ಸಂಸದರು ಟ್ವೀಟ್‌ನಲ್ಲಿ ಅಭಿನಂದನೆ ಸಲ್ಲಿಸಿರುವುದು ಕುಹಕವಷ್ಟೇ: ಅಮಲ

ಮಂಗಳೂರು, ನ.1೬- ಸುರತ್ಕಲ್ ಟೋಲ್ ವಿರೋಧಿಸಿ ರಾತ್ರಿ ಹಗಲು ನಡೆಯುತ್ತಿರುವ ಧರಣಿಗೆ ಫಲ ದೊರೆಯುವ ಲಕ್ಷಣ ಗೋಚರವಾಗಿದೆ. ಆದರೆ, ಕಳೆದ ಆರು ವರ್ಷಗಳಿಂದ ಜನರನ್ನು ದರೋಡೆ ಮಾಡಿದ ಟೋಲ್ ರದ್ಧತಿ ಬಗ್ಗೆ ಸಂಸದರು ತಮ್ಮ ಟ್ವೀಟ್‌ನಲ್ಲಿ ಅಭಿನಂದನೆ ಸಲ್ಲಿಸಿರುವುದು ಕುಹಕವಷ್ಟೆ ಎಂದು ಕೆಪಿಸಿಸಿ ಮಾಧ್ಯಮ ವಕ್ತಾರ ಅಮಲ ರಾಮಚಂದ್ರ ಹೇಳಿದ್ದಾರೆ.

ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಸದ ನಳಿನ್ ಕುಮಾರ್ ಟೋಲ್ ರದ್ದತಿಯ ತಾಂತ್ರಿಕ ಪ್ರಕ್ರಿಯೆ ಪೂರ್ಣಗೊಂಡಿದೆ ಎಂದು ಹೇಳುತ್ತಾ ಅಭಿನಂದನೆ ಸಲ್ಲಿಸಿದ್ದಾರೆ. ಅವರು ಅಭಿನಂದನೆ ಹೇಳುವುದಲ್ಲ. ಬದಲಾಗಿ ತಾತ್ಕಾಲಿಕ ನೆಲೆಯಲ್ಲಿ ಕಾರ್ಯಾರಂಭಿಸಿ ಕಳೆದ ಆರು ವರ್ಷಗಳಿಂದ ಜನರನ್ನು ದರೋಡೆ ಮಾಡುತ್ತಿದ್ದ ಅಕ್ರಮ ಟೋಲ್ ಅನ್ನು ರದ್ದುಪಡಿಸಲು ವಿಳಂಬವಾದ ಬಗ್ಗೆ ಜನರಲ್ಲಿ ಕ್ಷಮೆಯಾಚಿಸಬೇಕಿತ್ತು. ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿಯವರು ಬೆಂಗಳೂರಿಗೆ ಭೇಟಿ ನೀಡಿದ ಸಂದರ್ಭ ರಸ್ತೆಗಳಿಗೆ ತೇಪೆ ಹಚ್ಚುವ ಕೆಲಸ ನಡೆದಿದೆ. ಅವರೇ ಹೇಳಿರುವಂತೆ ತಾನು ಪ್ರಧಾನಿ ಅಲ್ಲ. ಪ್ರಧಾನ ಸೇವಕ. ಅವರು ಭೇಟಿ ನೀಡುವ ಸಂದರ್ಭ ಜನರ ಸಮಸ್ಯೆಗಳು ಅರಿವಾಗಬೇಕು. ಈ ರೀತಿ ತೇಪೆ ಹಾಕಿ ಅಂದಗೊಳಿಸಿದರೆ ಅವರಿಗೆ ಸಮಸ್ಯೆ ತಿಳಿಯುವುದು ಹೇಗೆ? ಬೆಂಗಳೂರಿನಲ್ಲಿ ರಸ್ತೆ ಗುಂಡಿಗಳಿಂದ ಅದೆಷ್ಟೋ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಆ ರಸ್ತೆಗಳಿಗೆ ತೇಪೆ ಹಚ್ಚಲಾಗುವುದಿಲ್ಲ. ಆದರೆ ಪ್ರಧಾನಿ ಬರುತ್ತಾರೆಂದರೆ ತೇಪೆ ಹಚ್ಚುವುದರಿಂದ ಏನು ಪ್ರಯೋಜನ ಎಂದು ಅಮಲ ರಾಮಚಂದ್ರ ಪ್ರಶ್ನಿಸಿದರು. ಗೋಷ್ಠಿಯಲ್ಲಿ ಕಾಂಗ್ರೆಸ್ ಜಿಲ್ಲಾ ಮುಖಂಡರಾದ ನೀರಜ್ ಪಾಲ್, ಉದಯ ಕುಂದರ್, ಯಶವಂತ್ ಉಪಸ್ಥಿತರಿದ್ದರು.