ಸಂಸದರ ಅಮಾನತು ಮೋದಿ ವಿರುದ್ಧ ಸೋನಿಯಾ ಕಿಡಿ

ನವದೆಹಲಿ,ಡಿ.೨೦-ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ೧೪೧ ಸಂಸದರ ಅಮಾನತು ಮಾಡಿರುವ ವಿರುದ್ಧ ವಿಪಕ್ಷಗಳು ಕೇಂದ್ರ ಸರ್ಕಾರದ ವಿರುದ್ಧ ಸಮರ ಸಾರಿವೆ.
ಇದೀಗ ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಕೂಡ ಪ್ರಧಾನಿ ಮೋದಿ ಅವರನ್ನು ಗುರಿಯಾಗಿಸಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ೧೪೧ ಪ್ರತಿಪಕ್ಷಗಳ ಸಂಸದರನ್ನು ಅಮಾನತುಗೊಳಿಸಿದ ಬಗ್ಗೆ ಕಾಂಗ್ರೆಸ್ ಸಂಸದೀಯ ಪಕ್ಷದ (ಸಿಪಿಪಿ) ಅಧ್ಯಕ್ಷೆ ಸೋನಿಯಾ ಗಾಂಧಿ ಪ್ರಧಾನಿ ವಿರುದ್ಧ ಕೆಂಡಾಮಂಡಲವಾಗಿದ್ದಾರೆ.ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ . ಪ್ರಜಾಪ್ರಭುತ್ವದ ಕತ್ತು ಹಿಸುಕಲಾಗುತ್ತಿದೆ ಎಂದು ಸಿಪಿಪಿ ಸಭೆಯಲ್ಲಿ ಸೋನಿಯಾ ಗಾಂಧಿ ಹೇಳಿದ್ದಾರೆ.ಕಾಂಗ್ರೆಸ್ ಸಂಸದೀಯ ಪಕ್ಷದ ಸಭೆಯಲ್ಲಿ ಮಾತನಾಡಿದ ಸೋನಿಯಾ ಗಾಂಧಿ, ಈ ಸರ್ಕಾರ ಪ್ರಜಾಪ್ರಭುತ್ವದ ಕತ್ತು ಹಿಸುಕಿದೆ. ನ್ಯಾಯಸಮ್ಮತವಾದ ಬೇಡಿಕೆಗಾಗಿ ಇಷ್ಟು ವಿರೋಧ ಪಕ್ಷದ ಸಂಸದರನ್ನು ಸದನದಿಂದ ಹಿಂದೆಂದೂ ಅಮಾನತುಗೊಳಿಸಿರಲಿಲ್ಲ. ಡಿಸೆಂಬರ್ ೧೩ ರಂದು ನಡೆದ ಅಸಾಧಾರಣ ಘಟನೆಯ ಕುರಿತು ಲೋಕಸಭೆಯಲ್ಲಿ ಗೃಹ ಸಚಿವ ಅಮಿತ್ ಶಾ ಹೇಳಿಕೆ ನೀಡುವಂತೆ ವಿಪಕ್ಷ ಸದಸ್ಯರು ಒತ್ತಾಯಿಸಿದ್ದರು.
ಪ್ರಧಾನಿ ಮೋದಿ ಬಗ್ಗೆ ಸೋನಿಯಾ ಗಾಂಧಿ ಹೇಳಿದ್ದೇನು.ಡಿಸೆಂಬರ್ ೧೩ ರಂದು ಏನೇ ನಡೆದರೂ ಅದು ಅಕ್ಷಮ್ಯ ಮತ್ತು ಅದನ್ನು ಸಮರ್ಥಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ. ಪ್ರಧಾನಿಯವರು ದೇಶವನ್ನುದ್ದೇಶಿಸಿ ಘಟನೆಯ ಬಗ್ಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಲು ೪ ದಿನಗಳನ್ನು ತೆಗೆದುಕೊಂಡಿದ್ದಾರೆ ಅದೂ ಕೂಡ ಸಂಸತ್ತಿನ ಹೊರಗೆ ಈ ಘಟನೆ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಹೀಗೆ ಮಾಡುವ ಮೂಲಕ ಅವರು ಸದನದ ಘನತೆ ಮತ್ತು ನಮ್ಮ ದೇಶದ ಜನತೆಯ ಬಗ್ಗೆ ತಮ್ಮ ನಿರ್ಲಕ್ಷ್ಯವನ್ನು ಸ್ಪಷ್ಟವಾಗಿ ಸೂಚಿಸಿದ್ದಾರೆ ಎಂದು ಪ್ರಧಾನಿ ಮೋದಿ ವಿರುದ್ಧ ಹರಿಹಾಯ್ದಿದ್ದಾರೆ.