ಸಂಸತ್ ಕಲಾಪ ಬಲಿಪಡೆದ ಮಣಿಪುರ ಹಿಂಸಾಚಾರ

ನವದೆಹಲಿ,ಆ.೧೧- ಮಣಿಪುರ ಹಿಂಸಾಚಾರ ಪ್ರಕರಣ ಸಂಸತ್ತಿನ ಮುಂಗಾರು ಅಧಿವೇಶನವನ್ನು ಸಂಪೂರ್ಣ ಬಲಿ ತೆಗೆದುಕೊಂಡಿದೆ. ಅಧಿವೇಶನ ಆರಂಭವಾದಾಗಿನಿಂದ ಧರಣಿ, ಗದ್ದಲ, ಗಲಾಟೆ, ಪ್ರಧಾನಿ ನರೇಂದ್ರ ಮೋದಿ ಹೇಳಿಕೆ ನೀಡಬೇಕು ಎನ್ನುವ ಹೋರಾಟವೇ ಪ್ರಧಾನವಾಗಿತ್ತು.
ಜುಲೈ ೨೦ ರಂದು ಸಂಸತ್ತಿನ ಮುಂಗಾರು ಅಧಿವೇಶನ ಆರಂಭವಾದಾಗಿನಿಂದ ಇಂದು ಅಂತ್ಯಗೊಳ್ಳುವ ತನಕ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ “ ನೀ ಕೊಡೆ ನಾ ಬಿಡೆ” ಎನ್ನುವಂತೆ ಆಡಳಿತ ಮತ್ತು ಪ್ರತಿಪಕ್ಷಗಳ ಸದಸ್ಯರ ನಡುವೆ ಜಗ್ಗ ಜಗ್ಗಾಟ ನಡೆದು ಕಲಾಪ ಅನಿರ್ಧಿಷ್ಟಾವಧಿಗೆ ಸಂಜೆ ಮುಂದೂಡುವ ಹಂತಕ್ಕೆ ಬಂದಿದೆ.
ವಿರೋಧ ಪಕ್ಷಗಳ ಮೈತ್ರಿಕೂಟ ಇಂಡಿಯಾ ಸದಸ್ಯರು ಮಣಿಪುರ ವಿಷಯವನ್ನು ಮುಂದಿಟ್ಟುಕೊಂಡು ಸಂಸತ್ತಿನ ಉಭಯ ಸದನಗಳಲ್ಲಿ ಗದ್ದಲ ಗಲಾಟೆ ನಡೆಸಿದರೂ ಯಾವುದಕ್ಕೂ ಸೊಪ್ಪು ಹಾಕದೆ ಆಡಳಿತ ಪಕ್ಷ ತಮಗೆ ಇಷ್ಟ ಬಂದಂತೆ ಹಾಗು ತಾನು ಅಂದುಕೊಂಡಂತೆ ಕಲಾಪ ನಡೆಸಿದೆ.
ಈ ನಡುವೆ ವಿರೋಧ ಪಕ್ಷಗಳ ಮೈತ್ರಿಕೂಟದ ಸದಸ್ಯರು ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಮಂಡಿಸಿದ್ದ ಅವಿಶ್ವಾಸ ನಿರ್ಣಯಕ್ಕೆ ಸೋಲಾಗಿದೆ. ಈ ಮೂಲಕ ಆಡಳಿತಾರೂಢ ಬಿಜೆಪಿ ಸದಸ್ಯರು ಮತ್ತೆ ನಾವೇ ಅಧಿಕಾರಕ್ಕೆ ಬರುವುದು ಎಂದು ಬೀಗುತ್ತಿದ್ದಾರೆ.
ಈ ನಡುವೆ ಲೋಕಸಭೆಯಲ್ಲಿ ಸಚಿವ ಹೇಳಿಕೆಗೆ ಅಡ್ಡಿಪಡಿಸಿದ ಆರೋಪ ಹಿನ್ನೆಲೆಯಲ್ಲಿ ಲೋಕಸಭೆಯಲ್ಲಿನ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಅವನ್ನು ಲೋಕಸಭಾಧ್ಯಕ್ಷರು ಒಂದು ದಿನದ ಮಟ್ಟಿಗೆ ಸದನದ ಕಲಾಪದಲ್ಲಿ ಭಾಗವಹಿಸುವುದಕ್ಕೆ ನಿರ್ಬಂಧ ಹೇರಿ ಅಮಾನತ್ತು ಮಾಡಿದ್ದಾರೆ.
ಆನ್‌ಲೈನ್ ಗೇಮಿಂಗ್, ಕ್ಯಾಸಿನೋಗಳು ಮತ್ತು ಕುದುರೆ ರೇಸಿಂಗ್‌ಗಳಿಗೆ ಶೇ.೨೮ ರಷ್ಟು ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವಿಧಿಸಲು ಲೋಕಸಭೆಯಲ್ಲಿ ಶಾಸನವನ್ನು ಮಂಡಿಸಲು ಕೇಂದ್ರ ಸಜ್ಜಾಗಿದೆ.

ರಾಹುಲ್ ಮತ್ತೆ ಸಂಸತ್ತಿಗೆ
“ಮೋದಿ ಉಪನಾಮ” ಪ್ರಕರಣದಲ್ಲಿ ಶಿಕ್ಷೆಗೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿದ ನಂತರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಂಸತ್ತಿನ ಸದಸ್ಯರಾಗಿ ಮರಳಿದ್ದರು. ಈ ಬಾರಿಯ ಅಧಿವೇಶನದ ವಿಶೇಷತೆಗಳಲ್ಲಿ ಒಂದಾಗಿದೆ.
ರಾಜ್ಯಸಭೆಯಲ್ಲಿ ಮಂಡಿಸಲಾದ ಮುಖ್ಯ ಚುನಾವಣಾ ಆಯುಕ್ತರು ಮತ್ತು ಇತರ ಚುನಾವಣಾ ಆಯುಕ್ತರು (ನೇಮಕಾತಿ, ಸೇವೆಗಳ ಷರತ್ತುಗಳು ಮತ್ತು ಅಧಿಕಾರದ ಅವಧಿ) ಮಸೂದೆ, ೨೦೨೩ರಲ್ಲಿ ದೇಶದ ಉನ್ನತ ಚುನಾವಣಾ ಅಧಿಕಾರಿಗಳನ್ನು ನೇಮಿಸುವ ಪ್ರಕ್ರಿಯೆಯಿಂದ ಭಾರತದ ಮುಖ್ಯ ನ್ಯಾಯಮೂರ್ತಿ ಅವರನ್ನು ಹೊರಗಿಡಲು ಮಸೂದೆ ಮಂಡಿಸಲಾಗಿದೆ.