ಸಂಸದರು, ಶಾಸಕರು, ನಗರಸಭೆ, ರಾಜ್ಯ, ಕೇಂದ್ರ ಐದು ಇಂಜನ್ ಆಡಳಿತ : ನಗರ ರಸ್ತೆಗಳೇಕೆ ಹೀಗೆ?

ರಸ್ತೆಯ ಮಧ್ಯೆ ಕೆರೆ-ಹೊಂಡಗಳು : ಬಿದ್ದು, ಎದ್ದು ಜನ ಸಂಚಾರ – ಸಾಮಾಜಿಕ ಜಾಲತಾಣದಲ್ಲಿ ನಾಗರಿಕರ ಪ್ರಶ್ನೆ
ರಾಯಚೂರು.ಜು.೨೨- ನಗರದಲ್ಲಿ ಪ್ರಪ್ರಥಮ ಬಾರಿಗೆ ೫ ಇಂಜನ್ ಸರ್ಕಾರ ಇದ್ದರೂ, ಜನ ಸಾಮಾನ್ಯರಿಗೆ ಕನಿಷ್ಟ ಮೂಲಭೂತ ಸೌಕರ್ಯಗಳ ನಿತ್ಯ ಸಮಸ್ಯೆ ನಿವಾರಣೆಯಾಗಿಲ್ಲ ಎನ್ನುವ ಮಾಹಿತಿಯೊಂದಿಗೆ ಹದಗೆಟ್ಟ ರಸ್ತೆಗಳಲ್ಲಿ ಜನ ಬಿದ್ದು, ಎದ್ದು ಹೋಗುವ ಭಾವಚಿತ್ರದೊಂದಿಗಿನ ಸುದ್ದಿ ವೈರಲ್ ಆಗಿದೆ.
ಡಬಲ್ ಇಂಜನ್ ಸರ್ಕಾರವಿದ್ದರೆ ಅಭಿವೃದ್ಧಿಗೆ ಅನುಕೂಲವೆಂದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಾದ ಒಂದೆಡೆಯಾದರೆ, ನಗರದಲ್ಲಿ ೫ ಇಂಜನ್ ಸರ್ಕಾರವಿದ್ದರೂ, ಆಗಿದ್ದೇನೆ ಎಂದು ಜನರ ಪ್ರಶ್ನೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಹರಿದಾಡುತ್ತಿದೆ.
ರಾಯಚೂರು ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿ ಸಂಸದ ರಾಜಾ ಅಮರೇಶ್ವರ ನಾಯಕ, ನಗರ ವಿಧಾನಸಭಾ ಕ್ಷೇತ್ರಕ್ಕೆ ಬಿಜೆಪಿ ಶಾಸಕ ಡಾ.ಶಿವರಾಜ ಪಾಟೀಲ್, ನಗರಸಭೆಯಲ್ಲಿ ಬಿಜೆಪಿ ಅಧಿಕಾರ, ರಾಜ್ಯದಯಲ್ಲಿ ಬಿಜೆಪಿ ಸರ್ಕಾರ, ಕೇಂದ್ರದಲ್ಲೂ ಬಿಜೆಪಿಯೆ ಅಧಿಕಾರ. ಆದರೂ, ನಗರದ ರಸ್ತೆಗಳಲ್ಲಿ ಜನ ಎದ್ದು, ಬಿದ್ದು ಹೋಗುವ ದುಸ್ಥಿತಿ ಏಕೆ ಎನ್ನುವ ಪ್ರಶ್ನೆ ಈಗ ವೈರಲಾಗುತ್ತಿದೆ.
ನಗರದ ಹದಗೆಟ್ಟ ಪರಿಸ್ಥಿತಿ ಬಗ್ಗೆ ಆಡಳಿತರೂಢ ಸಂಸದ, ಶಾಸಕರು ಮತ್ತು ಸರ್ಕಾರವನ್ನು ಸಮರ್ಥವಾಗಿ ಪ್ರಶ್ನಿಸುವಲ್ಲಿ ವಿರೋಧ ಪಕ್ಷಗಳು ಮತ್ತು ಸಂಘ-ಸಂಸ್ಥೆಗಳ ವೈಫಲ್ಯದ ಮಧ್ಯೆ ಜನ ಸಾಮಾನ್ಯರೆ ಸಾಮಾಜಿಕ ಜಾಲತಾಣವನ್ನು ತಮ್ಮ ಆಕ್ರೋಶದ ವೇದಿಕೆಯಾಗಿ ಮಾರ್ಪಡಿಸಿಕೊಂಡಿದ್ದಾರೆ. ನಗರಾಭಿವೃದ್ಧಿ ಪ್ರಾಧಿಕಾರದ ಕಛೇರಿಯ ಮುಂಭಾಗದಿಂದ ಯಕ್ಲಾಸಪೂರು ರಸ್ತೆಗೆ ಸಂಪರ್ಕ ಕಲ್ಪಿಸುವ ರಸ್ತೆ ಹಾಗೂ ಅರಬ್ ಮೊಹಲ್ಲಾದಿಂದ ಯಕ್ಲಾಸಪೂರಿಗೆ ಹೋಗುವ ರಸ್ತೆ ಅತ್ಯಂತ ದುಸ್ಥಿತಿಯಲ್ಲಿರುವುದರಿಂದ ಈ ರಸ್ತೆಯ ಸಂಚಾರ ಜನರ ಪಾಲಿಗೆ ಏಳು, ಬೀಳುವುದು ನಿಶ್ಚಿತವಾಗಿದೆ.
ಕಳೆದ ಅನೇಕ ವರ್ಷಗಳಿಂದ ಈ ರಸ್ತೆ ಇದೆ ಸ್ಥಿತಿಯಲ್ಲಿದೆ. ಯಕ್ಲಾಸಪೂರಿಗೆ ಹೋಗುವ ರಸ್ತೆ ಜಿಲ್ಲಾಡಳಿತ ಭವನದ ರಸ್ತೆಯನ್ನಾಗಿ ಗುರುತಿಸಲಾಗುತ್ತದೆ. ಈ ರಸ್ತೆಗೆ ಡಾಂಬರೀಕರಣ ಮಾಡಲಾಗಿತ್ತು. ಆದರೆ, ಈ ಡಾಂಬರೀಕರಣ ಎಲ್ಲಿದೆ ಎಂದು ಹುಡುಕುವ ಪರಿಸ್ಥಿತಿ ನಿರ್ಮಾಣವಾಗಿದೆ. ನಗರದ ರಸ್ತೆಗಳ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಪ್ರಮಾಣದಲ್ಲಿ ಸುದ್ದಿಯಾಗುತ್ತಿದ್ದರೂ, ಸಂಸದರು, ಶಾಸಕರು ಮತ್ತು ಜಿಲ್ಲಾಡಳಿತ ಗಮನ ಹರಿಸದಿರುವುದು ವಿಶೇಷವಾಗಿದೆ.
ಜಿಲ್ಲಾ ಪಂಚಾಯತ, ಲೋಕೋಪಯೋಗಿ ಹಾಗೂ ನಗರಸಭೆ ರಸ್ತೆಗಳು ನಗರದಲ್ಲಿವೆ. ಈ ರಸ್ತೆಗಳಿಗೆ ಸರ್ಕಾರದಿಂದ ಅನುದಾನ ಬಂದಿದೆಂದು ಹೇಳುವ ಭಾಷಣ ಹೊರತು ಪಡಿಸಿದರೆ, ರಸ್ತೆ ಅಭಿವೃದ್ಧಿ ಮಾತ್ರ ಕೈಗೂಡಿಲ್ಲ. ಇಷ್ಟೆಲ್ಲ ಹದಗೆಟ್ಟ ರಸ್ತೆಗಳಿದ್ದರೂ, ಇಲ್ಲಿಯ ಜನಪ್ರತಿನಿಧಿ ಮತ್ತು ಅಧಿಕಾರಿಗಳಿಗೆ ಸಂವೇದನೆ ಇದೆಯೆ ಎನ್ನುವ ಪ್ರಶ್ನೆಗಳು ಸಾಮಾಜಿಕ ಜಾಲತಾಣದಲ್ಲಿ ಕೇಳಿ ಬರುತ್ತವೆ.
ಪ್ರತಿ ರಸ್ತೆಯ ಬಗ್ಗೆ ಜನ ತಮ್ಮ ಆಕ್ರೋಶ ಹೇಳಿಕೊಳ್ಳುತ್ತಿದ್ದಾರೆ. ಸಾವಿರ ಕೋಟಿ ಅನುದಾನ ಬಿಡುಗಡೆಗೊಂಡ ನಗರದಲ್ಲಿ ಶೇ.೮೦ ರಷ್ಟು ರಸ್ತೆಗಳು ಹದಗೆಟ್ಟ ಪರಿಸ್ಥಿತಿಯಲ್ಲಿದ್ದರೆ ಅನುದಾನ ಏನಾಯಿತು? ಎನ್ನುವ ಪ್ರಶ್ನೆಗಳ ಸರಮಾಲೆಯೂ ಸಾಮಾಜಿಕ ಜಾಲತಾಣಗಳಲ್ಲಿ ನೋಡಬಹುದಾಗಿದೆ. ಜನರು ಸ್ವಯಂ ಸ್ಪೂರ್ತಿಯಿಂದ ತೋಡಿಕೊಳ್ಳುತ್ತಿದ್ದರೆ, ವಿರೋಧಿ ಪಕ್ಷಗಳು ಮಾತ್ರ ಈ ರಸ್ತೆಗಳ ಬಗ್ಗೆ ಒಂದು ಪ್ರಬಲ ಹೋರಾಟ ರೂಪಿಸುವ ಗೋಜಿಗೆ ಹೋಗದಿರುವುದು ವಿಚಿತ್ರವಾಗಿದೆ.
ಕಲುಷಿತ ಕುಡಿವ ನೀರಿಗೆ ಸಂಬಂಧಿಸಿ ಸಂಯುಕ್ತ ಹೋರಾಟ ನಡೆಸಿದ ಸಂಘ, ಸಂಸ್ಥೆಗಳು ಮತ್ತು ವಿರೋಧ ಪಕ್ಷಗಳು ರಸ್ತೆಗಳ ವಿಷಯದಲ್ಲಿ ಮೌನವಾಗಿರುವುದರ ಹಿಂದಿನ ಗುಟ್ಟೇನು ಎನ್ನುವುದು ಸಾರ್ವಜನಿಕರ ಪ್ರಶ್ನೆಯಾಗಿದೆ. ಆಡಳಿತರೂಢ ಪಕ್ಷದ ಜನಪ್ರತಿನಿಧಿಗಳು ಮತ್ತು ವಿರೋಧ ಪಕ್ಷದ ಮುಖಂಡರಿಗೆ ಅತ್ಯಂತ ಹದಗೆಟ್ಟ ರಸ್ತೆಗಳಲ್ಲಿ ಜನ ಸಂಚಾರದ ಹಿಂಸೆಯ ಬಗ್ಗೆ ಮನವರಿಕೆಯಾಗುವುದಿಲ್ಲವೆ?. ಇಂತಹ ರಸ್ತೆಗಳು ತಮ್ಮ ನಾಯಕತ್ವಕ್ಕೆ ಮುಜುಗರ ಎನ್ನುವ ಕನಿಷ್ಟ ಭಾವನೆಯೂ ಇವರಿಗೆ ಮೂಡುವುದಿಲ್ಲವೆ? ಎಂದು ಜನರ ಪ್ರಶ್ನೆಯಾಗಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಹದಗೆಟ್ಟ ರಸ್ತೆಗಳ ಭಾವಚಿತ್ರ ಹಾಕಿ, ಮಾಧ್ಯಮದವರನ್ನು ಪ್ರಶ್ನಿಸುವ ಮಟ್ಟಕ್ಕೆ ಜನ ತೀವ್ರ ಅಸಮಾಧಾನಗೊಂಡಿದ್ದಾರೆ. ನಗರದ ರಸ್ತೆಗಳ ಸಮಗ್ರ ದುರಸ್ತಿಗೆ ಯೋಜನೆ ರೂಪಿಸಲು ಸಾಧ್ಯವಿಲ್ಲವೆ?. ಪ್ರತಿ ಸಲ ಮಾಧ್ಯಮಗಳಲ್ಲಿ ರಸ್ತೆಗಳ ಬಗ್ಗೆ ಸುದ್ದಿಯಾಗುತ್ತಿದ್ದರೂ, ಸಂಬಂಧಪಟ್ಟ ವ್ಯಕ್ತಿಗಳು ಈ ರಸ್ತೆಗಳನ್ನು ಒಂದಷ್ಟು ದುರಸ್ತಿ ಮಾಡಿ, ಜನ ಸಾಮಾನ್ಯರ ಓಡಾಟಕ್ಕೆ ಸುಗಮ ವ್ಯವಸ್ಥೆ ಮಾಡಿಕೊಡುವ ಕನಿಷ್ಟ ಮಾನವೀಯತೆಯೂ ಇಲ್ಲದ ಅಮಾನವಿಯತೆ ಏಕೆ ಎನ್ನುವ ಪ್ರಶ್ನೆ ಜನರದ್ದಾಗಿದೆ.
ನಗರದ ಜಿಲ್ಲಾ ಕೇಂದ್ರವಾಗಿದ್ದರಿಂದ ಬಂದು ಹೋಗುವವರ ಸಂಖ್ಯೆಯೂ ಅಪಾರವಾಗಿರುತ್ತದೆ. ಶಾಲಾ, ಕಾಲೇಜುಗಳ ಮಕ್ಕಳು ಸೇರಿದಂತೆ ಬಹುತೇಕ ರಸ್ತೆಗಳಲ್ಲಿ ಜನರ ಓಡಾಟ ಅತಿಯಾಗಿರುತ್ತದೆ. ಇಂತಹ ರಸ್ತೆಗಳನ್ನು ಪ್ರಥಮ ಆದ್ಯತೆ ಮೇರೆಗೆ ದುರಸ್ತಿ ಮಾಡುವ ಕಾಳಜಿಯಿಲ್ಲದಿರುವುದನ್ನು ಜನ ಅತ್ಯಂತ ಕೆಟ್ಟ ಭಾಷೆಯಲ್ಲಿ ನಿಂದಿಸುವ ಮಟ್ಟಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗಳು ನಡೆಯುತ್ತವೆ. ಈ ಚರ್ಚೆಯ ಮುಂದುವರಿಕೆ ಭಾಗವೆ ನಗರದಲ್ಲಿ ಐದು ಇಂಜನ್ ಆಡಳಿತವಿದ್ದರೂ, ಮೂಲ ಸೌಕರ್ಯಗಳ ಕೊರತೆ, ಅದರಲ್ಲೂ ವಿಶೇಷವಾಗಿ ಉತ್ತಮ ರಸ್ತೆಗಳ ವ್ಯವಸ್ಥೆ ಇಲ್ಲ ಎನ್ನುವ ಸಂದೇಶ ಈಗ ಜನರ ಮಧ್ಯೆ ಭಾರೀ ಸಂಚಲನಕ್ಕೆ ದಾರಿ ಮಾಡಿದೆ.