ಸರ್ವ ಧರ್ಮ ಮಂತ್ರ ಘೋಷಗಳ ನಡುವೆ ಮೋದಿ ಉದ್ಘಾಟನೆ
ನವದೆಹಲಿ, ಮೇ ೨೮ – ವಿಶ್ವದಲ್ಲೇ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತದ ಪ್ರತಿಷ್ಠೆ, ಘನತೆ, ವೈಭವವನ್ನು ಉತ್ತುಂಗಕ್ಕೆ ಕೊಂಡೊಯ್ಯುವ ನೂತನ ಸಂಸತ್ ಭವನ ಇಂದು ಲೋಕಾರ್ಪಣೆಗೊಂಡಿದೆ. ಪ್ರಧಾನಿ ನರೇಂದ್ರ ಮೋದಿ ವೇದ ಮಂತ್ರ ಘೋಷಣೆ, ಸರ್ವ ಧರ್ಮ ಪ್ರಾರ್ಥನೆಗಳ ಜಯಘೋಷಗಳ ನಡುವೆ ನೂತನ ಸಂಸತ್ ಭವನವನ್ನು ಲೋಕಾರ್ಪಣೆ ಮಾಡಿದರು.
ಇಂದು ಬೆಳಿಗ್ಗೆನಿಂದಲೇ ಸಂಸತ್ ಭವನ ಲೋಕಾರ್ಪಣೆಯ ಕಾರ್ಯಕ್ರಮಗಳು ಆರಂಭವಾಗಿದ್ದು, ವಿವಿಧ ಮಠಾಧಿಶರು, ಸಾಧು ಸಂತರ ಸಮ್ಮುಖದಲ್ಲಿ ಪ್ರಾರ್ಥನೆ ವಿವಿಧ ಪೂಜಾ ವಿಧಿ ವಿಧಾನಗಳು ನಡೆದವು. ಇದಾದ ಬಳಿಕ ಪ್ರಧಾನಿ ಮೋದಿಯವರು ನ್ಯಾಯ ಪರತೆ ಅಥವಾ ಧರ್ಮ ನಿಷ್ಠತೆಯ ಸಂಕೇತವಾದ ಸೆಂಗೊಲ್ ಅರ್ಥಾತ್ ರಾಜದಂಡವನ್ನು ಲೋಕಸಭಾಧ್ಯಕ್ಷರ ಪೀಠದ ಸಮೀಪ ಪ್ರತಿಷ್ಠಾಪಿಸಿ ನ್ಯಾಯದಂಡಕ್ಕೆ ದೀಪ ಬೆಳಗಿ ಪೂಜೆ ಸಲ್ಲಿಸಿದರು.
ಈ ಐತಿಹಾಸಿಕ ಸೆಂಗೊಲ್‌ನನ್ನು ತಮಿಳುನಾಡಿದ ಪುರೋಹಿತರು ಪ್ರಧಾನಿಗೆ ನೀಡಿದ್ದು, ನಂತರ ಪ್ರಧಾನಿ ಈ ಸೆಂಗೊಲ್‌ನನ್ನು ಪ್ರತಿಷ್ಠಾಪಿಸಿದರು. ಸಂಸತ್ ಭವನದ ಉದ್ಘಾಟನೆ ಸಂದರ್ಭದಲ್ಲಿ ನಡೆದ ಸರ್ವಧರ್ಮ ಪ್ರಾರ್ಥನೆ, ವೇದ ಮಂತ್ರ ಘೋಷಣೆ ಮೊದಲಾದ ಪೂಜಾ ಕೈಂಕರ್ಯ ನಡೆದವು. ಈ ಸಂದರ್ಭದಲ್ಲಿ ಪ್ರಧಾನಿ ಮೋದಿ, ಲೋಕಸಭೆಯ ಸ್ಪೀಕರ್ ಓಂಬಿರ್ಲಾ, ಕೇಂದ್ರದ ಹಲವು ಸಚಿವರು ಭಾಗಿಯಾಗಿದ್ದರು.
ಗಣಪತಿ ಹೋಮ ಹವನ
ನೂತನ ಸಂಸತ್ ಭವನದ ಉದ್ಘಾಟನೆಗೂ ಮುನ್ನ ವಿಘ್ನ ನಿವಾರಕ ಗಣಪತಿಯ ಪೂಜಾಕೈಂಕರ್ಯಗಳು ನಡೆದಿದ್ದು, ಗಣಪತಿ ಹೋಮವನ್ನು ಮೊದಲಿಗೆ ನಡೆಸಲಾಯಿತು. ಈ ಹೋಮ ಪೂಜಾ ಕೈಂಕರ್ಯದಲ್ಲಿ ಕರ್ನಾಟಕದ ಶೃಂಗೇರಿ ಮಠದ ಪುರೋಹಿತರುಗಳು ನಡೆಸಿದರು.
ಕಾರ್ಮಿಕರಿಗೆ ಸನ್ಮಾನ
ಲೋಕಾರ್ಪಣೆಗೂ ಮುನ್ನ ನೂತನ ಸಂಸತ್ ಭವನದ ನಿರ್ಮಾಣದಲ್ಲಿ ದುಡಿದ ಕಾರ್ಮಿಕರನ್ನು ಪ್ರಧಾನಿ ಮೋದಿಯವರು ಸನ್ಮಾನಿಸಿದರು. ಹಾಗೇಯೇ ನೂತನ ಸಂಸತ್ ಭವನ ನಿರ್ಮಾಣಕ್ಕೆ ಸಹಕರಿಸಿದ ಹಲವು ಗಣ್ಯರನ್ನು ಸನ್ಮಾನಿಸಲಾಯಿತು.
ನೂತನ ಸಂಸತ್ ಭವನ ಸಬಲೀಕರಣದ ತೊಟ್ಟಿಲಾಗಲಿ. ಇದು ರಾಷ್ಟ್ರವನ್ನು ಪ್ರಗತಿಯ ಹೊಸ ಎತ್ತರಕ್ಕೆ ಕೊಂಡೊಯ್ಯಲಿ ಎಂದು ಪ್ರಧಾನಿ ನರೇಂದ್ರ ಮೋದಿಯವರು ಆಶಿಸಿದ್ದಾರೆ. ನೂತನ ಸಂಸತ್ ಭವನ ಲೋಕಾರ್ಪಣೆ ನಂತರ ಟ್ವೀಟ್ ಮಾಡಿರುವ ಪ್ರಧಾನಿ ಮೋದಿಯವರು ಭಾರತದ ಸಂಸತ್ತಿನ ಹೊಸ ಕಟ್ಟಡದ ಉದ್ಘಾಟನೆಯೊಂದಿಗೆ ನಮ್ಮ ಹೃದಯಗಳು ಮತ್ತು ಮನಸ್ಸುಗಳು ಹೆಮ್ಮೆ, ನಿರೀಕ್ಷೆ, ಭರವಸೆಗಳಿಂದ ಕೂಡಿವೆ. ಈ ಕಟ್ಟಡವು ಸಬಲೀಕರಣದ ತೊಟ್ಟಿಲಾಗಲಿ ಕನಸುಗಳನ್ನು ಬಿತ್ತಿ ಅವುಗಳನ್ನು ವಾಸ್ತವಕ್ಕೆ ತರುವಂತಾಗಲಿ ಇದು ನಮ್ಮ ಮಹಾನ್ ರಾಷ್ಟ್ರವನ್ನು ಪ್ರಗತಿಯ ಹೊಸ ಎತ್ತರಕ್ಕೆ ಕೊಂಡೊಯ್ಯಲಿ ಎಂದು ಟ್ವೀಟ್‌ನಲ್ಲಿ ಹೇಳಿದ್ದಾರೆ.
೭೫ ನಾಣ್ಯ ಬಿಡುಗಡೆ

ನೂತನ ಸಂಸತ್ ಭವನ ಲೋಕಾರ್ಪಣೆ ಸವಿನೆನಪಿಗಾಗಿ ೭೫ ರೂ ಮುಖಬೆಲೆಯ ನಾಣ್ಯವನ್ನು ಪ್ರಧಾನಿ ನರೇಂದ್ರ ಮೋದಿಯವರು ಬಿಡುಗಡೆ ಮಾಡಿದರು. ೭೫ ವರ್ಷಗಳ ಸ್ವಾತಂತ್ರವನ್ನು ಆಚರಿಸುತ್ತಿರುವ ಸವಿನೆನಪಿಗಾಗಿ ಮೋದಿಯವರು ಈ ನಾಣ್ಯವನ್ನು ಬಿಡುಗಡೆ ಮಾಡಲಾಗಿದೆ.
ನಾಣ್ಯ ಒಂದು ಬದಿಯಲ್ಲಿ ಅಶೋಕ್ ಸ್ತಬ್ಧ ಸಿಂಹದ ಲಾಂಛನದ, ನಾಣ್ಯ ಕೆಳಗಡೆ ಸತ್ಯಮೇವ ಜಯತೆ ಎಂದು ಬರೆಯಲಾಗಿದೆ.
ಎಡಭಾಗದಲ್ಲಿ ಭಾರತ್, ಬಲಭಾಗದಲ್ಲಿ ಇಂಡಿಯಾ ಎಂದು ಬರೆಯಲಾಗಿದೆ. ಸಿಂಹದ ಲಾಂಛನದ ಕೆಳಗಡೆ ಮುಖಬೆಲೆಯನ್ನು ತೋರಿಸುವ ರೂಪಾಯಿಯ ಚಿಹ್ನೆಯಿದೆ.
ರೂ. ೭೫ ಎಂದು ಇಂಗ್ಲಿಷ್ ಅಂಕೆಯಲ್ಲಿ ಬರೆಯಲಾಗಿದೆ. ನಾಣ್ಯದ ಮತ್ತೊಂದು ಬದಿಯಲ್ಲಿ ಸಂಸತ್ ಸಂಕೀರಣದ ಫೋಟೋ ಇರಲಿದೆ.
ಇದೇ ಸಂದರ್ಭದಲ್ಲಿ ವಿಶೇಷ ಅಂಚೆ ಚೀಟಿಯನ್ನು ಅನಾವರಣಗೊಳಿಸಿದರು.