ಸಂಸತ್ ಭವನಕ್ಕೆ ಮುತ್ತಿಗೆ ರೈತರ ನಿರ್ಧಾರ

ನವದೆಹಲಿ, ಮಾ.31- ಕೃಷಿ ಕಾಯ್ದೆಗಳನ್ನು ವಿರೋಧಿಸಿ ಸಂಸತ್ ಭವನಕ್ಕೆ ರೈತರು ಮುತ್ತಿಗೆ ಹಾಕಲು ನಿರ್ಧರಿಸಿದ್ದಾರೆ.

ಕಿಸಾನ್ ಸಂಯುಕ್ತ ಮೋರ್ಚಾ ಸಂಘಟನೆಯಡಿ ನಲವತ್ತಕ್ಕೂ ಹೆಚ್ಚು ರೈತ ಸಂಘಟನೆಗಳ ನಾಯಕರು ಮೇ ತಿಂಗಳ ಮೊದಲ ವಾರ ಸಂಸತ್ ಭವನಕ್ಕೆ ಮುತ್ತಿಗೆ ಹಾಕಲು ನಿರ್ಧರಿಸಿದ್ದು ಶೀಘ್ರದಲ್ಲೇ ದಿನಾಂಕ ಪ್ರಕಟಿಸಲು ಮುಂದಾಗಿದ್ದಾರೆ.

ಕೃಷಿ ಕಾಯ್ದೆಗಳನ್ನು ಹಿಂಪಡೆಯುವಂತೆ ಆಗ್ರಹಿಸಿ ಕಳೆದ ನಾಲ್ಕು ತಿಂಗಳಿಗೂ ಅಧಿಕ ಸಮಯದಿಂದ ದೆಹಲಿಯ ಗಡಿಭಾಗ ಸೇರಿದಂತೆ ದೇಶಾದ್ಯಂತ ಹೋರಾಟ ನಡೆಸುತ್ತಿದ್ದರೂ ಕೇಂದ್ರ ಸರಕಾರ ಗಣನೆಗೆ ತೆಗೆದುಕೊಳ್ಳದ ಹಿನ್ನೆಲೆಯಲ್ಲಿ ಸಂಸತ್ ಭವನಕ್ಕೆ ಮುತ್ತಿಗೆ ಹಾಕಲು ರೈತ ನಾಯಕರು ನಿರ್ಧರಿಸಿದ್ದಾರೆ.

ಫೆಬ್ರವರಿ ತಿಂಗಳ ಒಂದರಂದು ಸಂಸತ್ ಭವನಕ್ಕೆ ರೈತರು ಮುತ್ತಿಗೆ ಹಾಕಲು ನಿರ್ಧರಿಸಿದ್ದರು‌ ಅಂದು ಕೇಂದ್ರ ಬಜೆಟ್ ಮಂಡನೆ ಹಿನ್ನೆಲೆಯಲ್ಲಿ ತಮ್ಮ ಉದ್ದೇಶಿತ ಸಂಸತ್ ಭವನದ ಮುತ್ತಿಗೆಯನ್ನು ರೈತರು ಮುಂದೂಡಿದರು.

ಕೇಂದ್ರ ಸರ್ಕಾರ ವಿವಾದಾತ್ಮಕ ಕೃಷಿ ಕಾಯ್ದೆಗಳನ್ನು ಹಿಂದಕ್ಕೆ ಪಡೆಯುವ ತನಕ ಹೋರಾಟ ನಿಲ್ಲುವುದಿಲ್ಲ ಎಂದು ರೈತರು ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ಸಂದೇಶ ನೀಡಿದ್ದಾರೆ.

ಈ ಬಾರಿ ರೈತರು ನಡೆಸಲಿರುವ ಹೋರಾಟಕ್ಕೆ ಮಹಿಳೆಯರು ದಲಿತರು ಆದಿವಾಸಿಗಳು ನಿರುದ್ಯೋಗಿ ಯುವಕರು ಸೇರಿದಂತೆ ಬಹುಜನರು ಕೈಜೋಡಿಸುವ ಸಾಧ್ಯತೆಗಳಿವೆ ಈಗ ಸಂಸತ್ ಭವನದ ಮತ್ತಿಗೆ ಯಾವಾಗ ಎನ್ನುವುದನ್ನು ಶೀಘ್ರದಲ್ಲಿ ದಿನಾಂಕ ಪ್ರಕಟಿಸಲಾಗುವುದು ಎಂದು ರೈತನಾಯಕರು ಅವರು ತಿಳಿಸಿದ್ದಾರೆ

ನಾಳೆಯಿಂದ ಹೋರಾಟ ತೀವ್ರ:

ಕೃಷಿ ಕಾಯ್ದೆ ಹಿಂಪಡೆಯುವಂತೆ ಆಗ್ರಹಿಸಿ ದೇಶಾದ್ಯಂತ ನಾಳೆಯಿಂದ ತೀವ್ರ ಸ್ವರೂಪದ ಹೋರಾಟ ನಡೆಸಲಾಗುವುದು ಎಂದು ರೈತ ನಾಯಜರು ಎಚ್ಚರಿಕೆ ನೀಡಿದ್ದಾರೆ.

ಏಪ್ರಿಲ್ 10 ರಂದು ದೇಶಾದ್ಯಂತ ಹೆದ್ದಾರಿಗಳನ್ನು ತಡೆದು ಆಕ್ರೋಶ ವ್ಯಕ್ತ ಪಡಿಸಲು ನಿರ್ಧರಿಸಲಾಗಿದೆ ಇಂದು ನಡೆದ ಕಿಸಾನ್ ಮೋರ್ಚಾ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ