ಸಂಸದರ ಬಗ್ಗೆ ಫೇಸ್ ಬುಕ್ ನಲ್ಲಿ ಅವಹೇಳನ ಕಮೆಂಟ್ಸ್: ದೂರು

ಬೀದರ:ಮಾ.28: ಫೇಸ್‍ಬುಕ್‍ನಲ್ಲಿ ಸಂಸದ ಭಗವಂತ ಖೂಬಾ ಹಾಗೂ ಅವರ ಕುಟುಂಬದವರನ್ನು ಅವಹೇಳನ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿ ನಗರ ಘಟಕದ ಪ್ರಧಾನ ಕಾರ್ಯದರ್ಶಿ ಅನಿಲಕುಮಾರ ಮಜಗೆ ಒತ್ತಾಯಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಅವರು ಇಲ್ಲಿಯ ನ್ಯೂ ಟೌನ್ ಠಾಣೆಗೆ ದೂರು ನೀಡಿದ್ದಾರೆ. ಮಾ. 25 ರಂದು ರಾತ್ರಿ ಬಸವಕಲ್ಯಾಣ ವಿಧಾನಸಭಾ ಉಪ ಚುನಾವಣೆ ಬಿಜೆಪಿ ಟಿಕೆಟ್ ಶರಣು ಸಲಗರ ಅವರಿಗೆ ಘೋಷಣೆಯಾದ ಪ್ರಯುಕ್ತ ಸಂಸದರು ಫೇಸ್‍ಬುಕ್‍ನಲ್ಲಿ ಅಭಿನಂದನೆ ತಿಳಿಸಿದ್ದರು.

ಪೋಸ್ಟ್‍ಗೆ ಸಂಬಂಧಿಸಿದಂತೆ ದೀಪಕ ರೆಡ್ಡಿ ಕಮಲಾಪುರೆ, ಧನರಾಜ ಮಾನೆ, ರವಿ ಮಜಗೆ, ಅಟ್ಟೂರ, ಹಣಮಂತ ಮೂಲಗೆ, ಸಚಿನ್ ಭಾಗಾ, ರಾಹುಲ್ ಪಾಟೀಲ, ರಘು ರೆಡ್ಡಿ, ಪ್ರಭು ರೆಡ್ಡಿ, ರಮೇಶ ಈರೆಡ್ಡಿ, ಸಾಯಿ ರೆಡ್ಡಿ ಅವರು ಕೆಟ್ಟದಾಗಿ ಕಮೆಂಟ್ ಮಾಡಿ ಸಂಸದರ ಘನತೆಗೆ ಧಕ್ಕೆ ಉಂಟು ಮಾಡಿದ್ದಾರೆ.ಮಲ್ಲಾರೆಡ್ಡಿ ಕಾಮಾರೆಡ್ಡಿ ತೀರಾ ಕೆಟ್ಟದಾಗಿ ಮಾತನಾಡಿದ್ದಾರೆ. ಕೂಡಲೇ ಈ ಎಲ್ಲರನ್ನು ಬಂಧಿಸಿ ಕಾನೂನು ರೀತಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಬಿಜೆಪಿಯ ಜಿಲ್ಲಾ ಕಾನೂನು ಪ್ರಕೋಷ್ಠದ ಸಂಚಾಲಕ ಸಂಜೀವಕುಮಾರ ಬಭ್ರುವಾಹನ ಸಜ್ಜನ್, ಸಾಮಾಜಿಕ ಜಾಲತಾಣ ಮತ್ತು ಮಾಹಿತಿ ತಂತ್ರಜ್ಞಾನ ಪ್ರಕೋಷ್ಠದ ಜಿಲ್ಲಾ ಸಂಯೋಜಕ ಸಚ್ಚಿದಾನಂದ ಚಿದ್ರೆ ಹಾಗೂ ಯುವ ಮೋರ್ಚಾ ನಗರ ಘಟಕದ ಅಧ್ಯಕ್ಷ ಅಬರೀಶ ಬಟನಾಪುರೆ ಪ್ರತ್ಯೇಕ ದೂರು ಸಲ್ಲಿಸಲಾಗುವುದು ಎಂದು ತಿಳಿಸಿದ್ದಾರೆ.