ಸಂಸದರ ಅಮಾನತು: ಪ್ರಜಾಪ್ರಭುತ್ವದ ಕಗ್ಗೊಲೆ

ಸಿದ್ದು ಕಿಡಿ

(ಸಂಜೆವಾಣಿ ಪ್ರತಿನಿಧಿಯಿಂದ)
ಬೆಂಗಳೂರು,ಡಿ.೨೨:ಸಂಸತ್ತಿನ ಭದ್ರತಾ ಲೋಪದ ಬಗ್ಗೆ ಪ್ರಶ್ನೆ ಎತ್ತಿದ ಸಂಸದರನ್ನು ಅಮಾನತು ಮಾಡಿರುವುದು ಪ್ರಜಾಪ್ರಭುತ್ವದ ಕಗ್ಗೊಲೆ ದೇಶದಲ್ಲಿ ಪಜಾಪ್ರಭುತ್ವ ಇಲ್ಲ ಸರ್ವಾಧಿಕಾರ ನಡೆದಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿದ್ದಾರೆ.ಮೈಸೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಜಾಪ್ರಭುತ್ವದಲ್ಲಿ ವಿರೋಧ ಪಕ್ಷದವರ ಮಾತನ್ನು ಕೇಳಬೇಕು. ಆದರೆ, ಈಗ ಪ್ರಜಾಪ್ರಭುತ್ವವೇ ಇಲ್ಲ. ಸರ್ವಾಧಿಕಾರ ನಡೆದಿದೆ. ವಿರೋಧ ಪಕ್ಷದವರನ್ನು ಹೊರಗೆ ಇಟ್ಟು ಕಾಯ್ದೆಗಳನ್ನು ಅಂಗೀಕಾರ ಮಾಡಿಕೊಂಡಿದ್ದಾರೆ. ಇದು ಸರಿಯಲ್ಲ ಇದು ಕೇಂದ್ರ ಸರ್ಕಾರದ ಸರ್ವಾಧಿಕಾರಿ ಧೋರಣೆಯನ್ನು ತೋರಿಸುತ್ತದೆ ಎಂದರು.ಲೋಕಸಭೆಯ ಇತಿಹಾಸದಲ್ಲೇ ದೊಡ್ಡ ಪ್ರಮಾಣದಲ್ಲಿ ಸಂಸದರ ಅಮಾನತು ಮಾಡಿರಲಿಲ್ಲ. ಪ್ರಜಾಪ್ರಭುತ್ವ ಎಲ್ಲಿದೆ? ಕೇಂದ್ರ ಸರ್ಕಾರ ಪ್ರಜಾಪ್ರಭುತ್ವಕ್ಕೆ ಗೌರವ ಕೊಡಲ್ಲ ಎಂದು ಟೀಕಿಸಿದರು.ಮುಂದಿನ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಜನ ಇದಕ್ಕೆಲ್ಲ ಉತ್ತರ ನೀಡುತ್ತಾರೆ. ಸರ್ವಾಧಿಕಾರ ಧೋರಣೆ ಬಂದಿರುವವರಿಗೆ ಪಾಠವನ್ನೂ ಜನ ಕಲಿಸುತ್ತಾರೆ ಎಂದರು.ವಿರೋಧ ಪಕ್ಷಗಳ ಮೈತ್ರಿಕೂಟ ಇಂಡಿಯಾ ಸಭೆಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಪ್ರಧಾನಿ ಅಭ್ಯರ್ಥಿಯನ್ನಾಗಿಸುವ ಬಗ್ಗೆ ನಡೆದಿರುವ ಚರ್ಚೆಗೆ ಪ್ರತಿಕ್ರಿಯಿಸಿದ ಅವರು, ಈ ಬಗ್ಗೆ ಇಂಡಿಯಾ ಸಭೆಯಲ್ಲೇ ತೀರ್ಮಾನವಾಗುತ್ತದೆ. ಮಮತಾ ಬ್ಯಾನರ್ಜಿ ಅವರು ತಮ್ಮ ಅಭಿಪ್ರಾಯ ಹೇಳಿದ್ದಾರೆ. ಚುನಾವಣೆಯಾಗಲಿ ನಂತರ ಇಂಡಿಯಾ ಸಭೆಯಲ್ಲಿ ಪ್ರಧಾನಿ ಯಾರು ಎಂಬುದು ತೀರ್ಮಾನವಾಗಲಿದೆ ಎಂದರು.ನವದೆಹಲಿಗೆ ಸಚಿವ ಜಮೀರ್‌ಅಹ್ಮದ್ ಅವರ ಜತೆ ಐಷಾರಾಮಿ ವಿಮಾನದಲ್ಲಿ ಪ್ರಯಾಣಿಸಿದ ಬಗ್ಗೆ ಕೇಳಲಾದ ಪ್ರಶ್ನೆಗೆ ಗರಂ ಆದ ಅವರು. ಪ್ರಧಾನಿ ಮೋದಿ ಅವರು ಯಾವ ವಿಮಾನದಲ್ಲಿ ಓಡಾಡುತ್ತಾರೆ. ಅವರು ಒಬ್ಬರೇ ಓಡಾಡುವುದಿಲ್ಲವೇ? ಈ ಬಗ್ಗೆ ಬಿಜೆಪಿಯವರನ್ನು ಕೇಳಿ ಎಂದು ಸಿಟ್ಟಿನಿಂದ ಹೇಳಿದರು
ಬರ ಪರಿಹಾರ ನಾಳೆ ಸಭೆ
ರಾಜ್ಯಕ್ಕೆ ಬರ ಪರಿಹಾರ ಬಿಡುಗಡೆ ಮಾಡುವ ಸಂಬಂಧ ನಾಳೆ ಗೃಹ ಸಚಿವ ಅಮಿತ್ ಶಾರವರ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಮಿತಿ ಸಭೆ ನಡೆಯಲಿದೆ. ಈ ಸಭೆಯಲ್ಲಿ ಪರಿಹಾರ ಬಿಡುಗಡೆ ಕುರಿತು ತೀರ್ಮಾನ ಆಗಲಿದೆ ಎಂದರು.ರಾಜ್ಯದ ಬರಪರಿಸ್ಥಿತಿ ಬಗ್ಗೆ ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿ ಎಲ್ಲವನ್ನೂ ವಿವರಿಸಿದ್ದೇನೆ. ಪ್ರಧಾನಿ ಮೋದಿ ಅವರು ನಮ್ಮ ಬೇಡಿಕೆಗಳಿಗೆ ಸಕರಾತ್ಮಕವಾಗಿ ಸ್ಪಂದಿಸಿದ್ದಾರೆ. ಹಾಗೆಯೇ, ಅಮಿತ್ ಶಾರವರ ಜತೆಯೂ ಮಾತನಾಡಿದ್ದೇನೆ. ನಾಳಿನ ಸಭೆಯಲ್ಲಿ ಬರ ಪರಿಹಾರ ತೀರ್ಮಾನವಾಗಲಿದೆ ಎಂದರು.ಪ್ರಧಾನಿ ನರೇಂದ್ರಮೋದಿ ಅವರ ಭೇಟಿ ಸಂದರ್ಭದಲ್ಲಿ ಬರಪರಿಹಾರದ ಬೇಡಿಕೆ ಜತೆಗೆ ಮಹದಾಯಿ, ಮೇಕೆದಾಟು, ಭದ್ರಾಮೇಲ್ದಂಡೆ ಯೋಜನೆಗಳ ಬಗ್ಗೆಯೂ ಚರ್ಚೆ ನಡೆಸಿದ್ದೇನೆ. ಹಾಗೆಯೇ, ನರೇಗಾ ಯೋಜನೆಯಡಿ ಮಾನವ ದಿನಗಳನ್ನು ೧೫೦ ದಿನಗಳಿಗೆ ವಿಸ್ತರಿಸುವಂತೆಯೂ ಮನವಿ ಮಾಡಿದ್ದೇನೆ. ಪ್ರಧಾನಿಗಳು ಎಲ್ಲವನ್ನೂ ಸಮಾಧಾನಚಿತ್ತರಾಗಿ ಆಲಿಸಿ ಸಂಬಂಧಪಟ್ಟ ಸಚಿವರ ಜತೆ ಚರ್ಚಿಸಿ ಕ್ರಮಕೈಗೊಳ್ಳುವ ಭರವಸೆ ನೀಡಿದ್ದಾರೆ ಎಂದರು.
ರಾಜ್ಯದಲ್ಲಿ ಕೋವಿಡ್ ಪರಿಸ್ಥಿತಿ ಆತಂಕಪಡುವಷ್ಟು ಇಲ್ಲ. ಎಚ್ಚರಿಕೆ ಇಂದು ಇದ್ದರೆ ಸಾಕು. ಸದ್ಯಕ್ಕೆ ಕಠಿಣ ನಿರ್ಬಂಧಗಳನ್ನು ಜಾರಿ ಮಾಡುವ ಅಗತ್ಯ ಇಲ್ಲ ಎಂದರು.