ಸಂಸದರ ಅಮಾನತ್ತು ಪ್ರಜಾಪ್ರಭುತ್ವಕ್ಕೆ ಮಾರಕ


ಸಂಜೆವಾಣಿ ವಾರ್ತೆ
ಬಳ್ಳಾರಿ, ಡಿ.20: ಇದೆಂತಹ ಪ್ರಜಾಪ್ರಭುತ್ವ. ಸಂಸತ್ ನಲ್ಲಿ ಅದ ಭದ್ರತಾ ಲೋಪ ಖಂಡಿಸಿದ ವಿಪಕ್ಷಗಳ ಸಂಸದರನ್ನು ಅಮಾನತು ಮಾಡುವ ಬಿಜೆಪಿಯ ರಾಜಕಾರಣ ಪ್ರಜಾಪ್ರಭುತ್ವಕ್ಕೆ ಮಾರಕ.
ಅವರಿಗೆ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಲ್ಲ ಎಂಬುದನ್ನು ಸಾಬೀತು ಮಾಡಿದ್ದಾರೆ ಎಂದು ಕೆಪಿಸಿಸಿ ರಾಜ್ಯ ಮಾಧ್ಯಮ ವಕ್ತಾರ ವೆಂಕಟೇಶ್ ಹೆಗಡೆ ಅಭಿಪ್ರಾಯಪಟ್ಟಿದ್ದಾರೆ.
ಈ ಕುರಿತು ಪತ್ರಿಕಾಪ್ರಕಟಣೆ ನೀಡಿರುವ ಅವರು,
ಇದುವರೆಗೆ ಒಟ್ಟಾರೆ 141 ಜನ ಸಂಸದರನ್ನು ಸ್ಪೀಕರ್ ಓಂ ಬಿರ್ಲಾ ಅಮಾನತು ಮಾಡಿದ್ದಾರೆ. ಮೊದಲು ಡಿಸೆಂಬರ್ 14 ರಂದು 14 ಜನರನ್ನು ಅಮಾನತು ಮಾಡಲಾಗಿತ್ತು. ಅದಾದ ಬಳಿಕ ಸೋಮವಾರ 14 ಜನರನ್ನು ಅಮಾನತು ಮಾಡಲಾಗಿದೆ. ಇದೀಗ ನಿನ್ನೆ ಮತ್ತೆ 49 ಜನರನ್ನು ಅಮಾನತು ಮಾಡಲಾಗಿದೆ. ಜನರಿಂದ ಆಯ್ಕೆಯಾದ ಸದಸ್ಯರನ್ನು ಈ ರೀತಿ ಅಮಾನತು ಮಾಡಿ ಅದು ಯಾವ ರೀತಿಯಲ್ಲಿ ಸದನ ನಡೆಸುತ್ತಾರೆ ಎಂಬುದು ಯಕ್ಷ ಪ್ರಶ್ನೆ ಆಗಿದೆ.
ಜನರ ಈ ಜನ ಪ್ರತಿನಿಧಿಗಳನ್ನು ತಮ್ಮ ಪರ ಮಾತನಾಡಲಿ ಎಂದು ಆಯ್ಕೆ ಮಾಡಿರುತ್ತಾರೆ. ಸಂವಿಧಾನದ ಪ್ರಕಾರ ಇವರು ಸಂಸತ್ ನಲ್ಲಿ ಇದ್ದು ತಮ್ಮ ಜನರ ಪರ ಮಾತನಾಡಬೇಕು. ಕಾನೂನು ಜಾರಿ ವಿಷಯದಲ್ಲಿ ಚರ್ಚೆ ಮಾಡಬೇಕು. ಅಂತಹ ಪದ್ಧತಿಯನ್ನೇ ಹಾಳುಗೆಡುವವ ರೀತಿಯಲ್ಲಿ ಬಿಜೆಪಿ ವರ್ತಿಸುತ್ತಿದೆ. ಇದನ್ನು ಕಾಂಗ್ರೆಸ್ ಪಕ್ಷ ಕಟುವಾಗಿ ಖಂಡಿಸುತ್ತದೆ.
ಭದ್ರತೆ ಕುರಿತು ಭಾರೀ ಮಾತನಾಡುವ ಬಿಜೆಪಿ ಅದು ಹೇಗೆ ಏಕಾಏಕಿ ಕಲರ್ ಬಾಂಬ್ ಹಿಡಿದು ಕೆಲವರು ಸಂಸತ್ ಪ್ರವೇಶ ಮಾಡಿದರು. ಇದು ಭದ್ರತಾ ಲೋಪ ಅಲ್ಲವೇ? ಈ ಕುರಿತು ಚರ್ಚೆ ಆಗಬೇಕು ಎಂದು ಮಾತನಾಡುವುದು ತಪ್ಪೇ. ಅದ ತಪ್ಪನ್ನು ಸರಿ ಪಡಿಸಿಕೊಂಡು ಮುಂದುವರಿಯುವ ಕುರಿತು ಚರ್ಚೆ ಮಾಡಲು ಅವಕಾಶ ನೀಡದೆ ಸಂಸತ್ ನಿಂದ ಕಾನೂನಿನ ರೀತಿ ಆಯ್ಕೆಯಾದ ಜನ ಪ್ರತಿನಿಧಿಗಳನ್ನು ಹೊರ ಹಾಕುವುದು ಸರಿ ಅಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.