ ಇದೆ ಎಂದು ಅವರು ಹೇಳಿದರು.
ಕರ್ನಾಟಕ ವಿಧಾನಸಭೆ ಮಾತ್ರವಲ್ಲ ಹಲವು ರಾಜ್ಯಗಳ ವಿಧಾನಸಭೆಗಳಲ್ಲಿ ಈಗಿನ, ಹಿಂದಿನ ಲೋಕಾಸಭಾಧ್ಯಕ್ಷರುಗಳು ಮಾತನಾಡಿದ್ದಾರೆ ಎಂದು ಅವರು ಹೇಳಿದರು.
ವಿಧಾನಮಂಡಲದ ಕಲಾಪ ಸಲಹಾ ಸಮಿತಿ ಸಭೆಯಲ್ಲೂ ಈ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಹೇಳಿದ್ದೆ. ಆರಂಭದಲ್ಲಿ ಒಪ್ಪಿಕೊಂಡಿದ್ದ ಕಾಂಗ್ರೆಸ್ ನಾಯಕರು ಅಧಿವೇಶನದ ಕೊನೆಯ ದಿನ ಮುನ್ನ ತಾವು ಲೋಕಸಭಾಧ್ಯಕ್ಷರ ಭಾಷಣದಲ್ಲಿ ಪಾಲ್ಗೊಳ್ಳಲ್ಲ ಎಂದು ಹೇಳಿದರು. ಇದೇನು ಸಂವಿಧಾನ ಆಶಯಕ್ಕೆ ವಿರುದ್ಧವಲ್ಲ. ಕಾಂಗ್ರೆಸ್ ನಾಯಕರು ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದರು.