ಸಂಸತ್ ಮುಂದೆ ಕಾಂಗ್ರೆಸ್ ಪ್ರತಿಭಟನೆ

ನವದೆಹಲಿ,ಮಾ.೧೭:ಉದ್ಯಮಿ ಅದಾನಿಗೆ ಸಂಬಂಧಿಸಿದಂತೆ ಹಿಂಡೆನ್‌ಬರ್ಗ್ ವರದಿಯ ಬಗ್ಗೆ ಜಂಟಿ ಸದನ ಸಮಿತಿಯಿಂದ ತನಿಖೆ ನಡೆಸಬೇಕು ಎಂದು ಆಗ್ರಹಿಸಿ ಕಾಂಗ್ರೆಸ್ ಪಕ್ಷ ಸಂಸತ್‌ನ ಹೊರಗೆ ಪ್ರತಿಭಟನೆ ನಡೆಸಿತು.
ಲೋಕಸಭೆ ಹಾಗೂ ರಾಜ್ಯಸಭೆಯ ಕಲಾಪಗಳೂ ಸೋಮವಾರಕ್ಕೆ ಮುಂದಕ್ಕೆ ಹೋದ ನಂತರ ಕಾಂಗ್ರೆಸ್‌ನ ಎಲ್ಲ ಸಂಸತ್ ಸದಸ್ಯರು ಸಂಸತ್‌ನ ಆವರಣದಲ್ಲಿರುವ ಗಾಂಧಿ ಪ್ರತಿಮೆ ಎದುರು ಧರಣಿ ನಡೆಸಿ ಅದಾನಿ ವಿಚಾರದ ಬಗ್ಗೆ ಜೆಪಿಸಿ ತನಿಖೆ ನಡೆಸುವಂತೆ ಒತ್ತಾಯಿಸಿದರು.
ಕಾಂಗ್ರೆಸ್‌ನ ಈ ಪ್ರತಿಭಟನಾ ಧರಣಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್‌ನ ಮಾಜಿ ಅಧ್ಯಕ್ಷರುಗಳಾದ ಸೋನಿಯಾಗಾಂಧಿ, ರಾಹುಲ್‌ಗಾಂಧಿ ಸೇರಿದಂತೆ ಕಾಂಗ್ರೆಸ್‌ನ ಸಂಸದರುಗಳು ಭಾಗಿಯಾದರು.
ಕೇಂದ್ರದ ವಿರುದ್ಧ ಕಾಂಗ್ರೆಸ್ ಸದಸ್ಯರು ಧಿಕ್ಕಾರದ ಘೋಷಣೆಗಳನ್ನು ಕೂಗಿದರು. ಜೆಪಿಸಿ ತನಿಖೆಗೆ ಒತ್ತಾಯಿಸುವ ಭಿತ್ತಿಪತ್ರಗಳನ್ನೂ ಪ್ರದರ್ಶಿಸಿದರು.
ಹಿಂಡೆನ್‌ಬರ್ಗ್ ವರದಿಗೆ ಸಂಬಂಧಿಸಿದಂತೆ ಜೆಪಿಸಿ ತನಿಖೆಯಾಗಲೇಬೇಕು. ಕಾಂಗ್ರೆಸ್ ಪಕ್ಷ ಈ ಬಗ್ಗೆ ಸದನದ ಒಳಗೆ-ಹೊರಗೆ ಹೋರಾಟ ಮುಂದುವರೆಸಲಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದರು.