ಸಂಸದರ‌ ಮನವಿಗೆ ಸ್ಪಂದನೆ:ಗುತ್ತಿಗೆ ಸಿಬ್ಬಂದಿ ಪಡೆಯಲು ಜಿಮ್ಸ್ ಗೆ ಸರ್ಕಾರದ ನಿರ್ದೇಶನ

ಕಲಬುರಗಿ.ಏ.18: ಕಲಬುರಗಿಯಲ್ಲಿ ಕೋವಿಡ್ ಸೋಂಕು ಹೆಚ್ಚುತ್ತಿರುವ ಕಾರಣ ರೋಗಿಗಳ ಆರೈಕೆಗೆ ಬೇಕಾಗಿರುವ 50 ನರ್ಸ್ ಸಿಬ್ಬಂದಿ ಸೇರಿದಂತೆ ಇನ್ನಿತರ ಸಿಬ್ಬಂದಿಗಳನ್ನು ಕೂಡಲೆ ಗುತ್ತಿಗೆ ಆಧಾರದ ಮೇಲೆ ಭರ್ತಿಗೆ ಅನುಮತಿ ನೀಡಬೇಕು ಎಂಬ ಮನವಿಗೆ ಸರ್ಕಾರ ಸ್ಪಂದಿಸಿದ್ದು, ಕೂಡಲೆ ಸಿಬ್ಬಂದಿ ಪಡೆದುಕೊಳ್ಳುವಂತೆ ಕಲಬುರಗಿ ಜಿಲ್ಲಾಡಳಿತ ಮತ್ತು ಜಿಮ್ಸ್ ಸಂಸ್ಥೆಗೆ ನಿರ್ದೇಶನ ನೀಡಿದೆ ಎಂದು ಸಂಸದ‌‌ ಡಾ.ಉಮೇಶ ಜಾಧವ ಅವರು ತಿಳಿಸಿದ್ದಾರೆ

ಜಿಲ್ಲೆಯಲ್ಲಿ ಕೊರೋನಾ ಉಲ್ಭಣ ಹಿನ್ನೆಲೆ ಜೊತೆಗೆ ಜಿಮ್ಸ್‌ನಲ್ಲಿ ಸಿಬ್ಬಂದಿಗಳ ಕೊರತೆ ಬಗ್ಗೆ ಜಿಮ್ಸ್‌ ನಿರ್ದೇಶಕಿ ಡಾ.ಕವಿತಾ ಪಾಟೀಲ ಅವರು ನನ್ನ ಗಮನಕ್ಕೆ ತಂದಿದ್ದರು.

ಈ ನಿಟ್ಟಿನಲ್ಲಿ ಶನಿವಾರ ವೈದ್ಯಕೀಯ ಮತ್ತು ಆರೋಗ್ಯ ಇಲಾಖೆಯ ಸರ್ಕಾರದ‌ ಕಾರ್ಯದರ್ಶಿಗಳೊಂದಿಗೆ ಆಕ್ಸಿಜನ್, ಹೆಚ್ಚುವರಿ ಬೆಡ್ ಸ್ಥಾಪನೆ, ಸಿಬ್ಬಂದಿ ಕೊರತೆ ಸಂಬಂಧ ಸಮಸ್ಯೆ ಬಗೆಹರಿಸುವಂತೆ ಮನವಿ ಮಾಡಿದೆ. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿ ಹಣಕಾಸು ಇಲಾಖೆಯ ಅನುಮತಿ ನಿರೀಕ್ಷೆ ಮೇರೆಗೆ ಕೂಡಲೆ ಗುತ್ತಿಗೆ ಸಿಬ್ಬಂದಿ ಪಡೆಯುವಂತೆ ಜಿಮ್ಸ್‌ ನಿರ್ದೇಶಕಿ ಡಾ.ಕವಿತಾ ಪಾಟೀಲ ಮತ್ತು ಕಲಬುರಗಿ ಜಿಲ್ಲಾಧಿಕಾರಿ‌ ವಿ‌.ವಿ.ಜ್ಯೋತ್ಸ್ನಾ ಅವರಿಗೆ ರವಿವಾರ ಸರ್ಕಾರ ನಿರ್ದೇಶನ‌ ನೀಡಿದೆ ಎಂದರು.

ಇದಲ್ಲದೆ ಜಿಲ್ಲೆಯಲ್ಲಿ ಕೊರೋನಾ ಉಲ್ಭಣಗೊಳ್ಳುತ್ತಿದ್ದು, ಆಕ್ಸಿಜನ್ ಮತ್ತು ರೆಮ್ಡಿಸಿವಿರ್ ಇಂಜೆಕ್ಷನ್ ಕೊರತೆ ನಿವಾರಿಸುವ ನಿಟ್ಟಿನಲ್ಲಿ ನೋಡೆಲ್ ಅಧಿಕಾರಿಗಳನ್ನು ಸಹ ಸರ್ಕಾರ ನೇಮಿಸಿದೆ ಎಂದು ಸಂಸದರು ತಿಳಿಸಿದ್ದಾರೆ.